ಸೋಮವಾರ, ಫೆಬ್ರವರಿ 17, 2020
21 °C

ಅವಿವಾಹಿತೆಗೆ ಹೆರಿಗೆ; ₹32 ಸಾವಿರಕ್ಕೆ ಮಗು ಮಾರಾಟ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅವಿವಾಹಿತ ಯುವತಿಗೆ ಜನಿಸಿದ ಮಗುವನ್ನು ಆಕೆಯ ತಾಯಿಯೇ ₹32 ಸಾವಿರಕ್ಕೆ ಬೇರೆ ದಂಪತಿಗೆ ಮಾರಾಟ ಮಾಡಿರುವ ಪ್ರಕರಣ ಬಯಲಾಗಿದೆ.

ಮಾರಾಟವಾಗಿದ್ದ ಮಗುವನ್ನು ರಕ್ಷಿಸಿರುವ ಮಹಿಳಾ ಸಹಾಯವಾಣಿ ಕೇಂದ್ರದ ಸಿಬ್ಬಂದಿ ತಾಯಿ ಮಡಿಲು ಸೇರಿಸಿದ್ದಾರೆ. ಮಗು ಮಾರಿದ್ದ ಆರೋಪದಡಿ ಮಗುವಿನ ಅಜ್ಜಿ, ಖಾಸಗಿ ಆಸ್ಪತ್ರೆ ವೈದ್ಯೆ ಹಾಗೂ ಮಗು ಖರೀದಿಸಿದ್ದ ದಂಪತಿ ವಿರುದ್ಧ ಹಲಸೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಸ್ನಾತಕೋತ್ತರ ಪದವೀಧರೆಯಾಗಿರುವ 23 ವರ್ಷದ ಯುವತಿ, ತಾಯಿ ಜೊತೆ ನೆಲೆಸಿದ್ದಾಳೆ. ತನ್ನದೇ ಪ್ರದೇಶದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತನಿಂದಲೇ ಗರ್ಭ ಧರಿಸಿದ್ದಳು. ಈ ವಿಷಯ ಗೊತ್ತಾಗಿ ಮಗುವನ್ನು ತೆಗೆಸುವಂತೆ ತಾಯಿ ಒತ್ತಾಯಿಸಿದ್ದಳು. ಅದಕ್ಕೆ ಯುವತಿ ಒಪ್ಪಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ನ. 13ರಂದು ಖಾಸಗಿ ಆಸ್ಪತ್ರೆಯಲ್ಲಿ ಯುವತಿಗೆ ಹೆರಿಗೆಯಾಗಿ ಹೆಣ್ಣು ಮಗು ಜನಿಸಿತ್ತು. ಮಗು ಹುಟ್ಟುತ್ತಲೇ ಮೃತಪಟ್ಟಿರುವುದಾಗಿ ಮಗಳಿಗೆ ಸುಳ್ಳು ಹೇಳಿದ್ದ ತಾಯಿ, ಆ ಮಗುವನ್ನೇ ವೈದ್ಯೆಯ ಮೂಲಕ ಬೇರೊಬ್ಬ ದಂಪತಿಗೆ ಮಾರಾಟ ಮಾಡಿದ್ದಳು.’

‘ಹೆರಿಗೆಯಾದ ಹತ್ತು ದಿನದ ಬಳಿಕ ಆಸ್ಪತ್ರೆಯ ಸಿಬ್ಬಂದಿಯಿಂದ ಯುವತಿ ನಿಜಾಂಶ ಗೊತ್ತಾಗಿತ್ತು. ನೊಂದ ಯುವತಿ ಕಮಿಷನರ್‌ ಕಚೇರಿ ಆವರಣದಲ್ಲಿರುವ ವನಿತಾ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ದೂರು ನೀಡಿದ್ದಳು. ಅಲ್ಲಿಯ ಸಿಬ್ಬಂದಿಯೇ ಪೂರ್ವ ವಿಭಾಗದ ಡಿಸಿಪಿ ಎಸ್.ಡಿ. ಶರಣಪ್ಪ ಅವರ ಮೂಲಕ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ಮಗುವಿಗೆ ಜನ್ಮ ನೀಡಿರುವ ಯುವತಿಯನ್ನು ಮದುವೆಯಾಗಲು ಯುವಕ ಒಪ್ಪುತ್ತಿಲ್ಲ. ಇದು ಸಹ ತಾಯಿ ಆಕ್ರೋಶಕ್ಕೆ ಕಾರಣವಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು