ಭಾನುವಾರ, ಜನವರಿ 26, 2020
29 °C
ರಾಮನಗರ ಹೆಸರು ಬದಲಿಸಿದರೆ ಹೋರಾಟ

ಶಿವಮೊಗ್ಗಕ್ಕೆ ಬೆಂಗಳೂರು ಎಂದು ಹೆಸರಿಡುವಿರಾ?: ಕುಮಾರಸ್ವಾಮಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ರಾಮನಗರವನ್ನು ‘ನವಬೆಂಗಳೂರು’ ಎಂದು ಬದಲಾಯಿಸುವ ಸರ್ಕಾರದ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಸರಣಿ ಟ್ವೀಟ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.

‘ಅಷ್ಟಕ್ಕೂ ಹೆಸರಿನಲ್ಲಿ ಏನಿದೆ. ಬೆಂಗಳೂರು ಎಂದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವೇ? ಹಾಗಿದ್ದರೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಇದೇ ಹೆಸರಿಡಬಹುದಲ್ಲವೇ? ಅದು ನಿಮಗೆ ಸಾಧ್ಯವೇ? ಶಿವಮೊಗ್ಗಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲಿರೇ? ದಕ್ಷಿಣ ಕನ್ನಡಕ್ಕೂ ಇದೇ ಹೆಸರಿಡುತ್ತೀರಾ? ಎಂದು ಕೇಳಿದ್ದಾರೆ.

ಹೆಸರು ಬದಲಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

‘ರಾಮನಗರದ ಪಕ್ಕದಲ್ಲೇ ಕಾವೇರಿ ನದಿ ಹರಿಯುತ್ತದೆ. ಚಿನ್ನದಂತಹ ಭೂಮಿ ಇದೆ. ಬೆಂಗಳೂರಿಗೆ ಪಕ್ಕದಲ್ಲೇ ಇರುವ ಸಂಪದ್ಭರಿತ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಹಂಚಲು ಹೆಸರೊಂದು ಅಡ್ಡಿಯಾಗಿದೆ. ಇದಕ್ಕೆ ನನ್ನ ಮೇಲಿನ ರಾಜಕೀಯ ವೈಷಮ್ಯವೂ ಸೇರಿಕೊಂಡಿದೆ’ ಎಂದು ಆರೋಪಿಸಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಸಮಸ್ಯೆಗಳನ್ನು ರಾಮನಗರಕ್ಕೆ ವಿಸ್ತರಿಸಬಾರದು. ಇಲ್ಲಿಗೆ ಕೋಟಿ ಕುಳಗಳು ಬರದಿದ್ದರೂ ಬೇಡ. ಭೂಮಿ ಲೂಟಿಯಾಗದೆ, ಕೆರೆಗಳು ಮುಚ್ಚದೇ ಇರಲಿ. ಸಮೃದ್ಧ ಜಾನಪದ ಸಂಸ್ಕೃತಿ ಅಳಿಯದಿರಲಿ. ಜನರ ಮುಗ್ಧತೆ ಬಲಿಯಾಗದಿರಲಿ ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಜಮೀನು ಹೊಂದಬೇಕು ಎಂಬುದು ಹಣವಂತರ ಬಯಕೆ. ಇದರಲ್ಲಿ ಉತ್ತರ ಭಾರತೀಯರೇ ಹೆಚ್ಚು. ಈಗಾಗಲೇ ಸಾಕಷ್ಟು ಭೂಮಿ ಫಾರಂ ಹೌಸ್‌ಗಳಿಗೆ ಬಲಿಯಾಗಿದೆ. ಜನರನ್ನು ಕೃಷಿಯಿಂದ ಹಿಮ್ಮುಖವಾಗುವಂತೆ ಮಾಡಲಾಗಿದೆ. ರಾಮನಗರದ ಹೆಸರು ಬದಲಾವಣೆ ವಿಚಾರ ಇಂತಹವರಿಗಾಗಿಯೇ ಹೊರತು, ರೈತರಿಗಲ್ಲ ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಸುತ್ತ ಸಪ್ತ ಬೆಟ್ಟಗಳಿವೆ. ಏಳು ಬೆಟ್ಟಗಳ ನಡುವೆ ಇರುವುದೇ ರಾಮದೇವರ ಬೆಟ್ಟ. ಅದಕ್ಕಾಗಿಯೇ ಈ ಹೆಸರು ಇಡಲಾಗಿದೆ. ಇದನ್ನೂ ಮೀರಿ ಹೆಸರು ಬದಲಿಸಿದರೆ, ಅದು ಬಿಜೆಪಿಯೇ ಪ್ರತಿಪಾದಿಸುವ ಸಿದ್ಧಾಂತಗಳಿಗೆ ಮಾಡಿದ ಅಪಚಾರ. ರಾಮನ ಊರಿಗೆ ಆಗುವ ಅಪಮಾನ ಎಂದು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟಿದ್ದಾರೆ.

‘ಕೆಂಗಲ್‌ಗೆ ಅಪಮಾನ’

‘ರಾಮನಗರ ತಾಲ್ಲೂಕು ಮೊದಲಿಗೆ ‘ಕ್ಲೋಸ್ ಪೇಟೆ’ ಎಂದಿತ್ತು. ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ರಾಮನಗರ ಎಂದು ನಾಮಕರಣ ಮಾಡಿದ್ದರು. ಇದೇ ಹೆಸರನ್ನು ನಾನು ಇಡೀ ಜಿಲ್ಲೆಗೆ ಇಟ್ಟಿದ್ದೇನೆ. ಅದನ್ನು ಬದಲಾಯಿಸುವುದು ಅವರಿಗೆ ಮಾಡುವ ಅಪಮಾನ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಗಂಗರು ಆಳಿದ ನಾಡು. ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಜನ್ಮಭೂಮಿ. ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಟ್ಟ ಶಕ್ತಿಸ್ಥಳ. ಹೆಸರು ಬದಲಿಸಿದರೆ ಜಿಲ್ಲೆಯ ಐತಿಹ್ಯ ಅಳಿಯಲಿದೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು