ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ನಾಡರು ಭಾಷಾಂತರಿಸಿದ್ದು ನುಡಿಯಲ್ಲ, ನಾಡಿ’

‘ಅನುವಾದಕರಾಗಿ ಗಿರೀಶ ಕಾರ್ನಾಡ’ ಸಂವಾದ
Last Updated 26 ಜುಲೈ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು:‘ಬಹುಮಾಧ್ಯಮವಾಗಿರುವ ನಾಟಕ ಕಲೆಯ ಎಲ್ಲ ವಿಭಾಗಗಳ ಮೇಲೆ ಗಿರೀಶ ಕಾರ್ನಾಡರಿಗೆ ಹಿಡಿತವಿತ್ತು. ಭಾಷಾಂತರ ಹೇಗಿರಬೇಕೆಂಬ ಖಚಿತ ಅರಿವು ಅವರಿಗಿತ್ತು. ಹೀಗಾಗಿಯೇ, ಕಾರ್ನಾಡರು ಅನುವಾದಿಸಿದ್ದು ನುಡಿಯಲ್ಲ, ನಾಡಿ ಎಂದು ಕಾರಂತರು ಪ್ರಶಂಸಿಸಿದ್ದರು’ ಎಂದು ಲೇಖಕಿ ವನಮಾಲಾ ವಿಶ್ವನಾಥ್‌ ಸ್ಮರಿಸಿದರು.

ಸಾಹಿತ್ಯ ಅಕಾಡೆಮಿಯ ‘ಶಬ್ದನಾ’ ಭಾಷಾಂತರ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅನುವಾದಕರಾಗಿ ಗಿರೀಶ ಕಾರ್ನಾಡ’ ಕುರಿತು ಮಾತನಾಡಿದ ಅವರು, ‘ಅನುವಾದಿತ ಕೃತಿಗಳನ್ನು ಹೇಗೆ ನೋಡಬೇಕು ಎಂಬುದನ್ನು ಕಾರ್ನಾಡರ ಕೃತಿಗಳು ನಮಗೆ ತಿಳಿಸುತ್ತವೆ’ ಎಂದರು.

‘ಕಾರ್ನಾಡರು ಹುಟ್ಟಿದ್ದು ಬಹುಭಾಷಿಕ ಪರಿಸರದಲ್ಲಿ. ಭಾಷಾ ಸೂಕ್ಷ್ಮತೆಯ ಮನಸು ಅವರಿಗೆ ದತ್ತವಾಗಿ ಬಂದಿತ್ತು.ಭಾಷೆ – ಭಾಷೆ ನಡುವಿನ ಅನುವಾದ ಹಾಗೂ ಒಂದೇ ಭಾಷೆಯ ವಿವಿಧ ಶೈಲಿಗಳ ನಡುವಿನ ಅನುವಾದ ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆ ಅವರಿಗಿತ್ತು’ ಎಂದು ಅವರು ಹೇಳಿದರು.

‘ಚರಿತ್ರೆ, ಪುರಾಣ ಮತ್ತು ಜನಪದದಿಂದ ತಮಗೆ ಬೇಕಾದ ವಸ್ತುವನ್ನು ಆಯ್ಕೆ ಮಾಡಿಕೊಂಡು, ಆ ವಸ್ತುವಿಗೆ ತಮ್ಮದೇ ಆದ ನವ್ಯತೆಯ ಛಾಪು ಒತ್ತಿದವರು ಕಾರ್ನಾಡರು. ಸ್ಥಳೀಯ ಅಂಶಗಳು ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಗುರುತಿಸಿಕೊಳ್ಳುವಲ್ಲಿ ಅವರ ಅನುವಾದದ ಕೊಡುಗೆ ಅಪಾರ’ ಎಂದು ಅವರು ಅಭಿಪ್ರಾಯಪಟ್ಟರು.

‘ಕನ್ನಡದ ಆಡುಭಾಷೆಯಲ್ಲಿನ ಹಾಡುಗಳನ್ನು ಇಂಗ್ಲಿಷ್‌ಗೆ ಅನುವಾದಿಸುವುದು ತುಂಬಾ ಕಷ್ಟ. ಹೀಗಾಗಿ, ಇಂತಹ ಹಾಡುಗಳನ್ನು ಪದಶಃ ಭಾಷಾಂತರಿಸದೆ, ಅದರ ವಸ್ತು ಏನು ಎಂಬುದನ್ನು ಅವರು ಗೊತ್ತಾಗುವಂತೆ ಮಾಡಿದ್ದಾರೆ. ಮೂಲವಸ್ತುವಿಗೆ ಧಕ್ಕೆ ಬಾರದಂತೆ, ಅದನ್ನು ಪ್ರೇಕ್ಷಕರಿಗೆ ತಲುಪಿಸುವ ಜವಾಬ್ದಾರಿಯನ್ನು ಅವರು ಪ್ರದರ್ಶಕರಿಗೇ ಬಿಟ್ಟಿದ್ದಾರೆ’ ಎಂದು ವನಮಾಲಾ ಹೇಳಿದರು.

13 ನಾಟಕಗಳನ್ನು ಬರೆದಿರುವ ಗಿರೀಶ ಕಾರ್ನಾಡರು, ಅಷ್ಟನ್ನೂ ತಾವೇ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಮರಾಠಿಯ ಎರಡು ನಾಟಕಗಳನ್ನು ಕನ್ನಡಕ್ಕೆ, ಬಂಗಾಳಿಯ ಒಂದು ನಾಟಕವನ್ನು ಇಂಗ್ಲಿಷ್‌ಗೆ ಅವರು ಅನುವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT