ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿರಂಗನ್‌ ವರದಿ ಜಾರಿಗೆ ಸರ್ಕಾರ ಬದ್ಧ: ಸಚಿವ ಈಶ್ವರ ಖಂಡ್ರೆ

Published 29 ಜುಲೈ 2023, 14:34 IST
Last Updated 29 ಜುಲೈ 2023, 14:34 IST
ಅಕ್ಷರ ಗಾತ್ರ

ಬೆಂಗಳೂರು: ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್‌ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಏಟ್ರಿಯಾ ವಿಶ್ವವಿದ್ಯಾಲಯ, ಸ್ವಿಸ್‌ ಗ್ಲೋಬಲ್‌ ನೆಟ್‌ವರ್ಕ್‌ (ಸ್ವಿಸ್ನೆಕ್ಸ್‌) ಮತ್ತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ ಅಂತರ ಪ್ರಬೇಧಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಕಸ್ತೂರಿರಂಗನ್‌ ವರದಿಯ ಶಿಫಾರಸುಗಳು ಅನುಷ್ಠಾನದ ಕುರಿತು ಸಂಜಯ್‌ ಕುಮಾರ್‌ ನೇತೃತ್ವದ ಸಮಿತಿ ಪರಿಶೀಲನೆ ನಡೆಸುತ್ತಿದೆ. ಈ ಸಮಿತಿಯು ಡಿಸೆಂಬರ್‌ ವೇಳೆಗೆ ತನ್ನ ಅಭಿಪ್ರಾಯಗಳನ್ನು ನೀಡಲಿದ್ದು, ನಂತರ ಸರ್ಕಾರವು ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಿದೆ’ ಎಂದರು.

ಪಶ್ಚಿಮ ಘಟ್ಟಗಳ ಬಹುಭಾಗ ಕರ್ನಾಟಕದಲ್ಲಿದೆ. 11 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟಗಳು ವ್ಯಾಪಿಸಿವೆ. ಕಸ್ತೂರಿರಂಗನ್‌ ಸಮಿತಿ ನೀಡಿರುವ ವರದಿ 10 ವರ್ಷಗಳಿಂದ ಬಾಕಿ ಇದೆ. ಅದಕ್ಕೂ ಹಿಂದೆ ಮಾಧವ ಗಾಡ್ಗೀಳ್‌ ನೇತೃತ್ವದ ಸಮಿತಿ ನೀಡಿದ್ದ ವರದಿಯೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಈಗ ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಜನರ ಹಿತಾಸಕ್ತಿಯನ್ನು ರಕ್ಷಿಸಿಕೊಂಡೇ ವರದಿಯ ಜಾರಿಗೆ ಸರ್ಕಾರ ಮುಂದಾಗಿದೆ. ಇತರ ಆರು ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಜತೆ ಸಮಾಲೋಚನೆ ನಡೆಸಿ ವರದಿಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯ ಹಾಗೂ ಅಳಿವಿನಂಚಿನಲ್ಲಿರುವ ಪ್ರಬೇಧಗಳ ಕುರಿತು ಅರಿವು ಮೂಡಿಸಲು ಶಾಲಾ ಹಂತದಿಂದ ಪದವಿ ಕಾಲೇಜುಗಳವರೆಗೆ ಪಠ್ಯಕ್ರಮದಲ್ಲಿ ಈ ವಿಷಯಗಳನ್ನು ಸೇರಿಸುವ ಅಗತ್ಯವಿದೆ. ವನ್ಯಜೀವಿ ಮತ್ತು ಪರಿಸರ ಕುರಿತು ಗ್ರಾಮ ಪಂಚಾಯಿತಿಗಳ ಹಂತದಿಂದ ಜಾಗೃತಿ ಅಭಿಯಾನಗಳನ್ನು ನಡೆಸಬೇಕಿದೆ ಎಂದರು.

ಇಂಟರ್‌ ಸ್ಪೇಸಸ್‌ ಮನಿ ಸಮೂಹದ ಸಂಸ್ಥಾಪಕ ಜೊನಾಥನ್‌ ಲೆಡ್‌ಗಾರ್ಡ್‌ ಅವರೊಂದಿಗೆ ಸಚಿವರು ಸಂವಾದ ನಡೆಸಿದರು. ಜಗತ್ತಿನ ವಿವಿಧೆಡೆ ಪರಿಸರಕ್ಕೆ ಎದುರಾಗಿರುವ ಸವಾಲುಗಳು ಮತ್ತು ಅವುಗಳನ್ನು ಎದುರಿಸುವ ಕುರಿತು ಜೊನಾಥನ್‌ ಅಭಿಪ್ರಾಯ ಹಂಚಿಕೊಂಡರು.

ಭಾರತದಲ್ಲಿ ಸ್ವಿಟ್ಜರ್ಲೆಂಡ್‌ ಕಾನ್ಸುಲ್‌ ಜನರಲ್‌ ರಾಯಭಾರಿ ಜೋನಸ್‌ ಬ್ರನ್‌ಶ್ವಿಗ್‌, ಎಫ್‌ಕೆಸಿಸಿಯ ಅಧ್ಯಕ್ಷ ಗೋಪಾಲ್‌ ರೆಡ್ಡಿ, ಏಟ್ರಿಯಾ ಶಿಕ್ಷಣ ಟ್ರಸ್ಟ್‌ ಕಾರ್ಯನಿರ್ವಾಹಕ ನಿರ್ದೇಶಕ ಕೆ. ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT