ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ್ ಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಗೌರಿ ಲಂಕೇಶ್ ಹತ್ಯೆ ಪ್ರಕರಣ
Last Updated 21 ಜೂನ್ 2018, 18:51 IST
ಅಕ್ಷರ ಗಾತ್ರ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಜೂನ್ 26ಕ್ಕೆ ಮುಂದೂಡಿದೆ.‌

‘ಇದೊಂದು ಗಂಭೀರ ಪ್ರಕರಣ. ನವೀನ್‌ಗೆ ಜಾಮೀನು ಮಂಜೂರು ಮಾಡಿದರೆ ಇತರೆ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ’ ಎಂದು ಎಸ್ಐಟಿ ಪರ ವಕೀಲರು ಜಾಮೀನು ಅರ್ಜಿಗೆ ಗುರುವಾರ ತಕರಾರು ಸಲ್ಲಿಸಿದರು. ಆನಂತರ ನ್ಯಾಯಾಧೀಶರು ಆರೋಪಿ ಪರ ವಕೀಲ ವೇದಮೂರ್ತಿ ಅವರಿಗೆ ವಾದ ಮಂಡಿಸಲು ಅವಕಾಶ ನೀಡಿದರು.

ಸುಮಾರು ಮುಕ್ಕಾಲು ತಾಸು ವಾದ ಮಂಡಿಸಿದ ವೇದಮೂರ್ತಿ, ‘ಮದ್ದೂರಿನ ತೋಟದ ಮನೆಯಲ್ಲಿ ನವೀನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ನೋಡಿದ್ದಾಗಿ ಶ್ರೀರಂಗಪಟ್ಟಣದ ಅನಿಲ್, ಗಿರೀಶ್ ಮತ್ತು ಅಭಿಷೇಕ್ ಎಂಬುವರು ಎಸ್‌ಐಟಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ಕೇವಲ ಆ ಮೂವರ ಹೇಳಿಕೆಗಳನ್ನಷ್ಟೇ ಆಧರಿಸಿ ನವೀನ್‌ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ’ ಎಂದರು.

‘ಈಗಾಗಲೇ ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ಶಿಕಾರಿಪುರದ ಸುಜಿತ್ ಅಲಿಯಾಸ್ ಪ್ರವೀಣ್ ಹಾಗೂ ವಿಜಯಪುರದ ಮನೋಹರ್ ಯಡವೆಯ ಬಂಧನವಾಗಿದೆ. ಎಸ್‌ಐಟಿ ಅಧಿಕಾರಿಗಳು ಆ ನಾಲ್ವರನ್ನು 15 ದಿನ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡು ಈಗ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಆದರೆ, ಇದುವರೆಗೂ ಸಾಕ್ಷಿಗಳನ್ನು ಕರೆಸಿ ಆರೋಪಿಗಳ ಗುರುತು ಪತ್ತೆ ಪ್ರಕ್ರಿಯೆ (ಐಡೆಂಟಿಫಿಕೇಷನ್ ಪರೇಡ್) ಮಾಡಿಸಿಲ್ಲ.’

‘ಗೌರಿ ಹತ್ಯೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿರುವ ಎಸ್‌ಐಟಿ, ನವೀನ್ ಮಾಡಿರುವ ಅಪರಾಧ ಏನು ಎಂಬುದನ್ನು ಅದರಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಹಂತಕರಿಗೆ ಗುಂಡುಗಳನ್ನು ಪೂರೈಸಿದ್ದಾನೆ ಎಂದು ಒಂದು ಕಡೆ ಹೇಳಿದರೆ, ಮತ್ತೊಂದು ಕಡೆ ಗುಂಡುಗಳನ್ನು ಖರೀದಿಸಲು ಓಡಾಡುತ್ತಿದ್ದ ಎಂದು ಹೇಳಲಾಗಿದೆ.’

‘ನವೀನ್‌ನನ್ನು ಮೊದಲು ಸಾಹಿತಿ ಭಗವಾನ್ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ನ್ಯಾಯಾಲಯ ಈಗಾಗಲೇ ಜಾಮೀನು ಮಂಜೂರು ಮಾಡಿದೆ. ಹೀಗಾಗಿ, ಯಾವುದೇ ಖಚಿತ ಸಾಕ್ಷ್ಯಗಳಿಲ್ಲದ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಆತನಿಗೆ ಜಾಮೀನು ನೀಡಬೇಕು’ ಎಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು, ಜೂನ್ 26ಕ್ಕೆ ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT