ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸಭೆ: ಬಸ್ ನಿಲುಗಡೆಗೆ ಶಿಕ್ಷಕರ ಮನವಿ

ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು, ಸಾರ್ವಜನಿಕರ ಬೇಸರ
Published 21 ಡಿಸೆಂಬರ್ 2023, 14:21 IST
Last Updated 21 ಡಿಸೆಂಬರ್ 2023, 14:21 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಬಸ್‌ಗಳ ಕೊರತೆಯಿಂದಾಗಿ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ತೊಂದರೆಯಾಗುತ್ತಿದ್ದು, ಮಧುಗಿರಿ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನರಸೀಪುರ ತೋಪಿನಲ್ಲಿ ನಿಲುಗಡೆ ಮಾಡಿಸಲು ಪಂಚಾಯ್ತಿ ಆಡಳಿತ ನೆರವಾಗಬೇಕು ಎಂದು ಶಿಕ್ಷಕರು ಗ್ರಾಮಸಭೆಗೆ ಮನವಿ ಮಾಡಿದರು.

ನೆಲಮಂಗಲ ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯ್ತಿಯಲ್ಲಿ ಬುಧವಾರ ನಡೆದ ಪ್ರಸಕ್ತ ಸಾಲಿನ ಗ್ರಾಮಸಭೆಯಲ್ಲಿ ಶಿಕ್ಷಕರು ಬಸ್‌ಗಳ ಕೊರತೆಯಿಂದಾಗುವ ಸಮಸ್ಯೆಗಳ ಕುರಿತು ವಿವರಿಸಿದರು.  

‘ಪ್ರತಿ ದಿನ 50ಕ್ಕೂ ಹೆಚ್ಚು ಶಿಕ್ಷಕರು ಹಾಗೂ 200ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿಂದ ಬೇರೆ ಬೇರೆ ಕಡೆಗೆ ಸಂಚರಿಸುತ್ತಾರೆ. ಸರಿಯಾದ ಸಮಯಕ್ಕೆ ಬಸ್‌ ಸಿಗದೇ, ಸಕಾಲಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲು ತೊಂದರೆಯಾಗಿದೆ. ಹಾಗಾಗಿ, ಮಧುಗಿರಿ ಕಡೆಯಿಂದ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್‌ಗಳನ್ನು ನರಸೀಪುರ ತೋಪಿನಲ್ಲಿ ನಿಲುಗಡೆ ಮಾಡಿಸಲು ಪಂಚಾಯ್ತಿ ಆಡಳಿತ ನೆರವಾಗಬೇಕು‘ ಎಂದು ಮನವಿ ಮಾಡಿದರು.

ಗ್ರಾಮಸಭೆಗೆ ಕೆಲವೇ ಕೆಲವು ಇಲಾಖೆಗಳ ಅಧಿಕಾರಿಗಳು ಬಂದಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯಿತಿ ಮುಂದೆಯೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆ ಏನು ಮಾಡುತ್ತಿದೆ. ನರಸೀಪುರದಲ್ಲಿರುವ ನ್ಯಾಯಬೆಲೆ ಅಂಗಡಿಯವರು ಒಂದು ದಿನ ಮಾತ್ರ ಪಡಿತರ ವಿತರಿಸುತ್ತಾರೆ. ಸಮಸ್ಯೆ ಕೇಳಲು ಇಲಾಖೆಯ ಯಾವ ಅಧಿಕಾರಿಗಳೂ ಸಭೆಗೆ ಬಂದಿಲ್ಲ ಎಂದು ಜನರು ದೂರಿದರು.

ಬೆಸ್ಕಾಂನಿಂದ ಟ್ರಾನ್ಸ್‌ಫಾರ್ಮರ್‌ಗಳಿಗೆ ಬೇಲಿ ಹಾಕದಿರುವುದು, ಬಾಗಿದ ತಂತಿಗಳ ಬಗ್ಗೆ, ಕೃಷಿ ಇಲಾಖೆಯಿಂದ ಯಂತ್ರಧಾರೆ, ಟಾರ್ಪಲ್ ವಿತರಣೆ, ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಸಮಸ್ಯೆಗಳ ಕುರಿತು ಗ್ರಾಮಸಭೆಯಲ್ಲಿ ಪ್ರಸ್ತಾಪವಾಯಿತು.

ಸಭೆಗೆ ಹಾಜರಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಂದಾಯ, ಆರೋಗ್ಯ, ಪಶು ವೈದ್ಯಕೀಯ, ರೇಷ್ಮೆ, ಕೃಷಿ, ಪಿಆರ್‌ಡಿಐ, ಅಬಕಾರಿ, ಬೆಸ್ಕಾಂ, ಶಿಕ್ಷಣ ಇಲಾಖೆಗಳ ಅಧಿಕಾರಿಗಳು, ತಮ್ಮ ಇಲಾಖೆಗಳಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯ್ತಿ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಗೆ ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದು ಆ ಇಲಾಖೆಗಳಿಗೆ ಪಂಚಾಯಿತಿ ಮೂಲಕ ನೋಟಿಸ್ ನೀಡಲಾಗುವುದು. ಮುಂದಿನ ಗ್ರಾಮಸಭೆಯಲ್ಲಿ ಅಧಿಕಾರಿಗಳ ಪೂರ್ಣ ಹಾಜರಾತಿ ಇರುವಂತೆ ನೋಡಿಕೊಳ್ಳಲಾಗುವುದು.
- ಶಾಂತಬಾಯಿ ನೋಡಲ್ ಅಧಿಕಾರಿ
ಸಿಸಿಟಿವಿ ಅಳವಡಿಕೆ ನರಸೀಪುರ ತೋಪಿನಲ್ಲಿರುವ ಶೌಚಾಲಯ ದುರಸ್ತಿ ಬೀದಿ ದೀಪಗಳ ಅಳವಡಿಕೆ ಪಡಿತರ ವಿತರಣೆಯಲ್ಲಿ ಲೋಪ ಇನ್ನಿತರ ಸಮಸ್ಯೆಗಳು ಕೇಳಿ ಬಂದಿದ್ದು ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು
– ರಾಮಾಂಜಿನಯ್ಯ ಅಧ್ಯಕ್ಷ ಗ್ರಾಮ ಪಂಚಾಯಿತಿ ನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT