ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸಿರು ಇಂಧನ’ ಜಾಗೃತಿಗೆ ನಡಿಗೆ

ಕ್ರಾನಿಕ್ ಫೌಂಡೇಷನ್ ವತಿಯಿಂದ ‘ಪ್ರೈಡ್ ರನ್’ ಆಯೋಜನೆ
Last Updated 8 ಸೆಪ್ಟೆಂಬರ್ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ನಸುಕಿನ ಐದೂವರೆ ಗಂಟೆ. ನಗರ ಕತ್ತಲೆಯಲ್ಲಿ ಮುಳುಗಿದ್ದರೆ ಸೇಂಟ್ ಜೋಸೆಫ್ ಹೈಸ್ಕೂಲ್‌ ಮೈದಾನದಲ್ಲಿ ಉತ್ಸಾಹಿಗಳ ದಂಡು ಸೇರಿತ್ತು. ಕೊರೆಯುವ ಚಳಿಯ ಗೊಡವೆ ಅಲ್ಲಿದ್ದ ಯಾರಿಗೂ ಇರಲಿಲ್ಲ. ಹಸಿರು ಟೀ ಶರ್ಟ್ ತೊಟ್ಟು, ಕಾಲಿಗೆ ಶೂ ಧರಿಸಿ ಅವರು ಓಟಕ್ಕೆ ಅಣಿಯಾಗುತ್ತಿದ್ದರು.

ಇಂಗಾಲ ಹೊರಸೂಸುವ ಇಂಧನಗಳನ್ನು ತ್ಯಜಿಸಿ, ನವೀಕರಿಸಬಹುದಾದ ಇಂಧನ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕ್ರಾನಿಕ್ ಫೌಂಡೇಷನ್, ರೋಟರಿ ಬೆಂಗಳೂರು ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಯೋಗದಲ್ಲಿ ‘ಪ್ರೈಡ್ ರನ್’ ಹೆಸರಿನ ಓಟ ಆಯೋಜಿಸಲಾಗಿತ್ತು. ಆರು ವರ್ಷ ವಯಸ್ಸಿನ ಮಕ್ಕಳಿಂದ ಹಿಡಿದು ಅರವತ್ತು ವರ್ಷ ಮೀರಿದವರು ಹೆಜ್ಜೆಹಾಕಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಹಸಿರು ಇಂಧನಕ್ಕೆ ಆದ್ಯತೆ ನೀಡುವ ಘೋಷಣೆಗಳು ಮೊಳಗಿದವು.

10ಕೆ, 5ಕೆ ಹಾಗೂ 2ಕೆ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ರೋಟರಿಯ ಸಮೀರ್ ಹರಿಯಾನಿ, ಸುರೇಶ್ ಹರಿ, ಅಮರ ನಾರಾಯಣ್, ಜಯದೇವ ನಾಯ್ಡು ಹಾಗೂ ಕ್ರಾನಿಕ್ ಫೌಂಡೇಷನ್‍ನ ರಮೇಶ್ ಶಿವಣ್ಣ ಬಾವುಟ ತೋರಿ ಓಟಕ್ಕೆ ಚಾಲನೆ ನೀಡಿದರು. ಕಸ್ತೂರಬಾ ರಸ್ತೆ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ, ವಿಧಾನಸೌಧ, ಹೈಕೋರ್ಟ್, ಕಬ್ಬನ್‍ಪಾರ್ಕ್, ಕಂಠೀರವ ಕ್ರೀಡಾಂಗಣದ ಮಾರ್ಗವಾಗಿ ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಸ್ಪರ್ಧಿಗಳು ಸಾಗಿದರು. ಬಿರುಸಿನಿಂದ ಹೆಜ್ಜೆಹಾಕಿ ಪದಕಗಳಿಗೆ ಕೊರಳೊಡ್ಡಿದರು.

‘ಪ್ರೈಡ್ ರನ್’ ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿದ ಕ್ರಾನಿಕ್ ಫೌಂಡೇಷನ್ ಮುಖ್ಯಸ್ಥ ರಮೇಶ್ ಶಿವಣ್ಣ, ಮುಂದಿನ ವರ್ಷ ಐದು ಸಾವಿರ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ ಎಂಬ ಆಶಾಭಾವ ವ್ಯಕ್ತಪಡಿಸಿದರು.

5ಕೆ ವರ್ಗದ ಪುರುಷ ವಿಭಾಗದಲ್ಲಿ ದೀಕ್ಷಿತ್ ದೇವಯ್ಯ, ಮಹಿಳಾ ವಿಭಾಗದಲ್ಲಿ ದೀಪ್ತಾ, ಹಿರಿಯರ ವಿಭಾಗದಲ್ಲಿ ಬಾಬು ಎನ್. ಮೊದಲಿಗರೆನಿಸಿಕೊಂಡರು. 10ಕೆ ವರ್ಗದ ಪುರುಷರ ವಿಭಾಗದಲ್ಲಿ ಅನ್ಬು ಕುಮಾರ್, ಮಹಿಳಾ ವಿಭಾಗದಲ್ಲಿ ಸಿಮ್ತಾ, ಹಿರಿಯ ವಿಭಾಗದಲ್ಲಿ ನಂದರಾಜ ಸಿಂಗ್ ಅಗ್ರ ಸ್ಥಾನ ಪಡೆದರು. ಅಂತರರಾಷ್ಟ್ರೀಯ ಸ್ಪರ್ಧಿಗಳಲ್ಲಿ ಮಿಕ್ರ್ಯಾಸ್ ಮತ್ತು ಬೆಂಜಮಿನ್ ಪದಕ ಗೆದ್ದರು.

58ರಲ್ಲೂ ಗುರಿ ಮುಟ್ಟುವ ತವಕ:ಪ್ರತಿ ವರ್ಷದಂತೆ ಈ ಬಾರಿಯೂ ಪ್ರೈಡ್ ರನ್‍ನಲ್ಲಿ ಅನೇಕ ವೃತ್ತಿಪರ ಓಟಗಾರರೂ ಜೊತೆಯಾಗಿದ್ದರು. ಚೆನ್ನೈ ನಿವಾಸಿ, 58 ವರ್ಷದ ಬಾಬು ಗಮನ ಸೆಳೆದರು. ತಮ್ಮ 10ನೇ ವಯಸ್ಸಿನಲ್ಲಿ ಓಟ ಶುರು ಮಾಡಿದ ಬಾಬು, ಮಂಬೈ, ಪೂನಾ, ಕೋಲ್ಕತ್ತ ಹೀಗೆ ದೇಶದ ಎಲ್ಲ ಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಹಾಜರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT