ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವೇಷ ಭಾಷಣದಿಂದ ಕಾನೂನು-ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರವೇ ಹೊಣೆ: ರವಿಕುಮಾರ್

Published 19 ಆಗಸ್ಟ್ 2024, 16:10 IST
Last Updated 19 ಆಗಸ್ಟ್ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ಸಂವಿಧಾನಾತ್ಮಕ ಹುದ್ದೆಯಲ್ಲಿರುವ ರಾಜ್ಯಪಾಲರ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ‘ರಾಜ್ಯಪಾಲರು ನಾಲಾಯಕ್’, ‘ಬಿಜೆಪಿ ಏಜೆಂಟ್’, ‘ನಾಲಾಯಕ್ ರಾಜ್ಯಪಾಲರಿಗೆ ಧಿಕ್ಕಾರ’ ಹಾಗೂ ‘ರಾಜ್ಯದಲ್ಲಿ ಏನಾದ್ರು ಆದ್ರೆ ರಾಜ್ಯಪಾಲರೇ ಹೊಣೆ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್ ಮೊದಲಾದ ಪ್ರಮುಖರು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರು ‘ಬಾಂಗ್ಲಾದೇಶದಂತೆ ಅಲ್ಲಿನ ಪ್ರಧಾನಿ ಮನೆಗೆ ನುಗ್ಗಿ ಪ್ರತಿಭಟಿಸಿದಂತೆ ನಾವು ರಾಜಭವನಕ್ಕೆ ನುಗ್ಗಿ ಪ್ರತಿಭಟಿಸಿ, ರಾಜ್ಯದಿಂದ ರಾಜ್ಯಪಾಲರನ್ನು ಓಡಿಸುತ್ತೇವೆ’ ಎಂದು ದ್ವೇಷದ ಭಾಷಣ ಮಾಡಿದ್ದಾರೆ. ಈ ಉದ್ರೇಕಕಾರಿ ಹೇಳಿಕೆಯಿಂದ ಅಲ್ಲಿನ ಕೆಲ ಕಾಂಗ್ರೆಸ್ ಪುಡಾರಿಗಳು ಮಂಗಳೂರಿನಲ್ಲಿ ಖಾಸಗಿ ಬಸ್ಸುಗಳ ಮೇಲೆ ಕಲ್ಲುತೂರಾಟ ನಡೆಸಿ, ಟೈರುಗಳಿಗೆ ಬೆಂಕಿ ಹಚ್ಚಿ ಅಲ್ಲಿನ ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣರಾಗಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಈ ರೀತಿ ರಾಜ್ಯದ ಸಚಿವರು ಮತ್ತು ಶಾಸಕರು ಗೌರವಾನ್ವಿತ ರಾಜ್ಯಪಾಲರಿಗೆ ಬೆದರಿಕೆ, ರಾಜ್ಯಕ್ಕೆ ಬೆಂಕಿ ಹಚ್ಚುವ ಅವಹೇಳನಕಾರಿಯಾಗಿ, ದ್ವೇಷಪೂರಿತ ಭಾಷಣದಿಂದ ರಾಜ್ಯದಲ್ಲಿ ಏನಾದರೂ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ರವಿಕುಮಾರ್ ಅವರು ಎಚ್ಚರಿಸಿದ್ದಾರೆ.

ದಲಿತ ಕುಟುಂಬಕ್ಕೆ ಸೇರಿದ ಜಾಗವನ್ನೇ ಅಕ್ರಮವಾಗಿ ಕಬಳಿಸಿ, ಸೂರು ರಹಿತ ಬಡವರಿಗೆ ಅನ್ಯಾಯವೆಸಗಿ ಸಿಕ್ಕಿಬಿದ್ದಿರುವ ಸಿಎಂ ವಿರುದ್ಧ ಹಲವಾರು ದಾಖಲೆ, ಪುರಾವೆಗಳನ್ನು ಇಟ್ಟುಕೊಂಡೇ  ಸಾಂವಿಧಾನಿಕ ಹುದ್ದೆ ಹೊಂದಿರುವ  ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ. ಇದನ್ನು ಕಾಂಗ್ರೆಸ್ಸಿಗರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಮೈಸೂರು ಮುಡಾದಲ್ಲಿ ಸುಮಾರು 87 ಸಾವಿರಕ್ಕೂ ಹೆಚ್ಚು ಜನರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಹ, ಇವೆಲ್ಲವನ್ನೂ ಬಿಟ್ಟು ಪಾರ್ವತಿಯವರಿಗೆ ಹೇಗೆ 14 ನಿವೇಶನಗಳು ಲಭಿಸಿದವು? ಬೆಂಗಳೂರಿನ ಡಾಲರ್ಸ್ ಕಾಲೋನಿಯಂತೆ ಮೈಸೂರಿನ ವಿಜಯನಗರದ ಬಡಾವಣೆಯಲ್ಲಿ ಹೇಗೆ ಲಭಿಸಿದವು? ಇದರಲ್ಲಿ ಸಿಎಂ ಅವರ ಪ್ರಭಾವ, ಶಿಫಾರಸು ಇಲ್ಲವೇ? ಈ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಸುಮಾರು ₹187 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ತಾವೇ ಒಪ್ಪಿಕೊಂಡಿದ್ದೀರಿ ಈ ಬಗ್ಗೆ ತನಿಖೆ ಮಾಡಬಾರದೇ?  ಸಿದ್ದರಾಮಯ್ಯನವರನ್ನು ತನಿಖೆಗೆ ಒಳಪಡಿಸಬಾರದೇ? ಪ್ರಶ್ನೆ ಮಾಡಬಾರದೆ? ಇವರೇನು ಸಂವಿಧಾನ, ಕಾನೂನು ಮೀರಿ ಇದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT