ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಡಿಗೆ ಮನೆ ಬದಲಾಯಿಸುವವರಿಗೆ ‘ಗೃಹಜ್ಯೋತಿ’ ಪೀಕಲಾಟ

‘ಕ್ಯಾನ್ಸಲೇಶನ್‌’ ಆಯ್ಕೆ ಇಲ್ಲದೇ ಸಮಸ್ಯೆ ಎದುರಿಸುತ್ತಿರುವ ಬಾಡಿಗೆದಾರರು
Published 31 ಮೇ 2024, 23:44 IST
Last Updated 31 ಮೇ 2024, 23:44 IST
ಅಕ್ಷರ ಗಾತ್ರ

ಬೆಂಗಳೂರು: ‘ಗೃಹಜ್ಯೋತಿ’ ಒಂದು ಕಡೆ ರದ್ದು ಮಾಡಿ ಇನ್ನೊಂದು ಮನೆಗೆ ತೆಗೆದುಕೊಳ್ಳುವ ಅವಕಾಶವನ್ನು ಇಂಧನ ಇಲಾಖೆ ನೀಡದೇ ಇರುವುದರಿಂದ ಬಾಡಿಗೆ ಮನೆ ಬದಲಾಯಿಸುತ್ತಿರುವವರು ಯೋಜನೆ ಫಲಾನುಭವಿಗಳಾಗಲು ಪರದಾಡುವಂತಾಗಿದೆ.

ಒಂದು ಕಡೆ ಬಾಡಿಗೆ ಮನೆಯಲ್ಲಿ ವಾಸವಿದ್ದವರು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ಮನೆ ಬದಲಾವಣೆ ಮಾಡಲು ಮುಂದಾದಾಗ ಸಮಸ್ಯೆ ಎದುರಾಗಿದೆ. ಮೊದಲಿದ್ದ ಬಾಡಿಗೆ ಮನೆಯಲ್ಲಿ ಯೋಜನೆಯನ್ನು ರದ್ದು ಮಾಡದೇ ಹೊಸ ಬಾಡಿಗೆ ಮನೆಯಲ್ಲಿ ಸೌಲಭ್ಯ ಪಡೆಯಲು ಆಗುತ್ತಿಲ್ಲ. ರದ್ದು ಮಾಡುವ ಅವಕಾಶ ಇಂಧನ ಇಲಾಖೆಯ ವೆಬ್‌ಸೈಟ್‌ನಲ್ಲಾಗಲಿ, ‘ಸೇವಾ ಸಿಂಧು’ ಪೋರ್ಟ್‌ನಲ್ಲೂ ಇಲ್ಲ ಎಂದು ಬಾಡಿಗೆದಾರರು ದೂರಿದ್ದಾರೆ.

‘ನಾನು ಮಹಾಲಕ್ಷ್ಮಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದೇನೆ. ನನ್ನ ಆಧಾರ್‌ ಕಾರ್ಡ್‌ ನಂಬರ್‌ ನೀಡಿ ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್‌ ಉಚಿತವಾಗಿ ಬಳಸುತ್ತಿದ್ದೇನೆ. ಇದೀಗ ಬೇರೆ ಬಾಡಿಗೆ ಮನೆ ನೋಡಿದ್ದು, ಜೂನ್‌ನಲ್ಲಿ ಅಲ್ಲಿಗೆ ಕುಟುಂಬ ಸಹಿತ ಸ್ಥಳಾಂತರಗೊಳ್ಳಲಿದ್ದೇನೆ. ಅದಕ್ಕಾಗಿ ಇಲ್ಲಿ ಗೃಹಜ್ಯೋತಿ ರದ್ದು ಮಾಡಲು ಹೋದಾಗ ಅಂಥ ಅವಕಾಶವೇ ಇರಲಿಲ್ಲ’ ಎಂದು ಖಾಸಗಿ ಕಂಪನಿ ಉದ್ಯೋಗಿ ಕಾರ್ತಿಕ್‌ ತಿಳಿಸಿದರು.

‘ಬೆಸ್ಕಾಂ ಕಚೇರಿಗೆ ಹೋಗಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ. ರದ್ದು ಮಾಡಲು ಆಗುವುದಿಲ್ಲ. ನಿಮ್ಮ ಮನೆಯವರ ಆಧಾರ್‌ ಕಾರ್ಡ್‌ನಲ್ಲಿ ಹೊಸ ಬಾಡಿಗೆ ಮನೆಯಲ್ಲಿ ಯೋಜನೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇಲ್ಲಿ ಹಳೇ ಬಾಡಿಗೆ ಮನೆಯಲ್ಲಿ ನನ್ನ ಹೆಸರಲ್ಲಿ ಯೋಜನೆ ಮುಂದುವರಿದಿರುತ್ತದೆ. ಹೊಸ ಮನೆಯಲ್ಲಿ ಪತ್ನಿ ಹೆಸರಲ್ಲಿ ಯೋಜನೆ ಪಡೆದುಕೊಂಡರೆ ಒಂದೇ ಕುಟುಂಬ ಎರಡು ಕಡೆ ಬಳಸಿದಂತಾಗುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಬಾಡಿಗೆ ಮನೆ ಬದಲಾಯಿಸಿದಾಗ ಯೋಜನೆ ರದ್ದು ಮಾಡಲು ಆಗದೇ ಇದ್ದರೆ, ಮುಂದೆ ಆ ಮನೆಗೆ ಬರುವವರಿಗೆ ಲಾಭವಾಗಲಿದೆ. ಅವರು ಅರ್ಜಿ ಸಲ್ಲಿಸದೆಯೇ ಯೋಜನೆ ಮುಂದುವರಿಯಲಿದೆ. ಬಾಡಿಗೆಗೆ ಜನ ಬಾರದೇ ಇದ್ದರೆ ಮಾಲೀಕರಿಗೇ ಉಳಿತಾಯವಾಗಲಿದೆ’ ಎಂದು ತಿಳಿಸಿದರು.

ಸರ್ಕಾರ ಕೂಡಲೇ ಇಂಧನ ಇಲಾಖೆಯ ವೆಬ್‌ಸೈಟ್‌ನಲ್ಲಿ ‘ಕ್ಯಾನ್ಸಲೇಶನ್‌ ಆಪ್ಷನ್‌‘ (ರದ್ದತಿ ಆಯ್ಕೆ) ನೀಡಬೇಕು ಎಂದು ಬಾಡಿಗೆದಾರರು ಒತ್ತಾಯಿಸಿದರು.

‘ರದ್ದತಿ ಆಯ್ಕೆ ಬರಲಿದೆ’

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳಾಗಲು https://energy.karnataka.gov.in ವೆಬ್‌ಸೈಟ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ. ಹೆಸರು ಮಾಹಿತಿ ತಪ್ಪಾಗಿದ್ದರೆ ಬದಲಾವಣೆಗೆ ಅವಕಾಶ ನೀಡಲಾಗಿದೆ. ಬಾಡಿಗೆ ಮನೆ ಬದಲಾಯಿಸಿದರೆ ಯೋಜನೆ ರದ್ದು ಮಾಡಲು ಫಲಾನುಭವಿಗಳಿಗೆ ಅವಕಾಶ ನೀಡಿಲ್ಲ. ಸದ್ಯದಲ್ಲಿಯೇ ವೆಬ್‌ಸೈಟ್‌ನಲ್ಲಿ ‘ಕ್ಯಾನ್ಸಲೇಶನ್‌(ರದ್ದತಿ)’ ಆಪ್ಶನ್‌ ಸೇರ್ಪಡೆಗೊಳ್ಳಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಬೆಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಒಂದು ಬಾಡಿಗೆ ಮನೆಯಲ್ಲಿ ಒಂದು ಕುಟುಂಬ ಬಳಕೆ ಮಾಡುತ್ತಿರುವ ವಿದ್ಯುತ್‌ ಯುನಿಟ್‌ ಅನ್ನು ಅವರು ಇನ್ನೊಂದು ಮನೆಗೆ ಸ್ಥಳಾಂತರವಾದಾಗ ಅಲ್ಲಿಗೆ ಬದಲಾಯಿಸಲು ಅವಕಾಶವಿಲ್ಲ. ಪ್ರತಿ ಮೀಟರ್‌ಗೆ ಅರ್ಹ ಯುನಿಟ್‌ಗಳು ನಿಗದಿಯಾಗಿರುತ್ತದೆ. ಹೊಸ ಬಾಡಿಗೆ ಮನೆಗೆ ಹೋದಾಗ ಅಲ್ಲಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ನಿಗದಿ ಮಾಡಿದ ಕನಿಷ್ಠ 53 ಯುನಿಟ್‌ ಮತ್ತು ಹೆಚ್ಚುವರಿ 5 ಯುನಿಟ್‌ ಒಟ್ಟು 58 ಯುನಿಟ್‌ ಉಚಿತವಾಗಿ ದೊರೆಯಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT