ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶಾಸಕರ ಹಸ್ತಕ್ಷೇಪಕ್ಕೆ ಅವಕಾಶ?

ಕೆಎಂಸಿ ಕಾಯ್ದೆಯ ಸೆಕ್ಷನ್‌ 70ರ ತಿದ್ದುಪಡಿಗೆ ನಡೆದಿದೆ ಸಿದ್ಧತೆ
Last Updated 7 ಫೆಬ್ರುವರಿ 2021, 20:02 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಶಾಸಕರ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ 1976ರ ಕರ್ನಾಟಕ ಪೌರ ನಿಗಮಗಳ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಶಾಸಕರಿಗೂ ಅಧಿಕಾರ ನೀಡಬೇಕು ಎಂದು ಈಗ ಕರ್ನಾಟಕ ವಿಧಾನಭಾ ಸದಸ್ಯರ ಖಾಸಗಿ ಮಸೂದೆಗಳು ಮತ್ತು ನಿರ್ಣಯಗಳ ಸಮಿತಿಯು ಶಿಫಾರಸು ಮಾಡಿದ್ದು, ಇದರ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.

‘1976ರ ಕೆಎಂಸಿ ಕಾಯ್ದೆಯಲ್ಲಿ ಶಾಸಕರ ಹಕ್ಕು ಮತ್ತು ಕರ್ತವ್ಯಗಳು ಹಾಗೂ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿಲ್ಲ. ಇದರಿಂದಾಗಿ ಪಾಲಿಕೆ ಅಥವಾ ನಗರಸಭೆಗಳ ವ್ಯಾಪ್ತಿಯ ಶಾಸಕರು ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳನ್ನು ಅಥವಾ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ತೊಂದರೆ ಆಗುತ್ತಿದೆ. ಸಮರ್ಪಕವಾಗಿ ಕಾರ್ಯನಿರ್ವಹಣೆಗೆ ಅನುಕೂಲ ಕಲ್ಪಿಸಲು ಶಾಸಕರಿಗೆ ಸ್ಪಷ್ಟವಾಗಿ ಅಧಿಕಾರ ಅಥವಾ ಜವಾಬ್ದಾರಿಗಳನ್ನು ಉಲ್ಲೇಖಿಸುವ ಅಗತ್ಯವಿದೆ. ಹಾಗಾಗಿ ಕೆಎಂಸಿ ಕಾಯ್ದೆಯ ಸೆಕ್ಷನ್‌ 70ಕ್ಕೆ ತಿದ್ದುಪಡಿ ತರಬೇಕು’ ಎಂದು ಸಮಿತಿ ಶಿಫಾರಸಿನಲ್ಲಿ ತಿಳಿಸಿದೆ.

ಈ ಸಮಿತಿಯ ಶಿಫಾರಸು ಜಾರಿಗೆ ನಗರಾಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ 1976ರ ಕೆಎಂಸಿ ಕಾಯ್ದೆಯ ಸೆಕ್ಷನ್‌ 70ಕ್ಕೆ ತಿದ್ದುಪಡಿ ತರುವಂತೆ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಆಯುಕ್ತರಿಗೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

1970ರ ಕೆಎಂಸಿ ಕಾಯ್ದೆಯ ಸೆಕ್ಷನ್‌ 70 ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಅಧಿಕಾರ ವ್ಯಾಪ್ತಿಯನ್ನು ನಿರೂಪಿಸುತ್ತದೆ. ಪಾಲಿಕೆ ಅಥವಾ ನಗರಸಭೆಯ ಕಾಮಗಾರಿ ಅನುಷ್ಠಾನದಲ್ಲಿ ನಿರ್ಲಕ್ಷ್ಯ, ಅವುಗಳ ಆಸ್ತಿಯನ್ನು ಪೋಲು ಮಾಡುವುದು, ಸ್ಥಳೀಯವಾಗಿ ಅಗತ್ಯಗಳ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದ ಗಮನ ಸೆಳೆಯುವ ಅಧಿಕಾರವನ್ನು ಪಾಲಿಕೆ ಅಥವಾ ನಗರಸಭೆ ಸದಸ್ಯರು ಹೊಂದಿದ್ದಾರೆ. ಪಾಲಿಕೆ ಅಥವಾ ನಗರಸಭೆಗಳ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡುವ ಅಧಿಕಾರವನ್ನೂ ಹೊಂದಿರುತ್ತಾರೆ. ಆದರೆ, ಈ ಕಾಯ್ದೆಯಲ್ಲಿ ಶಾಸಕರಿಗೆ ಇಂತಹ ಅಧಿಕಾರ ನೀಡಿಲ್ಲ.

ಸಂವಿಧಾನದ ಆಶಯಕ್ಕೆ ವಿರುದ್ಧ

‘ನಗರ ಸ್ಥಳೀಯ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸ್ಥಳೀಯ ಸರ್ಕಾರಗಳಾಗಬೇಕು ಎಂಬ ಉದ್ದೇಶದಿಂದಲೇ ಸಂವಿಧಾನಕ್ಕೆ 74ನೇ ತಿದ್ದುಪಡಿ ತರಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಿ ಅವುಗಳನ್ನು ಬಲಪಡಿಸುವುದೇ ಇದರ ಹಿಂದಿನ ಆಶಯ. ಇದಕ್ಕೆ ಪೂರಕವಾಗಿ ಕೆಎಂಸಿ ಕಾಯ್ದೆಗಳಿಗೂ ಈ ಹಿಂದೆಯೇ ತಿದ್ದುಪಡಿ ತರಲಾಗಿದೆ. ಶಾಸಕರು ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಕಲ್ಪಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು’ ಎನ್ನುತ್ತಾರೆ ಕಾನೂನು ತಜ್ಞರು.

ವಿಧಾನಸಭಾ ಕ್ಷೇತ್ರವಾರು ಅಭಿವೃದ್ಧಿ ಸಮಿತಿ

ಶಾಸಕರ ನೇತೃತ್ವದಲ್ಲಿ ವಿಧಾನಸಭಾ ಕ್ಷೇತ್ರವಾರು ಸಮಾಲೋಚನಾ ಸಮಿತಿ ರಚಿಸಲು ‘ಬಿಬಿಎಂಪಿ ಕಾಯ್ದೆ 2020’ರಲ್ಲಿ ಅವಕಾಶ ಕಲ್ಪಿಸಿರುವುದಕ್ಕೆ ಈ ಹಿಂದೆ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಾಜ್ಯದ ಎಲ್ಲ ಪಾಲಿಕೆಗಳು ಹಾಗೂ ನಗರಸಭೆಗಳ ವ್ಯಾಪ್ತಿಯಲ್ಲೂ ಇಂತಹ ಸಮಿತಿ ರಚನೆಗೆ ಅವಕಾಶ ಕಲ್ಪಿಸಲು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧತೆ ನಡೆದಿದೆ.

‘ರಾಜ್ಯದ ಎಲ್ಲ ಪಾಲಿಕೆಗಳು, ನಗರ ಸಭೆಗಳು ಮತ್ತು ಪುರಸಭೆಗಳಲ್ಲೂ ಇದೇ ಮಾದರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕ್ಷೇತ್ರವಾರು ಅಭಿವೃದ್ಧಿ ಸಮಿತಿ ರಚನೆ ಮಾಡಬೇಕು. ಅದರಲ್ಲಿ ಎಲ್ಲ ಪಾಲಿಕೆ/ ನಗರಸಭೆ ಸದಸ್ಯರನ್ನು ಸದಸ್ಯರನ್ನಾಗಿ ಸೇರಿಸಬೇಕು. ಈ ಸಮಿತಿಯ ಕಾರ್ಯಚಟುವಟಿಕೆ ನೋಡಿಕೊಳ್ಳಲು ನೋಡಲ್‌ ಅಧಿಕಾರಿಯನ್ನು ನೇಮಿಸಬೇಕು. ಸಮಿತಿಯ ಸಭೆಗೆ ಕ್ಷೇತ್ರದ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ನಿಯಮ ರೂಪಿಸಬೇಕು’ ಎಂದುಕರ್ನಾಟಕ ವಿಧಾನಭಾ ಸದಸ್ಯರ ಖಾಸಗಿ ಮಸೂದೆಗಳು ಮತ್ತು ನಿರ್ಣಯಗಳ ಸಮಿತಿ ಶಿಫಾರಸು ಮಾಡಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸಲು ಸರ್ಕಾರ ‘ಬಿಬಿಎಂಪಿ ಕಾಯ್ದೆ 2020’ರಲ್ಲಿ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿತ್ತು. 2020ರ ಡಿಸೆಂಬರ್‌ನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕಾರಗೊಂಡ ಈ ಕಾಯ್ದೆ 2021ರ ಜ.11ರಿಂದ ಜಾರಿಗೆ ಬಂದಿದೆ.

ಶಾಸಕರ ನೇತೃತ್ವದ ಸಮಿತಿ ರಚಿಸಿದರೆ ಬಿಬಿಎಂಪಿ ಕಾರ್ಯಕಲಾಪಗಳಲ್ಲಿ ಶಾಸಕರು ನೇರ ಹಸ್ತಕ್ಷೇಪ ನಡೆಸುವುದಕ್ಕೆ ಮತ್ತಷ್ಟು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದರು.

‘ಸ್ಥಳೀಯಾಡಳಿತದಲ್ಲಿ ಬಿಕ್ಕಟ್ಟು ಸೃಷ್ಟಿಸಲಿದೆ’

‘ಪಾಲಿಕೆಗಳಲ್ಲಿ ಅಥವಾ ನಗರಸಭೆಗಳಲ್ಲಿ ಶಾಸಕರು ಪದನಿಮಿತ್ತ ಸದಸ್ಯರು ಮಾತ್ರ. ಅವರಿಗೆ ಅಲ್ಲಿ ಯಾವ ಅಧಿಕಾರವೂ ಇಲ್ಲ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಈ ಸ್ಥಳೀಯ ಸರ್ಕಾರಕ್ಕೆ ಇರಬೇಕು. ಶಾಸಕರ ನೇತೃತ್ವದಲ್ಲಿ ಕ್ಷೇತ್ರವಾರು ಸಮಿತಿ ರಚಿಸಿದ್ದೇ ಆದರೆ, ಎರಡು ಅಧಿಕಾರ ಕೇಂದ್ರಗಳು ರೂಪುಗೊಳ್ಳುತ್ತವೆ. ಇದು ಸ್ಥಳೀಯಾಡಳಿತದಲ್ಲಿ ಗೊಂದಲಗಳನ್ನು ಹಾಗೂ ಬಿಕ್ಕಟ್ಟುಗಳನ್ನು ಸೃಷ್ಟಿಸಲಿದೆ’ ಎನ್ನುತ್ತಾರೆ ಪಂಚಾಯತ್‌ ರಾಜ್‌ ಕಾಯ್ದೆ ತಿದ್ದುಪಡಿ ಶಿಫಾರಸಿಗಾಗಿ ರಮೇಶ್‌ ಕುಮಾರ್‌ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ವಕೀಲ ಟಿ.ಬಿ.ಶೆಟ್ಟಿ.

’ಕೇರಳ ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ನೀಡಿದೆ. ಕರ್ನಾಟಕದಲ್ಲಿ ಇನ್ನೂ ಈ ಕಾರ್ಯ ಆಗಿಲ್ಲ. ಈ ನಡುವೆ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈಗ ನೀಡಿರುವ ಅಲ್ಪಸ್ವಲ್ಪ ಅಧಿಕಾರಕ್ಕೆ ಚ್ಯುತಿ ಬರುವಂತೆ ಶಾಸಕರಿಗೂ ಅಧಿಕಾರ ನೀಡಲು ಕಾನೂನು ತಿದ್ದುಪಡಿ ಮಾಡುವುದು ಸರಿಯಲ್ಲ. ಎಲ್ಲ ಅಧಿಕಾರವೂ ಶಾಸಕರ ಅಧೀನದಲ್ಲೇ ಇರಬೇಕು ಎಂಬ ಪರಿಕಲ್ಪನೆಯೇ ತಪ್ಪು’ ಎಂದು ಅವರು ಸ್ಪಷ್ಟಪಡಿಸಿದರು.

***

ನಗರ ಸ್ಥಳೀಯ ಸಂಸ್ಥೆಗಳಿಗೆ ಏನೆಲ್ಲ ಅಧಿಕಾರ ನೀಡಲಾಗಿದೆಯೋ, ಅದರಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಕಲ್ಪಿಸುವ ಯಾವುದೇ ಸಮಿತಿಯನ್ನು ರಚಿಸುವುದೂ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು
–ಟಿ.ಬಿ.ಶೆಟ್ಟಿ, ಕಾನೂನುತಜ್ಞ

***

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಧಿಕಾರ ನೀಡುವುದು ಬಾಯಿ ಮಾತಿಗೆ ಸೀಮಿತ. ಸುಮ್ಮನಿದ್ದರೆ ಗ್ರಾಮ ಪಂಚಾಯಿತಿ ಸಭೆಯೂ ತಮ್ಮ ಮೂಗಿಗೆ ನೇರವಾಗಿ ನಡೆಯಬೇಕು ಎಂದು ಶಾಸಕರು ಕಾನೂನು ರೂಪಿಸುತ್ತಾರೆ.

–ಎಂ.ಶಿವರಾಜು, ಬಿಬಿಎಂಪಿ ಸದಸ್ಯರಾಗಿದ್ದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT