ಭಾನುವಾರ, ಜನವರಿ 26, 2020
23 °C

ವಿಶ್ವಕರ್ಮ ವಿಶ್ವವಿದ್ಯಾಲಯಕ್ಕೆ ಅನುದಾನ: ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಶ್ವಕರ್ಮ ವಿಶ್ವವಿದ್ಯಾಲಯ ತೆರೆಯಲು 15 ಎಕರೆ ಜಮೀನು ಮತ್ತು ₹10 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ಸಾಹಿತಿ ‌ಡಾ. ಚಂದ್ರಶೇಖರ ಕಂಬಾರ ಅವರು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿದರು.

ಪಂಚಶಿಲ್ಪ ಕುಲಕಸುಬು ಮತ್ತು ಆಧುನಿಕ ಎಂಜಿನಿಯರಿಂಗ್ ತಂತ್ರಜ್ಞಾನ ಸಮನ್ವಯಗೊಂಡರೆ ದೇಸಿ ಶಿಕ್ಷಣವನ್ನು ವಿಶ್ವದೆಲ್ಲೆಡೆ ವ್ಯಾಪಿಸುವಂತೆ ಮಾಡಬಹುದು. ಉಡುಪಿ ಜಿಲ್ಲೆಯ ಕುತ್ಯಾರು ಗ್ರಾಮದಲ್ಲಿ ಆನೆಗುಂದಿ ಮಹಾಸಂಸ್ಥಾನವು 10 ಎಕರೆ ಜಮೀನು ಹೊಂದಿದೆ. ಇದಕ್ಕೆ ಸಮೀಪದಲ್ಲೇ ಇರುವ ಸರ್ವೆ ನಂಬರ್ 112, 238ನಲ್ಲಿರುವ ಸರ್ಕಾರಿ ಭೂಮಿಯಲ್ಲಿ ಕನಿಷ್ಠ 15 ಎಕರೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

‘ಭಾರತದ ವಿಶ್ವಕರ್ಮರ ಪಾರಂಪರಿಕ ವಿದ್ಯಯನ್ನು ವಿದೇಶಿಯರು ಆಸಕ್ತಿ ವಹಿಸಿ ಅಧ್ಯಯನ ನಡೆಸುತ್ತಿದ್ದಾರೆ. ಸ್ವದೇಶದಲ್ಲಿ ನಮ್ಮ ವಿದ್ಯೆಗಳು ನಾಶವಾಗುತ್ತಿದೆ. ಈ ಕೌಶಲವನ್ನು ಮುಂದಿನ ಪೀಳಿಗೆಗೆ ವೈಜ್ಞಾನಿಕವಾಗಿ ವರ್ಗಾಯಿಸುವ ಅಗತ್ಯವಿದೆ’ ಎಂದು ಹೇಳಿದರು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ‘ವಿಶ್ವಕರ್ಮ ವಿಶ್ವವಿದ್ಯಾಲಯಕ್ಕೆ ಅನುದಾನ ಮತ್ತು ಜಾಗ ಮಂಜೂರು ಮಾಡುವ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

‘ಪೌರತ್ವದ ಬಗ್ಗೆ ಗಂಭೀರ ಆಲೋಚನೆ ಅಗತ್ಯ’

‘ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಈ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಕೂಡ ಮಾತನಾಡಿದ್ದರು’ ಎಂದು ಚಂದ್ರಶೇಖರ ಕಂಬಾರ ಹೇಳಿದರು.

ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಅಭಿಯಾನದ ಅಂಗವಾಗಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಕಂಬಾರರನ್ನು ಭಾನುವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಂಬಾರ, ‘ನೆಹರೂ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದು ನನಗೆ ಗೊತ್ತಿದೆ. ಹೀಗಾಗಿ, ನಾವು ಗಂಭೀರವಾಗಿ ಆಲೋಚನೆ ಮಾಡಬೇಕಿದೆ’ ಎಂದರು.

‘ಸಿಎಎ ಬೆಂಬಲಿಸಿ ಪ್ರಧಾನಿಗೆ ಪತ್ರ ಬರೆಯುವುದಿಲ್ಲ. ನಾನು ಅವರನ್ನು ಸಮರ್ಥನೆ ಮಾಡುತ್ತಿಲ್ಲ. ಆದರೆ, ನಮ್ಮನ್ನು ನಾವು ಪರಿವರ್ತನೆ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.‌

ಇದೇ ವೇಳೆ ಅಶ್ವತ್ಥನಾರಾಯಣ ಅವರು ಮನೆಮನೆಗೆ ಭೇಟಿ ನೀಡಿ ಸಿಎಎ ಬಗ್ಗೆ ಜಾಗೃತಿ ಮೂಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು