ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಕಾವೇರಿ ಹೋರಾಟವನ್ನು ಹತ್ತಿಕ್ಕುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 25 ಸೆಪ್ಟೆಂಬರ್ 2023, 15:26 IST
Last Updated 25 ಸೆಪ್ಟೆಂಬರ್ 2023, 15:26 IST
ಅಕ್ಷರ ಗಾತ್ರ

ಬೆಂಗಳೂರು: ‘ಬಂದ್‌, ಪ್ರತಿಭಟನೆ ನಡೆಸುವ ರೈತರು ಮತ್ತು ಕನ್ನಡ ಹೋರಾಟಗಾರರ ಹಕ್ಕನ್ನು ನಾನು ಗೌರವಿಸುತ್ತೇನೆ. ಅವರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರದ ಬೆಂಗಳೂರು ಬಂದ್‌ ಕರೆ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ರೈತರ ಆಕ್ರೋಶವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಇದೇ ಸಮಯದಲ್ಲಿ ಕೆಲವು ರಾಜಕೀಯ ನಾಯಕರು ತಪ್ಪು ಮಾಹಿತಿ ಮೂಲಕ ಜನರನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ’ ಎಂದಿದ್ದಾರೆ.

ರಾಜ್ಯದ ಪ್ರಜ್ಞಾವಂತ ರೈತ ಮತ್ತು ಕನ್ನಡ ಹೋರಾಟಗಾರರು ರಾಜಕೀಯ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಬಲಿಯಾಗಬಾರದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ಬಂದ್, ಪ್ರತಿಭಟನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಒಮ್ಮತದಿಂದ ರಾಜ್ಯದ ಪರ ಹೋರಾಟ ನಡೆಸುವ ಪರಂಪರೆ ಕರ್ನಾಟಕದಲ್ಲಿ ಇದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ಮೇಲಿದೆ ಎಂದು ಹೇಳಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್

ಸಂಪೂರ್ಣ ಬಂದ್‌ ಆಗಲೇಬೇಕು: ಬಿಎಸ್‌ವೈ

ಕಾವೇರಿ ನೀರಿಗಾಗಿ ಬೆಂಗಳೂರು ಬಂದ್‌ ನಡೆಸುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮಂಗಳವಾರ ಬೆಂಗಳೂರು ಸಂಪೂರ್ಣವಾಗಿ ಬಂದ್‌ ಆಗಲೇಬೇಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹೋಟೆಲ್‌ ಅಂಗಡಿ ಮುಂಗಟ್ಟುಗಳ ಮಾಲೀಕರು ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಬೇಕು. ಯಾರಾದರೂ ಬಾಗಿಲು ತೆರೆದು ವ್ಯವಹಾರ ನಡೆಸಲು ಪ್ರಯತ್ನಿಸಿದರೆ ಮುಂದಾಗುವ ತೊಂದರೆಗಳಿಗೆ ನೀವೇ ಹೊಣೆಯಾಗುತ್ತೀರಿ’ ಎಂದರು. ರಾಜ್ಯದ ಕಾಂಗ್ರೆಸ್‌ ನೇತೃತ್ವದ ಸರ್ಕಾರದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಕಣಿವೆಯ ಜಲಾಶಯಗಳಲ್ಲಿ 59 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದೆ. ಈಗ ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತಮಿಳುನಾಡಿನ ಏಜೆಂಟರಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಒಂದು ಹನಿ ನೀರು ಕೂಡ ತಮಿಳುನಾಡಿಗೆ ಹರಿಯದಂತೆ ತಡೆಯಬೇಕು ಎಂದು ಆಗ್ರಹಿಸಿದರು. ಬಂದ್‌ ಬೆಂಬಲಿಸಿ ಬಿಜೆಪಿ ಶಾಸಕರು ಮತ್ತು ಸಂಸದರು ವಿಧಾನಸೌಧದ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆಗೆ ಸಹಕಾರ: ಡಿಕೆಶಿ

‘ರಾಜ್ಯದ ಹಿತರಕ್ಷಣೆಗಾಗಿ ಪ್ರತಿಭಟನೆ ನಡೆಸಲು ನಾವು ಸಹಕಾರ ನೀಡುತ್ತೇವೆ. ಯಾವ ಹೋರಾಟಗಳಿಗೂ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ ಜನರಿಗೆ ತೊಂದರೆ ಆಗಬಾರದು’ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು ‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕಿದೆ. ನಾವು ಕೂಡ ನಮ್ಮ ಹಕ್ಕು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ನಮ್ಮ ಪಕ್ಷದವರೂ ಕೂಡ ಅಭಿಪ್ರಾಯ ಕೇಳಿದರು. ಹಕ್ಕು ಉಳಿಸಿಕೊಳ್ಳಲು  ಹೋರಾಟ ಮಾಡಿ ಎಂದು ತಿಳಿಸಿದ್ದೇವೆ’ ಎಂದರು. ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ತೀರ್ಪುಗಳಿವೆ. ಮಾಧ್ಯಮಗಳಲ್ಲಿ ಹೆಸರು ಪ್ರಕಟವಾಗುತ್ತದೆ ಎಂದು ಹೋರಾಟಕ್ಕೆ ಕರೆ ನೀಡಿದರೆ ಏನು ಲಾಭ? ನ್ಯಾಯಾಲಯದಿಂದ ಪ್ರತಿಕೂಲ ಪರಿಣಾಮಗಳಾಗುವ ಬಗ್ಗೆಯೂ ಯೋಚಿಸಬೇಕಲ್ಲವೆ ಎಂದು ಪ್ರಶ್ನಿಸಿದರು. ಹೋರಾಟದಿಂದ ಕಾನೂನು ತೊಂದರೆ ಉದ್ಭವಿಸುವುದಿಲ್ಲವೆ ಎಂಬ ಪ್ರಶ್ನೆಗೆ ‘ಮಂತ್ರಿಯಾಗಿ ನಾನು ಈ ಪ್ರಶ್ನೆಗೆ ಉತ್ತರ ಕೊಡಲು ಆಗುವುದಿಲ್ಲ. ನ್ಯಾಯಾಲಯ ಜನರ ಇಬ್ಬರಿಗೂ ಗೌರವ ನೀಡಬೇಕು. ಜನರು ಸಹಕಾರ ಕೊಡದಿದ್ದರೆ ‘ಬಂದ್‌’ಗೆ ಅರ್ಥವೇ ಇರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT