ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧನೆಗೆ ಛಲ ತುಂಬಿದ ಸಾಧಕರು

‘ಇನ್‌ಸೈಟ್ಸ್‌ ಐಎಎಸ್‌’ ಸಹಯೋಗದಲ್ಲಿ ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ನಿಂದ ಆಯೋಜನೆ
Last Updated 11 ಜನವರಿ 2020, 22:18 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು:ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಬೇಕು ಎಂಬ ಆಕಾಂಕ್ಷೆ ಹೊಂದಿದ್ದ ಸಾವಿರಾರು ಯುವಜನ ಅಲ್ಲಿ ಸೇರಿದ್ದರು. ಅವರ ಕಂಗಳಲ್ಲಿ ಸಾಧಿಸುವ ಹಂಬಲವಿದ್ದರೆ, ಮನಸು ಮಾರ್ಗದರ್ಶನ ಬಯಸುತ್ತಿತ್ತು. ಗುರಿ ಸಾಧನೆಗೆ ಛಲ ಮೂಡಿಸುವ ಪ್ರೇರಣೆ ಅವರಿಗೆ ಬೇಕಿತ್ತು.

ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಪ್ರಜಾವಾಣಿ–ಡೆಕ್ಕನ್‌ಹೆರಾಲ್ಡ್‌ ವತಿಯಿಂದ ‘ಇನ್‌ಸೈಟ್ಸ್‌ ಐಎಎಸ್‌’ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಗೈಡಿಂಗ್‌ ಫೋರ್ಸ್‌’ ಕಾರ್ಯಾಗಾರವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದಿಟ್ಟವಾಗಿ ಎದುರಿಸುವ ಗುಟ್ಟು ತಿಳಿದುಕೊಳ್ಳಲು ಅವರಿಗೆ ನೆರವಾಯಿತು.

‘ಇನ್‌ಸೈಟ್ಸ್‌’ ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕ ಜಿ.ಬಿ. ವಿನಯ್‌ಕುಮಾರ್ ಪರೀಕ್ಷಾ ಸಿದ್ಧತೆಯ ಬಗ್ಗೆ ಮತ್ತು ತರಬೇತಿ ಅವಶ್ಯಕತೆಯ ಬಗ್ಗೆ ವಿವರಿಸಿದರು.

ಬಂಟರ ಸಂಘದ ಸಭಾಭವನದ ಆಸನಗಳೆಲ್ಲ ಭರ್ತಿಯಾದ ನಂತರ ಹೆಚ್ಚುವರಿ ಆಸನ ವ್ಯವಸ್ಥೆ ಮಾಡಿದರೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸಾಧಕರ ಮಾತನ್ನು ಹಲವರು ನಿಂತುಕೊಂಡೇ ಆಲಿಸಿದರು. ಆಕಾಂಕ್ಷಿಗಳ ಸಂದೇಹಗಳನ್ನು ಪರಿಣತರು ಬಗೆಹರಿಸಿದರು. ಪರೀಕ್ಷೆಯ ತಯಾರಿ, ಪರೀಕ್ಷೆ ಬರೆಯುವ ವೇಳೆ ಇರಬೇಕಾದ ತಲ್ಲೀನತೆ, ಅಧಿಕಾರಿಯಾದ ನಂತರ ರೂಢಿಸಿಕೊಳ್ಳಬೇಕಾದ ಕಾರ್ಯತತ್ಪರತೆಯ ಕುರಿತು ಆಕಾಂಕ್ಷಿಗಳು ಮಾರ್ಗದರ್ಶನ ಪಡೆದರು.

ಪ್ರಶ್ನೆ ಕೇಳಲು ಉತ್ಸಾಹ:ಪರೀಕ್ಷೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಎದುರಾಗುವ ಅಡೆ–ತಡೆಗಳನ್ನು ದಾಟುವುದು ಹೇಗೆ? ಕೊನೆಯವರೆಗೆ ಏಕಾಗ್ರತೆ ಕಾಪಾಡಿಕೊಳ್ಳಲು ಏನು ಮಾಡಬೇಕು ? ಕೆಲಸ–ಕುಟುಂಬದ ಒತ್ತಡದ ನಡುವೆಯೇ ಪರೀಕ್ಷೆಗೆ ಸಿದ್ಧವಾಗುವುದು ಹೇಗೆ ? ಪರೀಕ್ಷೆ ಬರೆಯುವ ವೇಳೆ ನಮ್ಮ ಯೋಜನೆ ಹೇಗಿರಬೇಕು ಎಂಬಂತಹ ಹಲವು ಪ್ರಶ್ನೆಗಳನ್ನು ಆಕಾಂಕ್ಷಿಗಳು ಕೇಳಿದರು.

ಎಲ್ಲ ಪ್ರಶ್ನೆಗಳನ್ನು ಸಮಾಧಾನಚಿತ್ತದಿಂದ ಆಲಿಸಿದ ಪರಿಣತರು, ತಮ್ಮ ಅನುಭವ ಆಧಾರದ ಮೇಲೆ ಸಮರ್ಪಕ ಉತ್ತರ ನೀಡಿದರು.

ಕಾಲೇಜು ವಿದ್ಯಾರ್ಥಿಗಳು ಭಾಗಿ:ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುತ್ತಿರುವವರಷ್ಟೇ ಅಲ್ಲದೆ, ಪದವಿ ಅಂತಿಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳೂ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು, ಬಿಎಂಎಸ್‌ ಎಂಜಿನಿಯರಿಂಗ್‌ ಮತ್ತು ಕಾನೂನು ಕಾಲೇಜು, ಬೆಂಗಳೂರು ತಾಂತ್ರಿಕ ಸಂಸ್ಥೆ, ಎಚ್‌ಕೆಬಿಕೆ ಕಾಲೇಜು, ಎಪಿಎಸ್‌ ವಾಣಿಜ್ಯ ಕಾಲೇಜು, ಶೇಷಾದ್ರಿಪುರ ಕಾಲೇಜು, ಜೆಎಸ್‌ಎಸ್‌ ಎಂಜಿನಿಯರಿಂಗ್‌ ಕಾಲೇಜು, ಎಂಇಎಸ್‌ ಕಾಲೇಜು, ಎಪಿಎಸ್‌ ಕಾಲೇಜು, ನ್ಯಾಷನಲ್‌ ಕಾಲೇಜು, ವಿವೇಕಾನಂದ ಕಾಲೇಜು, ಸುರಾನಾ ಕಾಲೇಜು, ಪೀಣ್ಯ ಪ್ರಥಮದರ್ಜೆ ಕಾಲೇಜು, ಬಿಇಎಲ್‌ ಎಫ್‌ಜಿಸಿ, ರಾಮಯ್ಯ ಕಾಲೇಜು,ಅನುಪಮಾ ಕಾಲೇಜು, ಶ್ರೀಕೃಷ್ಣ ಇಂಟರ್‌ನ್ಯಾಷನಲ್‌ ಕಾಲೇಜು, ವಿದ್ಯಾಪೀಠ, ಅಮ್ಮಣ್ಣಿ ಕಾಲೇಜು, ವೆಂಕಟೇಶ್ವರ ಕಾಲೇಜು ಸೇರಿದಂತೆ ಹತ್ತಾರು ವಿದ್ಯಾಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು.

**

‘ಪರಿಶ್ರಮಕ್ಕೆ ಪರ್ಯಾಯವಿಲ್ಲ’
ಓ ಶಿಲೆಯೇ,

ನೂರು ಉಳಿಯ ಏಟನ್ನು ತಿಂದೆ
ಸಹಿಸಿಕೊಂಡೆ, ತಡೆದುಕೊಂಡೆ
ಮೂರ್ತಿಯಾದೆ, ದೇವರಾದೆ, ಪೂಜೆಗೆ ಪಾತ್ರವಾದೆಓ ಶಿಲೆ
ಯೇ,
ಮೂರು ಉಳಿಯ ಏಟನ್ನೂ ತಿನ್ನಲಿಲ್ಲ
ಸಹಿಸಿಕೊಳ್ಳಲಿಲ್ಲ, ಕೆಕ್ಕರಿಸಿದೆ
ಮೆಟ್ಟಿಲಾದೆ, ಪಾದರಕ್ಷೆಗೆ ಸ್ಥಳವಾದೆ
ಎಲ್ಲರ ತುಳಿತಕ್ಕೆ ಒಳಗಾದೆ

ನಿವೃತ್ತ ಐಪಿಎಸ್‌ ಅಧಿಕಾರಿ ಡಾ.ಡಿ.ಸಿ. ರಾಜಪ್ಪ ಅವರು ಬರೆದ ಈ ಸಾಲುಗಳನ್ನು ಹೇಳುತ್ತಾ, ಪರೀಕ್ಷಾ ಸಿದ್ಧತೆಯಲ್ಲಿ ಪರಿಶ್ರಮದ ಮಹತ್ವ ತಿಳಿಸಿದವರು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್‌.

‘ಐಎಎಸ್‌, ಐಪಿಎಸ್‌ ಅಧಿಕಾರಿಯಾದರೆ ಅಧಿಕಾರ ಚಲಾಯಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದಕ್ಕಿಂತ ಅದೊಂದು ಸೇವೆ ಎಂದು ಪರಿಗಣಿಸಿ, ನಿಮ್ಮ ಪುಟ್ಟ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದುಕೊಂಡು ಕರ್ತವ್ಯ ನಿಭಾಯಿಸಬೇಕು. ಒಂದು ತತ್ವದ ಮೇಲೆ ನಂಬಿಕೆ ಇಟ್ಟು, ಅದರಂತೆ ಕೆಲಸ ಮಾಡಿದರೆ ಯಾವ ಒತ್ತಡವೂ ನಿಮಗೆ ಅಡ್ಡಿಯಾಗಲಾರದು’ ಎಂದು ಅವರು ಕಿವಿಮಾತು ಹೇಳಿದರು.

‘24ನೇ ವರ್ಷಕ್ಕೆ ಐಪಿಎಸ್‌ ಅಧಿಕಾರಿಯಾದೆ. ಆದರೆ, ಮೊದಲನೇ ಪ್ರಯತ್ನದಲ್ಲಿ ನಾನೂ ಅನುತ್ತೀರ್ಣನಾಗಿದ್ದೆ. ಕಾಮಾಲೆ ಬಂದಿದ್ದರಿಂದ ಸರಿಯಾಗಿ ಓದಲು ಆಗಿರಲಿಲ್ಲ. ಪರೀಕ್ಷೆ ಸಿದ್ಧತೆ ವೇಳೆ ಆರೋಗ್ಯದ ಕಡೆಗೂ ಗಮನ ಕೊಡಬೇಕು. ನಿಯಮಿತ ವ್ಯಾಯಾಮ, ಪ್ರಾಣಾಯಾಮ, ಯೋಗ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದಲ್ಲದೆ, ಒತ್ತಡದಿಂದಲೂ ಮುಕ್ತರಾಗಬ
ಹುದು’ ಎಂದು ಸಲಹೆ ನೀಡಿದರು.

‘ಕೆಲವರು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾದರೆ, ಕೆಲವರಿಗೆ ಅದು ಒಲಿಯದು. ನಮ್ಮೊಂದಿಗೆ ಇದ್ದವರು ಅಧಿಕಾರಿಗಳಾದರೂ ನಾವು ಆಗಿಲ್ಲ ಎಂದು ಕೊರಗುವುದು, ಬೇಸರ ಪಟ್ಟುಕೊಳ್ಳುವುದು ಅಥವಾ ಗುರಿಯನ್ನೇ ಬದಲಾಯಿಸುವುದು ಸರಿಯಲ್ಲ. ಪ್ರಯತ್ನ ನಿರಂತರವಾಗಿರಲಿಲ್ಲ. ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ’ ಎಂದು ಅನುಚೇತ್‌ ಹೇಳಿದರು.

**
‘ಪ್ರಚಲಿತ ವಿದ್ಯಮಾನ ಅರಿಯಿರಿ’
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವ ‘ಮೆಂಟರ್‌’ರೀತಿಯಲ್ಲಿ ಉಪನ್ಯಾಸ ನೀಡಿದವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ. ‘ಪ್ರತಿಭೆ ಇದ್ದರೂ ಪರಿಶ್ರಮ ಪಡದಿದ್ದರೆ, ಪ್ರತಿಭಾವಂತರಿಗೂ ಸೋಲು ಎದುರಾಗುತ್ತದೆ’ ಎಂಬ ಸಂದೇಶದೊಂದಿಗೆ ಮಾತು ಆರಂಭಿಸಿದ ಅವರು, ‘ಯಶಸ್ಸು ಶೇ 1ರಷ್ಟು ಅದೃಷ್ಟವನ್ನು ಅವಲಂಬಿಸಿದ್ದರೆ, ಶೇ 99ರಷ್ಟು ಪರಿಶ್ರಮ
ವನ್ನು ಅವಲಂಬಿಸಿರುತ್ತದೆ’ ಎಂದರು.

ಲಕ್ಷಾಂತರ ಜನ ನಾಗರಿಕ ಸೇವಾ ಪರೀಕ್ಷೆಗಳಿಗೆ ಅಭ್ಯಾಸ ನಡೆಸುತ್ತಾರೆ. ತರಬೇತಿ ಪಡೆಯುತ್ತಾರೆ. ನಿರ್ದಿಷ್ಟ ಲೇಖಕರ, ನಿರ್ದಿಷ್ಟ ವಿಷಯದ ಪುಸ್ತಕಗಳನ್ನೇ ಓದಿರುತ್ತಾರೆ. ಆದರೆ, ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಸಾವಿರಕ್ಕಿಂತಲೂ ಕಡಿಮೆ ಅಭ್ಯರ್ಥಿಗಳು. ಇದಕ್ಕೆ ಕಾರಣ, ಪ್ರಚಲಿತ ವಿದ್ಯಮಾನಗಳನ್ನು ಅವರು ಗ್ರಹಿಸಿದ ರೀತಿ. ಪ್ರಚಲಿತ ವಿದ್ಯಮಾನಗಳ ಒಳನೋಟವನ್ನು ಅಳೆಯುವ, ವಿಶ್ಲೇಷಿಸುವ ಕೌಶಲಗಳನ್ನು ಬೆಳೆಸಿಕೊಂಡರೆ ಯಶಸ್ಸು ಸಿಗುತ್ತದೆ ಎಂದು ಶಿಖಾ ಕಿವಿಮಾತು ಹೇಳಿದರು.

ಭಾರತೀಯ ನಾಗರಿಕ ಸೇವಾ (ಐಎಎಸ್‌) ಪರೀಕ್ಷೆಯ ಹಂತಗಳಾದ ಪೂರ್ವಭಾವಿ ಪರೀಕ್ಷೆ, ಮುಖ್ಯಪರೀಕ್ಷೆ ಹಾಗೂ ಸಂದರ್ಶನದ ಕುರಿತು ಮತ್ತು ಅವುಗಳಿಗೆ ಸಿದ್ಧವಾಗಬೇಕಾದ ವಿಧಾನದ ಬಗ್ಗೆ ಅವರು ಸಲಹೆ ನೀಡಿದರು.

ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬೇಕಾದ ಪುಸ್ತಕಗಳ ಪಟ್ಟಿ, ಟಿಪ್ಪಣಿ ಮಾಡಿಕೊಳ್ಳುವುದರಿಂದ ಆಗುವ ಅನುಕೂಲಗಳು, ವೇಳಾಪಟ್ಟಿ ರೂಪಿಸಿ ಅದನ್ನು ಅನುಷ್ಠಾನಕ್ಕೆ ತರುವುದರ ಮಹತ್ವ, ಪ್ರಚಲಿತ ವಿದ್ಯಮಾನಗಳ ಕುರಿತು ತಿಳಿಯಲು ದಿನಪತ್ರಿಕೆಗಳನ್ನು ಓದುವ ವಿಧಾನಗಳನ್ನು ಅವರು ವಿವರಿಸಿದರು.

**
ಐಎಎಸ್‌ ಪರೀಕ್ಷೆಯಲ್ಲಿ ಫೇಲಾಗಿದ್ದೇಕೆ...
ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಎಷ್ಟೊಂದು ಉದಾಹರಣೆಗಳು ಸಿಗುತ್ತವೆಯೋ, ಪರೀಕ್ಷೆಯಲ್ಲಿ ವಿಫಲವಾಗಲೂ ಅನೇಕ ಕಾರಣಗಳಿರುತ್ತವೆ. ಇಂತಹ ಸೋಲುಗಳಿಗೆ ಕಾರಣವಾಗುವ ಅಂಶಗಳ ಬಗ್ಗೆ ಮಾತನಾಡಿದವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್. ವೇಣುಗೋಪಾಲ.

‘18ನೆಯ ವಯಸ್ಸಿನಲ್ಲಿ ಬಿಇ ಎಲೆಕ್ಟ್ರಾನಿಕ್ಸ್‌ಗೆ ಪ್ರವೇಶ ಪಡೆದೆ. ಪದವಿ ನಂತರ ಎಚ್‌ಎಂಟಿಯಲ್ಲಿ ₹ 3 ಸಾವಿರ ಸಂಬಳದ ಕೆಲಸ ಸಿಕ್ಕಿತ್ತು. ಐಎಎಸ್‌ ಪರೀಕ್ಷೆಯಲ್ಲಿ ಭೌತವಿಜ್ಞಾನ ಮತ್ತು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಷಯ ಆಯ್ಕೆ ಮಾಡಿಕೊಂಡೆ. ಪೂರ್ವಭಾವಿ–ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದರೆ, ಸಂದರ್ಶನದಲ್ಲಿ ಅನುತ್ತೀರ್ಣಗೊಂಡೆ. ಈ ವಿಷಯದ ಬದಲು, ಅರ್ಥಶಾಸ್ತ್ರ ಓದಿದ್ದರೆ ಚೆನ್ನಾಗಿರುತ್ತದೆ. ಹೆಚ್ಚು ಅಂಕಗಳಿಸಬಹುದು ಎಂದುಕೊಂಡು ಸ್ನಾತಕೋತ್ತರ ಪದವಿಗೆ ಅರ್ಥಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡೆ. ಎರಡನೇ ಬಾರಿ, ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣನಾದೆ, ಮುಖ್ಯಪರೀಕ್ಷೆಯಲ್ಲಿ ಅನುತ್ತೀರ್ಣನಾದೆ. ಇದು ಬೇಡ, ಕಾನೂನು ಓದಿದರೆ, ಸಾಮಾನ್ಯ ಪತ್ರಿಕೆಯಲ್ಲಿ ಹೆಚ್ಚು ಅಂಕ ಗಳಿಸಬಹುದು ಎಂದು ಭಾವಿಸಿ ಮೂರನೇ ಬಾರಿ ಆ ವಿಷಯ ಆಯ್ಕೆ ಮಾಡಿಕೊಂಡೆ. ಆದರೆ, ಆ ಬಾರಿಯೂ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಆದರೆ, ಕೆಎಎಸ್‌ ಪರೀಕ್ಷೆ ಪಾಸು ಮಾಡಿದೆ’ ಎಂದರು.

‘ಬಿಇ ಪದವಿ ನಂತರ ಪರೀಕ್ಷಾ ಸಿದ್ಧತೆ ವೇಳೆಯಲ್ಲಿಯೇ ಅರ್ಥಶಾಸ್ತ್ರ ಮತ್ತು ಕಾನೂನು ಪದವಿ ಪಡೆದೆ. ನಂತರ, ಸ್ನಾತಕೋತ್ತರ ಪದವಿ, ಐಐಟಿಯಲ್ಲಿ ಅಧ್ಯಯನ ಎಲ್ಲವೂ ಆಯಿತು. ನಾನು ಐಎಎಸ್‌ನಲ್ಲಿ ಫೇಲ್‌ ಆದರೂ, ಶಿಕ್ಷಣ ರಂಗದಲ್ಲಿ ಯಶಸ್ಸು ಗಳಿಸಿದೆ’ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

**

ದೃಷ್ಟಿದೋಷ: ಧೃತಿಗೆಡದಿರಿ
‘ನನಗೆ ದೃಷ್ಟಿದೋಷವಿದೆ. ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವಾಗ ನನ್ನಂಥವರಿಗೆ ಎದುರಾಗುವ ಸವಾಲುಗಳಾವುವು’ ಎಂದು ಎಪಿಎಸ್‌ ವಾಣಿಜ್ಯ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ರೇಣುಕಾ ರಾಥೋಡ್‌ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶಿಖಾ, ‘ನಾಗರಿಕ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವೇಳೆ, ಸಾಮಾನ್ಯರಿಗಿಂತ ದೃಷ್ಟಿದೋಷ ಉಳ್ಳವರು ಅಥವಾ ಅಂಗವಿಕಲ ಹೊಂದಿರುವವರು ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಅಂಗವಿಕಲರಿಗೂ ಹಲವು ಹುದ್ದೆಗಳನ್ನು ಮೀಸಲಿಡಲಾಗಿರುತ್ತದೆ. ದೃಷ್ಟಿದೋಷವಿರುವ ಅಭ್ಯರ್ಥಿಯೊಬ್ಬರು ಐದು ವರ್ಷಗಳ ಹಿಂದೆಯೇ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗೇರಿದ್ದಾರೆ. ಇಂತಹ ಅಭ್ಯರ್ಥಿಗಳು ಸರಾಗವಾಗಿ ಪರೀಕ್ಷೆ ಬರೆಯಲು ಆಯೋಗವು ಎಲ್ಲ ವ್ಯವಸ್ಥೆ ಮಾಡಿದೆ’ ಎಂದು ಅವರು ಹೇಳಿದರು.

ಸಾಧಕರ ಸಲಹೆ

*ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಬೇಕು

*ಅಧ್ಯಯನ ಮಾಡಬೇಕಾದ ಪುಸ್ತಕಗಳ ಪಟ್ಟಿ ತಯಾರಿಸಿಕೊಳ್ಳಬೇಕು

*ಎಲ್ಲ ಪುಸ್ತಕ ಓದಿ, ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು

*ವೇಳಾಪಟ್ಟಿ ಸಿದ್ಧಪಡಿಸಿ, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು

*ಸಿದ್ಧತೆ ವೇಳೆ ಸ್ನೇಹಿತರೊಂದಿಗೆ ವಿಷಯದ ಕುರಿತು ಗುಂಪು ಚರ್ಚೆ ಮಾಡಬೇಕು

*ದಿನ ಪತ್ರಿಕೆಗಳು ಓದುವುದರ ಜೊತೆಗೆ ರಾಷ್ಟ್ರಮಟ್ಟದ ಟಿ.ವಿ.ಚಾನೆಲ್‌ಗಳಲ್ಲಿ ಬಿತ್ತರವಾಗುವ ಸುದ್ದಿ ವೀಕ್ಷಿಸಬೇಕು

*ವಿಷಯದ ಆಳ ಜ್ಞಾನ ಗಳಿಸುವುದರೊಂದಿಗೆ ಪ್ರಚಲಿತ ವಿದ್ಯಮಾನ ವಿಶ್ಲೇಷಿಸುವ ಕೌಶಲ ಬೆಳೆಸಿಕೊಳ್ಳಬೇಕು

*ತಿಳಿದಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಬೇಕು

***
ಆಕಾಂಕ್ಷಿಗಳು ಏನಂತಾರೆ ?

ಬಹಳ ಪ್ರೇರಣೆ ಸಿಕ್ಕಿತು
ನಾನು ಪದವಿ ಓದುತ್ತಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ. ಈ ಕಾರ್ಯಾಗಾರದಲ್ಲಿ ಸಾಧಕರ ಮಾತು ಕೇಳಿದ ನಂತರ ನನ್ನ ಗುರಿ ಮತ್ತಷ್ಟು ಗಟ್ಟಿಯಾಯಿತು. ಬಹಳ ಪ್ರೇರಣೆ ಸಿಕ್ಕಿತು.
-ಝೀಶಾನ್, ಎಚ್‌ಕೆಬಿಕೆ ಕಾಲೇಜು

**
ವಿದ್ಯಾರ್ಥಿಸಲಹೆ ಪ್ರಯೋಜನಕಾರಿ
ಮನೆಯಲ್ಲಿ ಮಕ್ಕಳಿಗೆ ಓದಿ ಓದಿ ಎಂದು ಪೀಡಿಸಿದರೂ ಅವರು ಉತ್ಸಾಹ ತೋರಿಸದೇ ಇರಬಹುದು. ಆದರೆ, ಇಂತಹ ಕಾರ್ಯಾಗಾರಕ್ಕೆ ಬಂದಾಗ, ಸಾಧಕರ ಮಾತುಗಳನ್ನು ಕೇಳಿದಾಗ ಖಂಡಿತಾ ಪ್ರೇರಣೆ ಸಿಗುತ್ತದೆ. ಸಲಹೆಗಳು ತುಂಬಾ ಪ್ರಯೋಜನಕಾರಿಯಾಗಿದ್ದವು.
-ನಾಗೇಶ್, ಪೋಷಕ

**
ಅನುಭವದ ಪಾಠ ಸಹಕಾರಿ
ಯುಪಿಎಸ್‌ಸಿ ಪರೀಕ್ಷೆ ಕುರಿತಂತೆ ಪರಿಣತರು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದು ಸಹಕಾರಿಯಾಯಿತು. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ 30 ಸೇವೆಗಳು ಇರುತ್ತವೆ ಎಂದು ನನಗೆ ತಿಳಿದಿದ್ದೇ ಈಗ. ಕಾರ್ಯಾಗಾರ ಚೆನ್ನಾಗಿತ್ತು.
-ಲಕ್ಷ್ಮಿ, ಪೋಷಕಿ

**
ಎಲ್ಲ ಪ್ರಶ್ನೆಗಳಿಗೆ ಉತ್ತರ
‌ಸ್ಪರ್ಧಾತ್ಮಕ ಪರೀಕ್ಷೆ ಕುರಿತಂತೆ ನಾನು ಹೊಂದಿದ್ದ ಎಲ್ಲ ಪ್ರಶ್ನೆಗಳಿಗೆ ಕಾರ್ಯಾಗಾರದಲ್ಲಿ ಉತ್ತರ ದೊರೆಯಿತು. ಪರೀಕ್ಷೆಗೆ ಹೇಗೆ ಸಿದ್ಧವಾಗಬೇಕು, ಹೇಗೆ ಅಧ್ಯಯನ ಮಾಡಬೇಕು ಎಂಬ ಮಾಹಿತಿ ದೊರೆಯಿತು.
-ನಿತ್ಯಾ, ಸಂಭ್ರಮ ಕಾಲೇಜು

**
ಇಂತಹ ಕಾರ್ಯಾಗಾರ ಅಗತ್ಯ
ಸಾಧಕರು ನೀಡಿದ ಸಲಹೆಗಳು ಉತ್ತಮವಾಗಿದ್ದವು. ಅವುಗಳನ್ನು ತಪ್ಪದೇ ಪಾಲಿಸಿದಲ್ಲಿ ಯಶಸ್ಸು ಸಿಗುತ್ತದೆ ಎನ್ನುವ ವಿಶ್ವಾಸ ನನ್ನಲ್ಲಿ ಮೂಡಿದೆ. ಪರೀಕ್ಷೆಗೂ ಮುನ್ನ ಇಂತಹ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವುದು ಎಷ್ಟು ಮುಖ್ಯ ಎಂಬುದು ಈಗ ತಿಳಿಯಿತು.
-ಶಿಲ್ಪಾ, ಎಪಿಎಸ್‌ ವಾಣಿಜ್ಯ ಕಾಲೇಜು

**
ಯೋಜನಾಬದ್ಧವಾಗಿತ್ತು
ಕಾರ್ಯಾಗಾರವನ್ನು ಅತ್ಯಂತ ಯೋಜನಾಬದ್ಧವಾಗಿ ರೂಪಿಸಲಾಗಿತ್ತು. ಸಾಧಕರು ಉಪನ್ಯಾಸ ನೀಡುವ ವೇಳೆ ಆಯ್ಕೆ ಮಾಡಿಕೊಂಡ ವಿಷಯ ಹಾಗೂ ವಸ್ತು ಕೂಡ ಚೆನ್ನಾಗಿತ್ತು. ಹಲವು ಗೊಂದಲಗಳು ಪರಿಹಾರವಾದವು.
-ರಚನಾ, ಬೆಂಗಳೂರು ತಾಂತ್ರಿಕ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT