ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ವಜ್ರ, ಚಿನ್ನದ ಆಭರಣ ಕದ್ದಿದ್ದ ಮನೆ ಕೆಲಸದಾಕೆಯ ಬಂಧನ

Published : 13 ಸೆಪ್ಟೆಂಬರ್ 2024, 15:57 IST
Last Updated : 13 ಸೆಪ್ಟೆಂಬರ್ 2024, 15:57 IST
ಫಾಲೋ ಮಾಡಿ
Comments

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ವಜ್ರ ಹಾಗೂ ಚಿನ್ನದ ಆಭರಣ ಕಳ್ಳತನ ಮಾಡಿದ್ದ ಮನೆ ಕೆಲಸದಾಕೆಯನ್ನು ವೈಟ್‌ಫೀಲ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಪಿಂಕಿ ದಾಸ್‌ ಬಂಧಿತ ಆರೋಪಿ.

ಆರೋಪಿಯಿಂದ ₹53.50 ಲಕ್ಷ ಮೌಲ್ಯದ 13 ಗ್ರಾಂ. ವಜ್ರ ಹಾಗೂ 570 ಗ್ರಾಂ. ಚಿನ್ನದ ಆಭರಣ, 470 ಗ್ರಾಂ. ಬೆಳ್ಳಿಯ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

‘ಠಾಣಾ ವ್ಯಾಪ್ತಿಯ ವಿಲ್ಲಾವೊಂದರಲ್ಲಿ ಆರೋಪಿ ಮಹಿಳೆ ಕೆಲಸಕ್ಕಿದ್ದರು. ಆರು ತಿಂಗಳ ಹಿಂದೆ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮನೆಯಲ್ಲಿದ್ದ ಕಪಾಟುವಿನಲ್ಲಿ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಮಾಲೀಕರು ಇಟ್ಟಿದ್ದರು. ಅದನ್ನು ಗಮನಿಸಿದ್ದ ಆರೋಪಿ ಕಳ್ಳತನ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ವಿಲ್ಲಾ ಮಾಲೀಕರು ಮನೆಯ ಕೆಲಸದಾಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ, ದೂರು ನೀಡಿದ್ದರು. ದೂರು ಆಧರಿಸಿ ಗಾಂಧಿಪುರದ ಓಂಶಕ್ತಿ ದೇವಸ್ಥಾನ ಬಳಿಯ ಮನೆಯಲ್ಲಿದ್ದ ಪಿಂಕಿ ದಾಸ್‌ ಅವರನ್ನು ವಶಕ್ಕೆ ಪಡೆದು ಬಂಧಿಸಲಾಯಿತು. ಆಕೆ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಚಿನ್ನದ ಆಭರಣಗಳನ್ನು ಬಿಹಾರಕ್ಕೆ ಸಾಗಣೆ ಮಾಡಲು ಆರೋಪಿ ಯೋಜನೆ ರೂಪಿಸಿದ್ದರು. ಅಷ್ಟರಲ್ಲಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಚಿನ್ನಾಭರಣ ಕಳ್ಳತನ:  ರಾತ್ರಿ ವೇಳೆ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ರವಿ(27) ಹಾಗೂ ಮೈಸೂರಿನ ಅರುಣ್‌(19) ಬಂಧಿತರು.

ಬಂಧಿತರಿಂದ ₹31.10 ಲಕ್ಷ ಮೌಲ್ಯದ 478 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಅಲ್ಲದೇ ಆರೋಪಿಗಳ ಬಳಿ 200 ಗ್ರಾಂ. ನಕಲಿ ಚಿನ್ನಾಭರಣ ಇತ್ತು. ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಠಾಣಾ ವ್ಯಾಪ್ತಿಯ ಶ್ರೀನಗರದ ಮನೆಯೊಂದರಲ್ಲಿ ಇಬ್ಬರು ಆರೋಪಿಗಳು ಕಳ್ಳತನ ಮಾಡಿದ್ದರು. ಬೆಳಿಗ್ಗೆ ಮನೆ ಬಾಗಿಲು ಸ್ವಚ್ಛಗೊಳಿಸಿದ ಬಳಿಕ ಚಿಲಕವನ್ನು ಹಾಕಿರಲಿಲ್ಲ. ಚಿನ್ನದ ಸರವನ್ನು ಹಾಸಿಗೆ ಮೇಲೆ ಇಟ್ಟು ಮಾಲೀಕರು ಸ್ನಾನಕ್ಕೆ ತೆರಳಿದ್ದರು. ಅದೇ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಮೈಸೂರು ನಗರದ ವಿವಿಧ ಚಿನ್ನದ ಮಾರಾಟ ಅಂಗಡಿ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟಿದ್ದ 236.27 ಗ್ರಾಂ. ಚಿನ್ನಾಭರಣ ಹಾಗೂ ಮಂಡ್ಯದ ಚಿನ್ನ ಮಾರಾಟ ಅಂಗಡಿಗಳಲ್ಲಿ ಅಡವಿಟ್ಟಿದ್ದ 144 ಗ್ರಾಂ. ಚಿನ್ನಾಭರಣ ಹಾಗೂ ಎರಡು ಕೈಗಡಿಯಾರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT