ಶುಕ್ರವಾರ, ಡಿಸೆಂಬರ್ 3, 2021
26 °C

ಸವಾರನ ಮೇಲೆ ಗುಂಡು: ಔಡಿ ಕಾರು ಮಾಲೀಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಡುರಸ್ತೆಯಲ್ಲೇ ಬೈಕ್ ಸವಾರ ಅನಿಲ್ ಎಂಬುವರ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿ ರವೀಶ್ ಗೌಡ (44) ಎಂಬಾತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

‘ಮಹಾಲಕ್ಷ್ಮಿ ಬಡಾವಣೆಯಲ್ಲಿ ಹೋಟೆಲ್‌ ನಡೆಸುತ್ತಿರುವ ರವೀಶ್ ಗೌಡ, ಅ. 13ರಂದು ರಾತ್ರಿ 9.25ರ ಸುಮಾರಿಗೆ ಕೃತ್ಯ ಎಸಗಿದ್ದ. ಕೊಲೆ ಯತ್ನ, ಹಲ್ಲೆ ಆರೋಪದಡಿ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆ ಮಾಡಲು ವಿಶೇಷ ತಂಡ ರಚಿಸಲಾಗಿತ್ತು. ಸೂಕ್ತ ಪುರಾವೆ ಸಂಗ್ರಹಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಆತನ ಬಂದೂಕು ಜಪ್ತಿ ಮಾಡಲಾಗಿದೆ. ಆತ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದೂ ತಿಳಿಸಿದರು.

ದಟ್ಟಣೆಯಲ್ಲಿ ಗಲಾಟೆ; ‘ಎಂ.ಎಸ್. ರಾಮಯ್ಯ ಆಸ್ಪತ್ರೆ ಹಿಂಬದಿಯ ಪ್ರವೇಶ ದ್ವಾರದ ವೃತ್ತದಲ್ಲಿ ಆರೋಪಿ ರವೀಶ್ ಗೌಡ, ತನ್ನ ಔಡಿ ಕಾರಿನಲ್ಲಿ ಹೊರಟಿದ್ದ. ಇದೇ ಸಂದರ್ಭದಲ್ಲಿ ಅನಿಲ್, ಬೈಕ್‌ ಚಲಾಯಿಸಿಕೊಂಡು ಅದೇ ಮಾರ್ಗದಲ್ಲಿ ಬರುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದಟ್ಟಣೆಯಲ್ಲಿ ಕಾರಿಗೆ ಬೈಕ್‌ ಸ್ವಲ್ಪ ತಾಗಿತ್ತು. ಅದೇ ವಿಚಾರವಾಗಿ ಮಾತಿನ ಚಕಮಕಿ ಶುರುವಾಗಿತ್ತು. ಸವಾರ ಅನಿಲ್ ಕ್ಷಮೆಯಾಚಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಆರೋಪಿ, ಕಾರಿನಲ್ಲಿದ್ದ ಬಂದೂಕಿನಿಂದ ಸವಾರನತ್ತ ಎರಡು ಸುತ್ತು ಗುಂಡು ಹಾರಿಸಿದ್ದ. ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ.’

‘ಅದೃಷ್ಟವಶಾತ್‌ ಸವಾರನಿಗೆ ಗುಂಡು ತಗುಲಿರಲಿಲ್ಲ. ಸ್ಥಳೀಯರು ಸೇರುತ್ತಿದ್ದಂತೆ ಆರೋಪಿ, ಸ್ಥಳದಿಂದ ಪರಾರಿಯಾಗಿದ್ದ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು