ಗುರುವಾರ , ಆಗಸ್ಟ್ 18, 2022
23 °C
ಪ್ರಕರಣಗಳ ಸಂಖ್ಯೆ 1,557ರಿಂದ 458ಕ್ಕೆ ಇಳಿಕೆ: ಜ್ವರದಿಂದ ಬಳಲಿದವರು ಚೇತರಿಕೆ

ಕೊರೊನಾ ವೈರಸ್‌ ಪರಿಣಾಮದಿಂದ ಎಚ್‌1ಎನ್1‌ ಸ್ತಬ್ಧ!

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‍ಪ್ರತಿ ವರ್ಷ ಸಾವಿರಾರು ಮಂದಿಯನ್ನು ಕಾಡುತ್ತಿದ್ದ ಎಚ್‌1ಎನ್‌1 ಜ್ವರವು  ಕೊರೊನಾ ದಿಂದಾಗಿ ಸ್ತಬ್ಧವಾಗಿದೆ. ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಮುಖಗವಸು ಬಳಕೆ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ಕಳೆದ ವರ್ಷ 96 ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಸೋಂಕು ಈ ವರ್ಷ ನಿಯಂತ್ರಣಕ್ಕೆ ಬಂದಿದೆ. 

ರಾಜ್ಯದಲ್ಲಿ ಕೊರೊನಾ ಸೋಂಕು ತನ್ನ ದಾಳಿಯನ್ನು ಮುಂದುವರಿಸಿದ್ದರೂ ಅದನ್ನು ಹತ್ತಿಕ್ಕಲು ಕೈಗೊಂಡ ಕ್ರಮಗಳು ಎಚ್‌1ಎನ್‌1 ದೂರವಾಗಿಸಲು ಸಹಕಾರಿಯಾಗಿದೆ. ಈಗಾಗಲೇ ಅದರ ಫಲಿತಾಂಶವೂ ರಾಜ್ಯದಲ್ಲಿ ಗೋಚರಿಸಿದೆ. ಕಳೆದ ವರ್ಷ ಈ ವೇಳೆಗಾಗಲೇ 1,557 ಮಂದಿ ಎಚ್‌1ಎನ್‌1 ಸೋಂಕಿಗೆ ಬಳಲಿ, 56 ಮಂದಿ ಮೃತಪಟ್ಟಿದ್ದರು. ಆದರೆ, ಈ ವರ್ಷ ಕೇವಲ 458 ಪ್ರಕರಣಗಳು ಮಾತ್ರ ವರದಿಯಾಗಿದ್ದು, ಮೂರು ಮಂದಿ ನಿಧನರಾಗಿದ್ದಾರೆ. ಕೊರೊನಾ ಮಾದರಿಯಲ್ಲಿಯೇ ಈ ಸೋಂಕು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಆದರೆ, ಕೊರೊನಾ ಸೋಂಕಿನಷ್ಟು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿಲ್ಲ. 

ಕೋವಿಡ್‌ ಪ್ರಕರಣ ವರದಿಯಾಗುವ ಮುನ್ನ ರಾಜ್ಯದಲ್ಲಿ 208 ಎಚ್‌1ಎನ್‌1 ಪ್ರಕರಣಗಳು ವರದಿಯಾಗಿದ್ದವು. ಇದರಿಂದಾಗಿ ಈ ವರ್ಷ ಕೂಡ ಹೆಚ್ಚಿನ ಜನರನ್ನು ಕಾಡಿ, ಅಧಿಕ ಮಂದಿಯನ್ನು ಬಲಿತೆಗೆದುಕೊಳ್ಳುವ ಆತಂಕ ಮನೆ ಮಾಡಿತ್ತು. ರಾಜ್ಯದಲ್ಲಿ ಕೋವಿಡ್‌ ಭೀತಿ ಮನೆ ಮಾಡುತ್ತಿದ್ದಂತೆ ಅಂತರ ಕಾಯ್ದುಕೊಳ್ಳುವಿಕೆ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಯಿತು. ಇದರಿಂದಾಗಿ ಮುಂದಿನ ಎರಡುವರೆ ತಿಂಗಳಲ್ಲಿ 250 ಪ್ರಕರಣಗಳು ಮಾತ್ರ ವರದಿಯಾಗಿದ್ದು, ಜ್ವರದಿಂದ ಬಳಲಿದ ಎಲ್ಲರೂ ಚೇತರಿಸಿಕೊಂಡಿದ್ದಾರೆ. 

ಬದಲಾಗದ ಸ್ಥಿತಿ: ಎಚ್‌1ಎನ್‌1 ಸೋಂಕು ಕಳೆದ ವರ್ಷ ಬೆಂಗಳೂರು ನಗರ, ದಕ್ಷಿಣ ಕನ್ನಡ,  ಮೈಸೂರು, ಶಿವಮೊಗ್ಗ, ಉಡುಪಿ, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಯನ್ನು ಹೆಚ್ಚಾಗಿ ಕಾಡಿತ್ತು. 

‘ಎಚ್‌1ಎನ್‌1 ಕೂಡ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಹೊಮ್ಮುವ ತುಂತುರುವಿನಿಂದ ಹರಡುತ್ತದೆ. ಕಳೆದ ವರ್ಷದಂತೆ ಈ ವರ್ಷ ಕೂಡ ಸೋಂಕು ರಾಜ್ಯದ ಜನತೆಯನ್ನು ಕಾಡಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿತ್ತು. ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಹಾಗೂ ಎಲ್ಲೆಡೆ ಸೋಂಕು ನಿವಾರಕವನ್ನು ಸಿಂಪಡಣೆ ಮಾಡಿದ ಪರಿಣಾಮ ಎಚ್‌1ಎನ್‌1 ನಿಯಂತ್ರಣಕ್ಕೆ ಬಂದಿದೆ’ ಎಂದು ಬೆಂಗಳೂರಿನ ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯ ಅಧೀಕ್ಷಕ ಡಾ. ಅನ್ಸರ್ ಅಹಮದ್ ತಿಳಿಸಿದರು.  

10 ವರ್ಷಗಳಲ್ಲಿ 532ಮಂದಿ ಸಾವು

ರಾಜ್ಯದಲ್ಲಿ ಎಚ್‌1ಎನ್‌1 ಸೋಂಕಿಗೆ 10 ವರ್ಷಗಳಲ್ಲಿ 532 ಮಂದಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಈ ಸೋಂಕಿಗೆ ಕೂಡ ನಿಗದಿತ ಚಿಕಿತ್ಸೆ ಲಭ್ಯವಿಲ್ಲ. ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸೋಂಕನ್ನು ಶಮನ ಮಾಡಲಾಗುತ್ತದೆ. 

‘ಜ್ವರ, ಶೀತ ಸೇರದಂತೆ ವಿವಿಧ ಲಕ್ಷಣಗಳು ಸೋಂಕು ದೇಹ ‍ಪ್ರವೇಶಿಸಿದ ಬಳಿಕ ಕಾಣಿಸಿಕೊಳ್ಳುತ್ತವೆ. ಮೂರರಿಂದ ಐದು ದಿನಗಳ ಬಳಿಕ ಲಕ್ಷಣಗಳು ಬೆಳಕಿಗೆ ಬರುತ್ತವೆ. ವ್ಯಕ್ತಿ ರೋಗ ಬಂದಾಗಿನಿಂದ ಹತ್ತು ದಿನಗಳ ಅವಧಿಯಲ್ಲಿ ಇತರರಿಗೆ ಸೋಂಕು ಹರಡುವ ಸಾಧ್ಯತೆಗಳಿವೆ’ ಎಂದು ಡಾ. ಅನ್ಸರ್ ಅಹಮದ್ ಮಾಹಿತಿ ನೀಡಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು