ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಸರ ಕದ್ದೇ ಫ್ಲ್ಯಾಟ್ ಖರೀದಿಸಿದ!

Last Updated 31 ಡಿಸೆಂಬರ್ 2018, 19:25 IST
ಅಕ್ಷರ ಗಾತ್ರ

ಬೆಂಗಳೂರು: ಬಸ್‌ ಹಾಗೂ ದೇವಸ್ಥಾನಗಳಲ್ಲಿ ಮಹಿಳೆಯರ ಚಿನ್ನದ ಸರಗಳನ್ನು ಕಳವು ಮಾಡಿಯೇ ಅನಂತಪುರದಲ್ಲಿ ಫ್ಲ್ಯಾಟ್ ಖರೀದಿಸಿದ್ದ ವೆಂಕಟೇಶ ಅಲಿಯಾಸ್ ಜಲ್ಲೋಡ್ (32) ಎಂಬಾತನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಕಳವು ಮಾಡಲೆಂದೇ ತಿಂಗಳಿಗೊಮ್ಮೆ ನಗರಕ್ಕೆ ಬರುತ್ತಿದ್ದ ವೆಂಕಟೇಶ್, ಹೊರವಲಯದ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ. ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲೇ 11 ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿದ್ದ ಈತನನ್ನು, ಡಿ.20ರಂದು ಅನಂತಪುರದಲ್ಲಿ ಬಂಧಿಸಲಾಯಿತು. ಆರೋಪಿಯಿಂದ ₹ 15.28 ಲಕ್ಷ ಮೌಲ್ಯದ 550 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಮಹಿಳೆಯರೇ ಟಾರ್ಗೆಟ್: ಬೆಳಿಗ್ಗೆ 6 ಗಂಟೆಗೇ ಕಳವು ಕಾರ್ಯಾಚರಣೆಗೆ ಇಳಿಯುತ್ತಿದ್ದ ವೆಂಕಟೇಶ್, ಪ್ರಯಾಣಿಕರು ತುಂಬಿ ತುಳುಕುವ ಬಿಎಂಟಿಸಿ ಬಸ್‌ಗಳನ್ನು ಹತ್ತುತ್ತಿದ್ದ. ನೂಕು–ನುಗ್ಗಲಿನಲ್ಲಿ ಮಹಿಳೆಯರ ಸರ ಬಿಚ್ಚಿಕೊಂಡು, ಮುಂದಿನ ನಿಲ್ದಾಣದಲ್ಲೇ ಇಳಿದು ಹೋಗುತ್ತಿದ್ದ. ಅದೇ ರೀತಿ, ಹಬ್ಬದ ದಿನಗಳಲ್ಲಿ ದೇವಸ್ಥಾನಗಳಿಗೆ ಹೋಗಿ
ಭಕ್ತರ ಆಭರಣ ಎಗರಿಸುತ್ತಿದ್ದ ಎಂದು ತಿಳಿಸಿದರು.

ತಿಗಳರಪಾಳ್ಯ ನಿವಾಸಿ ಶಾರದಮ್ಮ ಅವರು ಅ.24ರಂದು ಬಸವೇಶ್ವರನಗರದ ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಅಲ್ಲೇ ಇದ್ದ ವೆಂಕಟೇಶ್, ಪೂಜೆ ಸಮಯದಲ್ಲಿ ನೂಕು ನುಗ್ಗಲು ಉಂಟಾದಾಗ ಶಾರದಮ್ಮ ಅವರ ಕುತ್ತಿಗೆಯಿಂದ 20 ಗ್ರಾಂನ ಸರ ಕಿತ್ತುಕೊಂಡು ಹೋಗಿದ್ದ. ಈ ಸಂಬಂಧ ಅವರು ಬಸವೇಶ್ವರನಗರ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ದೇವಸ್ಥಾನದ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಆತನ ಚಹರೆ ಸಿಕ್ಕಿತ್ತು.

‘ವೆಂಕಟೇಶ್ ಹತ್ತು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದರೂ, ಒಮ್ಮೆಯೂ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ. ಈ ಕಾರಣದಿಂದಲೇ ಚಹರೆಯನ್ನು ರಾಜ್ಯದ ಎಲ್ಲ ಠಾಣೆಗಳಿಗೂ ಕಳುಹಿಸಿದರೂ, ಆತನ ಬಗ್ಗೆ ಸಣ್ಣ ಸುಳಿವೂ ಲಭ್ಯವಾಗಲಿಲ್ಲ. ನಂತರ ತಮಿಳುನಾಡು ಹಾಗೂ ಆಂಧ್ರಪ್ರದೇಶ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಂಡಾಗ ವೆಂಕಟೇಶ್ ಅನಂತಪುರದವನು ಎಂಬುದು ಗೊತ್ತಾಯಿತು. ಕೂಡಲೇ ವಿಶೇಷ ತಂಡವೊಂದನ್ನು ಅಲ್ಲಿಗೆ ಕಳುಹಿಸಿ, ಆರೋಪಿಯನ್ನು ಪತ್ತೆ ಮಾಡಿದೆವು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವೆಂಕಟೇಶ್ ವಿರುದ್ಧ ಬೆಂಗಳೂರಿನಲ್ಲಿ ಮಾತ್ರವಲ್ಲದೆ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲೂ ಪ್ರಕರಣಗಳು ದಾಖಲಾಗಿವೆ. ಕದ್ದ ಒಡವೆಗಳನ್ನು ಪರಿಚಿತ ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ಈತ, ಅನಂತಪುರದಲ್ಲಿ ₹ 85 ಲಕ್ಷ ಮೌಲ್ಯದ ಫ್ಲ್ಯಾಟ್ ಕೂಡ ಖರೀದಿಸಿದ್ದಾನೆ’ ಎಂದು ಮಾಹಿತಿ ನೀಡಿದರು.

ಗ್ಯಾಂಗ್ ಲೀಡರ್

‘ಬಸ್, ದೇವಸ್ಥಾನಗಳಲ್ಲಿ ಮಾತ್ರವಲ್ಲದೇ ವೆಂಕಟೇಶ್ ಮನೆಗಳ ಹತ್ತಿರವೂ ಹೋಗಿ ಸರ ಕದಿಯುತ್ತಿದ್ದ. ಯಾರಾದರೂ ಕಿಟಕಿ ತೆರೆದು ಮಲಗಿದ್ದರೆ, ಕಿಟಕಿ ಮೂಲಕವೇ ಕೈ ಹಾಕಿ ಸರ ಕಿತ್ತುಕೊಳ್ಳುತ್ತಿದ್ದ. ಕಳ್ಳತನ ಮಾಡುವುದಕ್ಕಾಗಿಯೇ ಅನಂತಪುರದಲ್ಲಿ ಗ್ಯಾಂಗ್ ಕಟ್ಟಿದ್ದ ವೆಂಕಟೇಶ್, ಆ ಗುಂಪಿನ ನಾಯಕನಾಗಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT