ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ನಡೆಗೆ ಖಂಡನೆ: ಎದ್ದೇಳು ಕರ್ನಾಟಕ ಸಂಘಟನೆ

Published 22 ಆಗಸ್ಟ್ 2024, 14:37 IST
Last Updated 22 ಆಗಸ್ಟ್ 2024, 14:37 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯಪಾಲರು ಪ್ರಜಾಪ್ರಭುತ್ವದ ಆಶಯವನ್ನು ಭಗ್ನಗೊಳಿಸಿ ಸಂವಿಧಾನ ವಿರೋಧಿಗಳಂತೆ ನಡೆದುಕೊಂಡಿರುವುದು ಖಂಡನೀಯ’ ಎಂದು ಎದ್ದೇಳು ಕರ್ನಾಟಕ ಸಂಘಟನೆ ಹೇಳಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಬಿ.ಟಿ. ಲಲಿತಾ ನಾಯಕ್, ಶ್ರೀಪಾದ್ ಭಟ್, ಎನ್. ವೆಂಕಟೇಶ್, ‘ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ರಾಜ್ಯ ವಿರೋಧಿ ಹಾಗೂ ಜನ ವಿರೋಧಿ ನಡೆಯನ್ನು ಖಂಡಿಸಬೇಕು. ದೇಶ ಒಡೆಯುವ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಜನಪರ ಆಡಳಿತ ನೀಡುವ ಮೂಲಕ ವಿರೋಧ ಪಕ್ಷಗಳ ಸಂಚುಗಳನ್ನು ವಿಫಲಗೊಳಿಸಬೇಕು’ ಎಂದು ಆಗ್ರಹಿಸಿದರು.

‘ನ್ಯಾಯಾಲಯವು ರಾಜ್ಯಪಾಲರ ಕೀಳುಮಟ್ಟದ ರಾಜಕೀಯ ನಡೆಯನ್ನು ತಿರಸ್ಕರಿಸುವ ಮೂಲಕ ದೇಶದ ಸಂವಿಧಾನಿಕ ಮೌಲ್ಯಗಳ ಘನತೆಯನ್ನು ಎತ್ತಿ ಹಿಡಿಯಬೇಕು. ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಕಳೆದ 15 ತಿಂಗಳಲ್ಲಿ ಜನರಿಗೆ ಸಂಬಂಧಿಸಿದ ಒಂದೇ ಒಂದು ಸಮಸ್ಯೆಯನ್ನು ಕೈಗೆತ್ತಿಕೊಂಡು ವಿಧಾನಸಭೆಯಲ್ಲಿ ಮಾತನಾಡಲಿಲ್ಲ. ಆದರೆ, ಸಾಂವಿಧಾನಿಕವಾಗಿ ಜನರು ಆಯ್ಕೆ ಮಾಡಿರುವ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸುತ್ತಿವೆ’ ಎಂದು ಆರೋಪಿಸಿದರು.

‘ಅವಕಾಶವಾದವನ್ನು ಅರೆದು ಕುಡಿದಿರುವ ಜೆಡಿಎಸ್‌ ಆತ್ಮವಂಚನೆ ಮಾಡಿಕೊಳ್ಳುತ್ತಾ ಬಿಜೆಪಿಯ ದುಷ್ಟ ರಾಜಕಾರಣಕ್ಕೆ ವೇದಿಕೆ ಒದಗಿಸುತ್ತಿದೆ. ಈ ಎರಡೂ ಪಕ್ಷಗಳ ಕಪಟ ರಾಜಕಾರಣವನ್ನು ನಾವು ಖಂಡಿಸುತ್ತೇವೆ. ಆದರೆ, ನಾವು ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಆಡಳಿತದಿಂದ ಸಂತುಷ್ಟರಾಗಿದ್ದೇವೆ ಎಂದಲ್ಲ. ಬಿಜೆಪಿ ಮತ್ತು ಸಂಘ ಪರಿವಾರದ ಶಕ್ತಿಗಳ ಬಗೆಗಿನ ಮೃದು ನಡೆಯನ್ನು ಕಾಂಗ್ರೆಸ್‌ ಈಗಲಾದರೂ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಜಮಾತೆ ಇಸ್ಲಾಮಿ ಹಿಂದ್‌ನ ಯೂಸೂಫ್ ಕನ್ನಿ, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT