ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಜಿ. ಹುನಗುಂದ ನೇಮಕ ರದ್ದು

Published 5 ಜನವರಿ 2024, 16:14 IST
Last Updated 5 ಜನವರಿ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಿ.ಜಿ. ಹುನಗುಂದ ಅವರನ್ನು ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಾಂಗ ಸದಸ್ಯರನ್ನಾಗಿ ನೇಮಿಸಿದ್ದ ಆದೇಶವನ್ನು ರದ್ದುಗೊಳಿಸಲಾಗಿದೆ.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಅಥವಾ ಸದಸ್ಯರಾಗಿ ಕಾರ್ಯನಿರ್ವಹಿಸಿದವರು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಯಾವುದೇ ಹುದ್ದೆಯನ್ನು ವಹಿಸಿಕೊಳ್ಳುವಂತಿಲ್ಲ. ಹುನಗುಂದ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದರು. ಆ ಹುದ್ದೆಯಿಂದ ನಿವೃತ್ತರಾದ ಬಳಿಕ ಭೂ ಕಬಳಿಕೆ ನಿಷೇಧ ನ್ಯಾಯಾಲಯಕ್ಕೆ ನೇಮಕಗೊಂಡಿದ್ದರು.

ಹುನಗುಂದ ಅವರು ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಮಾಹಿತಿಯನ್ನು ಮುಚ್ಚಿಟ್ಟು ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ನೇಮಕಗೊಂಡಿದ್ದಾರೆ ಎಂದು ದೂರಿ ವಕೀಲ ಎಸ್‌. ಉಮಾಪತಿ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಆರಂಭಿಸಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರ ಮತ್ತು ಹುನಗುಂದ ಅವರಿಗೆ ನೋಟಿಸ್‌ ಜಾರಿಮಾಡಿತ್ತು.

ನ್ಯಾಯಾಲಯ ನೋಟಿಸ್‌ ಜಾರಿಗೊಳಿಸಿದ ಬಳಿಕ ಹುನಗುಂದ ಅವರ ನೇಮಕಾತಿಯನ್ನು ರದ್ದುಗೊಳಿಸಿ ಕಂದಾಯ ಇಲಾಖೆಯು 2023ರ ಸೆಪ್ಟೆಂಬರ್‌ 21ರಂದು ಆದೇಶ ಹೊರಡಿಸಿತ್ತು. ಅದನ್ನು ಅರ್ಜಿದಾರ ವಕೀಲ ಉಮಾಪತಿ ಅವರಿಗೆ ಅಕ್ಟೋಬರ್‌ 10ರಂದು ಪತ್ರದ ಮೂಲಕ ತಿಳಿಸಲಾಗಿತ್ತು.

ಹುನಗುಂದ ಅವರ ನೇಮಕಾತಿಯನ್ನು ರದ್ದುಗೊಳಿಸಿರುವ ಮಾಹಿತಿಯನ್ನು ಕಂದಾಯ ಇಲಾಖೆ ಹಂಚಿಕೊಂಡಿರುವ ಕುರಿತು ಅರ್ಜಿದಾರರು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠಕ್ಕೆ ಶುಕ್ರವಾರ ಮೆಮೊ ಸಲ್ಲಿಸಿದರು. ಬಳಿಕ ನ್ಯಾಯಾಲಯವು ಪ್ರಕರಣವನ್ನು ವಿಲೇವಾರಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT