ಬುಧವಾರ, ಏಪ್ರಿಲ್ 14, 2021
31 °C

681 ಕೆ.ಜಿ ಗಾಂಜಾ ಜಪ್ತಿ: ಎಂಟು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಮಾದಕ ವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು, ಫೆ. 24ರಂದು ಡ್ರಗ್ಸ್ ಜಾಲವೊಂದನ್ನು ಭೇದಿಸಿದ್ದಾರೆ. ಜಾಲದಲ್ಲಿದ್ದ ಎಂಟು ಮಂದಿಯನ್ನು ಬಂಧಿಸಿ, 681 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.

‘ಎಸ್‌.ಪವಾರ್, ವಿ. ಪವಾರ್, ಬಿ. ವಾರೆ, ಎಂ.ಧೋತ್ರೆ, ಡಿ. ದೇಶಮುಖ್, ಆರ್. ಗುಂಜಳ, ಎ. ಗಾಂಧಿ ಹಾಗೂ ಎಸ್‌. ಸನಪ್ ಬಂಧಿತರು. ಇವರೆಲ್ಲರೂ ಗುಂಪು ಕಟ್ಟಿಕೊಂಡು ಹಲವು ತಿಂಗಳಿನಿಂದ ಡ್ರಗ್ಸ್ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಹೈದರಾಬಾದ್ ಉಪ ವಲಯದ ಅಧಿಕಾರಿಗಳ ತಂಡವು ಆರೋಪಿಗಳನ್ನು ಬಂಧಿಸಿದೆ’ ಎಂದು ಎನ್‌ಸಿಬಿ ಬೆಂಗಳೂರು ವಲಯ ನಿರ್ದೇಶಕ ಅಮಿತ್ ಘಾವಟೆ ತಿಳಿಸಿದ್ದಾರೆ.

‘ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಗಾಂಜಾ ಖರೀದಿ ಮಾಡುತ್ತಿದ್ದ ಆರೋಪಿಗಳು, ಅದನ್ನೇ ಮಹಾರಾಷ್ಟ್ರ ಹಾಗೂ ಇತರೆಡೆ ಸರಬರಾಜು ಮಾಡುತ್ತಿದ್ದರು. ಅದೇ ಗಾಂಜಾವನ್ನು ಕೆಲ ಏಜೆಂಟರು ಮಾರಾಟ ಮಾಡುತ್ತಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಕಂಪನಿಗಳ ಉದ್ಯೋಗಿಗಳು ಹಾಗೂ ಕೆಲ ಕೂಲಿ ಕಾರ್ಮಿಕರು ಆರೋಪಿಗಳ ಬಳಿ ಗಾಂಜಾ ಖರೀದಿ ಮಾಡುತ್ತಿದ್ದ ಮಾಹಿತಿ ಇದೆ’ ಎಂದೂ ಹೇಳಿದ್ದಾರೆ.

‘ಪಾರ್ಸೆಲ್ ರೀತಿಯಲ್ಲಿ ಗಾಂಜಾವನ್ನು ಪೊಟ್ಟಣದಲ್ಲಿ ತುಂಬುತ್ತಿದ್ದ ಆರೋಪಿಗಳು, ತಮ್ಮದೇ ಸ್ವಂತ ವಾಹನದಲ್ಲಿ ಸಾಗಣೆ ಮಾಡುತ್ತಿದ್ದರು. ಅದನ್ನು ಪತ್ತೆ ಮಾಡಲು ಫೆ. 24ರಂದು ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸಲಾಯಿತು. ಅದೇ ವೇಳೆ ಆರೋಪಿಗಳು ಸಿಕ್ಕಿಬಿದ್ದರು. ಅವರ ವಾಹನಗಳನ್ನೂ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು