ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ ಅವ್ಯವಹಾರ: ಉಪವಾಸ ಸತ್ಯಾಗ್ರಹ

Last Updated 25 ಅಕ್ಟೋಬರ್ 2021, 20:34 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಅವ್ಯವಹಾರದಿಂದ ಹಣ ಕಳೆದುಕೊಂಡಿರುವ ಠೇವಣಿದಾರರು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಷೇರು‌ದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಈ ನಿರ್ಣಯ ಕೈಗೊಳ್ಳಲಾಯಿತು. ತಮಗಾಗಿರುವ ಅನ್ಯಾಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು. ಇದಕ್ಕೆ ವಕೀಲರೊಬ್ಬರನ್ನು ನೇಮಿಸಬೇಕು ಎಂದೂ ಠೇವಣಿದಾರರು ಸಲಹೆ ನೀಡಿದರು.

ಎರಡು ವರ್ಷಗಳಾದರೂ ಷೇರುದಾರರಿಗೆ ಪರಿಹಾರ ಸಿಕ್ಕಿಲ್ಲ. ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವು (ಡಿಐಸಿಜಿಸಿ) ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭದಲ್ಲಿ ಗ್ರಾಹಕರ ಠೇವಣಿಗೆ ರಕ್ಷಣೆ ಒದಗಿಸುವ ಠೇವಣಿ ವಿಮೆ ಮೊತ್ತವನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಿದೆ. 10 ಸಾವಿರ ಗ್ರಾಹಕರು ಮತ್ತು 120 ಸಹಕಾರಿ ನಿಯಮಿತಗಳ ಹಣವೂ ಬ್ಯಾಂಕ್‌ನಲ್ಲಿದೆ. ಇವರಿಗೆ ಯಾವ ಬಗೆಯ ಪರಿಹಾರ ನೀಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ’ ಎಂದು ಹಲವರು ಕಳವಳ ವ್ಯಕ್ತಪಡಿಸಿದರು.

ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕ ಡಾ.ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು,‘ಕಷ್ಟ‍ಪಟ್ಟು ದುಡಿದು ಕೂಡಿಟ್ಟಿದ್ದ ಹಣ ಕಳೆದುಕೊಂಡ ಠೇವಣಿದಾರರು ಕಂಗಾಲಾಗಿದ್ದಾರೆ. ಅವರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗುತ್ತಿಲ್ಲ. ಪ್ರಕರಣದ ತನಿಖೆಯನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲಾಗುತ್ತಿದೆ. ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರವೂ ನಡೆಯುತ್ತಿದೆ. ಬಸವನಗುಡಿ ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ ಅವರು ವಂಚಕರ ಪರ ನಿಲ್ಲದೆ, ಹೂಡಿಕೆದಾರರ ಹಿತ ಕಾಯಬೇಕು’ ಎಂದರು.

ಕಾಂಗ್ರೆಸ್‌ ಮುಖಂಡ ಪ್ರೊ.ಕೆ.ಇ.ರಾಧಾಕೃಷ್ಣ, ‘ನನ್ನಂತೆ ಅನೇಕ ಮಂದಿ ಹಣ ಕಳೆದುಕೊಂಡಿದ್ದಾರೆ. ಕಷ್ಟಕಾಲದಲ್ಲಿ ನೆರವಾಗಬಹುದೆಂಬ ಆಸೆಯಿಂದ ಮಕ್ಕಳಿಗೆ ಗೊತ್ತಿಲ್ಲದಂತೆ ಲಕ್ಷಾಂತರ ರೂಪಾಯಿ ಠೇವಣಿ ಇಟ್ಟಿದ್ದವರೆಲ್ಲ ನೋವಿನಿಂದ ದಿನ ದೂಡುವಂತಾಗಿದೆ’ ಎಂದು ತಿಳಿಸಿದರು.

ಬೆಂಗಳೂರಿನ ಶ್ರೀಮದ್ ಉತ್ತರಾಧಿಮಠದ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಸತ್ಯಧ್ಯಾನಾಚಾರ್ಯ, ‘ಕಳೆದುಕೊಂಡಿರುವ ಹಣ ಮತ್ತೆ ನಮ್ಮ ಕೈಸೇರಲೇಬೇಕು. ಇದಕ್ಕಾಗಿ ಲೌಖಿಕ ಮತ್ತು ಆಧ್ಯಾತ್ಮಿಕ ಸಹಕಾರ ನೀಡಲು ಸಿದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT