ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕರಿಗೆ ಪೂರ್ಣ ವಿರಾಮವಿಲ್ಲ: ಜಿ. ವೆಂಕಟೇಶ್

ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ಅಭಿಮತ *ಗುರುರಾಜ ಕರಜಗಿ ಅವರ ‘ಸಾಕ್ಷಿ’ ಕೃತಿ ಬಿಡುಗಡೆ
Published : 18 ಆಗಸ್ಟ್ 2024, 14:24 IST
Last Updated : 18 ಆಗಸ್ಟ್ 2024, 14:24 IST
ಫಾಲೋ ಮಾಡಿ
Comments

ಬೆಂಗಳೂರು: ‘ಶಿಕ್ಷಕರಿಗೆ ಪೂರ್ಣ ವಿರಾಮ ಇರುವುದಿಲ್ಲ. ಶಿಕ್ಷಕರಾದವರು ಪ್ರತಿನಿತ್ಯ ಅಧ್ಯಯನ ಮಾಡಿ, ತಮ್ಮ ತಿಳಿವಳಿಕೆಯನ್ನು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಬಳಸಬೇಕು’ ಎಂದು ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ತಿಳಿಸಿದರು. 

ಲೋಕ ಶಿಕ್ಷಣ ಟ್ರಸ್ಟ್ ಗ್ರಂಥಮಾಲೆ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗುರುರಾಜ ಕರಜಗಿ ಅವರ ‘ಸಾಕ್ಷಿ’ ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು.

‘ಇವತ್ತಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶೇ 90 ಹಾಗೂ ಅದಕ್ಕಿಂತ ಹೆಚ್ಚು ಅಂಕ ಪಡೆದವರನ್ನು ರ್‍ಯಾಂಕ್ ವಿದ್ಯಾರ್ಥಿಗಳೆಂದು ಪರಿಗಣಿಸುತ್ತೇವೆ. ಆದರೆ, ಅಧಿಕ ಅಂಕ ಪಡೆದವರೆಲ್ಲರೂ ಜೀವನದಲ್ಲಿ ರ್‍ಯಾಂಕ್ ಪಡೆಯುತ್ತಾರೆ ಎನ್ನಲು ಸಾಧ್ಯವಿಲ್ಲ. ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಸೋತಿರುವ, ಶೇ 35 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿರುವ ಉದಾಹರಣೆಗಳಿವೆ. ಆದ್ದರಿಂದ ಶೈಕ್ಷಣಿಕ ದೃಷ್ಟಿಕೋನ ಬದಲಾಗಬೇಕಿದೆ. ಶಿಕ್ಷಕರಾದವರೂ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಕಡೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು. 

‘ಪಬ್ಲಿಕ್ ಟಿವಿ’ ಮುಖ್ಯಸ್ಥ ಎಚ್.ಆರ್. ರಂಗನಾಥ್, ‘ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಯುವ ಪೀಳಿಗೆಗೆ ಆದರ್ಶ ವ್ಯಕ್ತಿಗಳು ಕಾಣಸಿಗುತ್ತಿಲ್ಲ. ಜೀವನಾನುಭವ, ಜನರ ಸಂಪರ್ಕದಿಂದ ವಂಚಿತರಾಗುತ್ತಿದ್ದಾರೆ. ಕೊಲೆ ಮಾಡಿದವರು, ಭ್ರಷ್ಟಾಚಾರಿಗಳು, ಮೋಸಗಾರರನ್ನೂ ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮರೆವಿನ ಶಕ್ತಿ ಹೊಂದಿದವರು ಹೆಚ್ಚು ನೆಮ್ಮದಿಯಿಂದ ಇರುತ್ತಾರೆ’ ಎಂದು ಹೇಳಿದರು. 

ಕೃತಿಯ ಲೇಖಕ ಗುರುರಾಜ ಕರಜಗಿ, ‘ಎಲ್ಲಿ ಒಳ್ಳೆಯ ಅಂಶಗಳು ಇರುತ್ತವೆಯೋ ಅವನ್ನು ಆರಿಸಿಕೊಂಡು ಜೀವಿಸಬೇಕು. ಕೃತಿಯಲ್ಲಿ ಒಳ್ಳೆಯ ನೆನಪುಗಳನ್ನು ಮಾತ್ರ ದಾಖಲಿಸಿದ್ದೇನೆ’ ಎಂದರು. 

ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಯು.ಬಿ. ವೆಂಕಟೇಶ್, ‘ಗುರುರಾಜ ಕರಜಗಿ ಅವರು ಪ್ರಪಂಚಕ್ಕೆ ಜ್ಞಾನ ನೀಡುವ ಶಕ್ತಿಯಾಗಿದ್ದಾರೆ. ನಮ್ಮ ನೆಲದ ಪರಿಚಯವನ್ನು ವಿದೇಶಗಳಿಗೂ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT