ಸೋಮವಾರ, ಜನವರಿ 20, 2020
26 °C

17 ಮಂದಿಯೂ ಸಚಿವ ಸ್ಥಾನಕ್ಕೆ ಅರ್ಹರು: ಎಚ್‌ ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜೀನಾಮೆ ನೀಡಿ ಹೊರಬಂದ 17 ಶಾಸಕರೂ ಸಚಿವ ಸ್ಥಾನಕ್ಕೆ ಅರ್ಹರು. ಆದರೆ, ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದು ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಚುನಾವಣೆಯಲ್ಲಿ ಸೋತ ಶಾಸಕರು ಸಚಿವರಾಗಬಾರದು ಎಂದು ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ನೀವು ಅಪವಿತ್ರರಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಪವಿತ್ರರಾಗಿ ಎಂದು ಸೂಚಿಸಿತು. ಅದರಂತೆ ನಡೆದ ಉಪಚುನಾವಣೆಯಲ್ಲಿ 12 ಮಂದಿ ಗೆಲುವು ಸಾಧಿಸಿ, ಇಬ್ಬರು ಸೋತಿದ್ದೇವೆ. ಇಲ್ಲಿ ಸೋಲು ಗೆಲುವಿನ ಪ್ರಶ್ನೆ ಬರುವುದಿಲ್ಲ. ಸಚಿವ ಸ್ಥಾನಕ್ಕೆ ಎಲ್ಲರೂ ಅರ್ಹರು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ನಾಲಿಗೆ ಮೇಲೆ ನಿಂತ ಜನನಾಯಕ ಯಡಿಯೂರಪ್ಪ ಒಬ್ಬರೇ. ನಾನು ಮುಖ್ಯಮಂತ್ರಿಗಳನ್ನು ನನ್ನ ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಕುರಿತಂತೆ ಭೇಟಿಯಾಗಿದ್ದೇನೆಯೇ ಹೊರತು, ಸಚಿವ ಸ್ಥಾನಕ್ಕಾಗಿ ಅಲ್ಲ. ಎಚ್.ಡಿ.ದೇವೇಗೌಡರು ಏಕಾಂಗಿಯಾಗಿ ಜೆಡಿಎಸ್‌ ಪಕ್ಷ ಕಟ್ಟಿದರು. ಪಕ್ಷ ಸಂಘಟನೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರ ಪಾತ್ರವಿಲ್ಲ’ ಎಂದರು.

ಪ್ರಜಾಪ್ರಭುತ್ವ ಸ್ವತಂತ್ರವಾಯಿತು: ‘ಪ್ರಜಾ‍ಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುತ್ತಿರುವ ಜೆಡಿಎಸ್‌, ಕಾಂಗ್ರೆಸ್‌ ನಾಯಕರಿಂದಲೇ ರಾಜ್ಯದಲ್ಲಿ ಪ್ರಜಾಪ್ರಭುತ್ವ ನರಳಿ ಒದ್ದಾಡುತ್ತಿತ್ತು. ನಾವು ಅಧಿಕಾರಕ್ಕಾಗಿ ಸರ್ಕಾರದ ಪತನದಲ್ಲಿ ಭಾಗಿಯಾಗಿಲ್ಲ. ರಾಜ್ಯದಲ್ಲಿ ಪ್ರಜಾತಂತ್ರದ ಉಳಿವಿಗಾಗಿ ರಾಜೀನಾಮೆ ನೀಡಬೇಕಾಯಿತು. ಇದರಿಂದ ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಬಂಧನದಿಂದ ಬಿಡಿಸಿದಂತಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು