ಸೋಮವಾರ, ಜನವರಿ 20, 2020
20 °C
ಗೋಲಿಬಾರ್‌: ರಾಜ್ಯ ಸರ್ಕಾರಕ್ಕೆ ಎಚ್‌ಡಿಕೆ ಪ್ರಶ್ನೆ

ಇಬ್ಬರ ‘ಬಲಿ’ ಯಾಕಾಗಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಇಬ್ಬರು ಅಮಾಯಕರನ್ನು ರಾಜ್ಯ ಸರ್ಕಾರ ಗೋಲಿಬಾರ್ ನಡೆಸಿ ‘ಬಲಿ’ ತೆಗೆದುಕೊಂಡಿದ್ದು ಯಾವ ಕಾರಣಕ್ಕೆ? ಯಾರನ್ನು ಮೆಚ್ಚಿಸಲು ಇಂತಹ ಮತಿಗೇಡಿ ನಿರ್ಧಾರ ತೆಗೆದುಕೊಂಡಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಗುರುವಾರ ಇಬ್ಬರು ಗೋಲಿಬಾರ್‌ಗೆ ಬಲಿಯಾದ ಘಟನೆ ಹಿನ್ನೆಲೆಯಲ್ಲಿ ಅವರು ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿ, ನಾಲ್ಕು ತಿಂಗಳ ‘ಪವಿತ್ರ ಸರ್ಕಾರ’ದ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೆಚ್ಚಿಸಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಮಾಯಕರ ಮೇಲೆ ಗುಂಡು ಸಿಡಿಸಿತೆ? ಅಧಿಕಾರಿಗಳು ತಾವಾಗಿಯೇ ಶಾಂತಿಯುತ ಪ್ರತಿಭಟನೆ ತಹಬದಿಗೆ ತರಲು ಅವಿವೇಕದ ನಿರ್ಧಾರ ಕೈಗೊಂಡರೆ? ರಾಜ್ಯ ಸರ್ಕಾರ ಶೌರ್ಯ ಪ್ರದರ್ಶನಕ್ಕೆ ಇಂತಹ ಆದೇಶ ನೀಡಿತೆ? ಎಂದು ಕೇಳಿದ್ದಾರೆ. ಪೋಲೀಸರ ಗುಂಡಿಗೆ ಬಲಿಯಾದ ಅಮಾಯಕರ ಕುಟುಂಬದ ಜವಾಬ್ದಾರಿ ಹೊರುವವರು ಯಾರು? ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯಾರೂ ಪ್ರತಿಭಟಿಸಲೇಬಾರದೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು