ಬುಧವಾರ, ಸೆಪ್ಟೆಂಬರ್ 22, 2021
25 °C
ನಮ್ಮದು ಕೈಗಾರಿಕಾ ಸ್ನೇಹಿ ಸರ್ಕಾರ: ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಪಾದನೆ

ಪೆರಿಫೆರಲ್‌ ವರ್ತುಲ ರಸ್ತೆಗೆ ₹1,500 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಸರ್ಕಾರ ಈಗಾಗಲೇ ₹1,500 ಕೋಟಿ ಹಣ ಬಿಡುಗಡೆ ಮಾಡಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. 

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ವಾಣಿಜ್ಯ ಸ್ಪಂದನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೆರಿಫೆರಲ್‌ ರಸ್ತೆ ನಿರ್ಮಾಣ ಯೋಜನೆಗೆ 2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟೆಂಡರ್‌ ಆಹ್ವಾನಿಸಲಾಗಿತ್ತು. ಬಳಿಕ ನನ್ನ ಸರ್ಕಾರ ಬಿದ್ದುಹೋಯಿತು. ನಂತರ, ಬಹುಮತದ ಎರಡು ಸರ್ಕಾರಗಳು ಬಂದರೂ ಈ ಯೋಜನೆ ಪ್ರಾರಂಭವಾಗಲಿಲ್ಲ. 10 ವರ್ಷಗಳ ನಂತರ ಈ ಯೋಜನೆಯನ್ನು ಚುರುಕುಗೊಳಿಸಲಾಗಿದೆ’ ಎಂದು ವಿವರಿಸಿದರು. 

‘ಅಂದು ಈ ಯೋಜನೆಯ ಅಂದಾಜು ವೆಚ್ಚ ₹3,800 ಕೋಟಿ ಆಗಿತ್ತು. ಈಗ ₹17 ಸಾವಿರ ಕೋಟಿ ಆಗಿದೆ. ಭೂಸ್ವಾಧೀನ ಪ್ರಕ್ರಿಯೆಗೇ ₹4,500 ಕೋಟಿ ಬೇಕಾಗುತ್ತದೆ’ ಎಂದರು. 

‘ಪಿಆರ್‌ಆರ್‌ಗೆ ಸಂಬಂಧಿಸಿದಂತೆ 2015ರಲ್ಲಿ ಹಸಿರು ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಅಧಿಕಾರಿಗಳು ಇದನ್ನು ಗಮನಕ್ಕೆ ತಂದಿರಲಿಲ್ಲ. ಈ ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ಇಲ್ಲದಿರುತ್ತಿದ್ದರೆ ಈ ವೇಳೆಗಾಗಲೇ ಕಾಮಗಾರಿ ಪ್ರಾರಂಭವಾಗಿರುತ್ತಿತ್ತು’ ಎಂದರು. 

ಕಾರಿಡಾರ್‌ಗೆ ವಿರೋಧ:  ‘ನಗರದೊಳಗೆ 102 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್ ನಿರ್ಮಾಣಕ್ಕೆ ಮುಂದಾದಾಗಲೂ ವಿರೋಧ ವ್ಯಕ್ತವಾಗಿದೆ. ಸಂಚಾರ ದಟ್ಟಣೆ ಸಮಸ್ಯೆಗೆ ಯಾವ ರೀತಿ ಪರಿಹಾರ ಕೈಗೊಳ್ಳಬೇಕು ಎಂದು ವಿರೋಧಿಸುವವರೇ ಹೇಳಬೇಕು. ಈ ಕಾರಿಡಾರ್ ನಿರ್ಮಾಣಕ್ಕೆ ₹24 ಸಾವಿರ ಕೋಟಿ ಬೇಕಾಗುತ್ತದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಬರಬೇಕಾಗಿದೆ’ ಎಂದು ಹೇಳಿದರು. 

ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ, ‘ಭವಿಷ್ಯನಿಧಿ, ವಿಮೆ ಪರಿಹಾರ ಕುರಿತ ನಿಯಮಗಳನ್ನು ಉಲ್ಲಂಘಿಸಿರುವ ಉದ್ಯಮಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತಿದೆ. ಕಾರ್ಖಾನೆಯ ಹೊರಗೆ ಉದ್ಯೋಗಿಗೆ ಅಪಘಾತವಾದರೂ, ಕಂಪನಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು’ ಎಂದರು. 

‘ಉದ್ದಿಮೆ ಪರವಾನಗಿ ಪಡೆಯಲು ಉದ್ಯಮಿಗಳು ಹಲವು ಬಾರಿ ಓಡಾಡಬೇಕು. ವ್ಯಾಪಾರಿಗಳಿಗೆ ಕಾಯಂ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಮನವಿ ಮಾಡಿದರು. ಕೈಗಾರಿಕಾ ಕ್ಷೇತ್ರದ ಸಮಸ್ಯೆಗಳನ್ನು ಉದ್ಯಮಿಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.

ಕೈಗಾರಿಕೋದ್ಯಮಿಗಳ ಪ್ರಮುಖ ಬೇಡಿಕೆಗಳು

* ಎಪಿಎಂಸಿ ಸೆಸ್‌ ಪ್ರಮಾಣವನ್ನು ಶೇ 1.5ಯಿಂದ ಶೇ 1ಕ್ಕೆ ಇಳಿಸಬೇಕು 

* ಎಪಿಎಂಸಿಯಲ್ಲಿ ಫಾರಂ ನಂ. 35–ಬಿಯನ್ನು ರದ್ದುಪಡಿಸಬೇಕು 

* ಕೈಗಾರಿಕೆಗೆ ಹಸ್ತಾಂತರಿಸಿದ ಜಮೀನಿನ ಬೆಲೆಯನ್ನು 2 ವರ್ಷಗಳಲ್ಲಿ ನಿರ್ಧರಿಸಬೇಕು

* ಹೊಸ ಕೈಗಾರಿಕಾ ನೀತಿ ರಚಿಸುವಾಗ ವಾಣಿಜ್ಯೋದ್ಯಮ ಸಂಸ್ಥೆಗಳ ಸದಸ್ಯರನ್ನು ಸಮಿತಿಯಲ್ಲಿ ಸೇರಿಸಬೇಕು 

* ಜಿಲ್ಲೆಗಳಲ್ಲಿ ಆಸ್ತಿ ತೆರಿಗೆ ನಿಗದಿ ಬಗ್ಗೆ ಏಕರೂಪದ ನಿಯಮಗಳನ್ನು ಜಾರಿಗೊಳಿಸಬೇಕು

* ಕೈಗಾರಿಕಾ ಕ್ಷೇತ್ರಕ್ಕೆ ಪ್ರತ್ಯೇಕ ಆಸ್ತಿ ತೆರಿಗೆ ನಿರ್ಧರಿಸಬೇಕು 

‘ನೆಲಮಂಗಲ– ನಿವೇಶನದ ದರ ಇಳಿಸಿ’

‘ನೆಲಮಂಗಲ ಕೈಗಾರಿಕಾ ನಿವೇಶನದ ಬೆಲೆಯ ಕುರಿತು ಚರ್ಚೆ ನಡೆಯುತ್ತಿದೆ. ಚದರ ಅಡಿಗೆ ₹800 ದರ ನಿಗದಿ ಮಾಡಲಾಗಿದೆ. ಕೈಗಾರಿಕೋದ್ಯಮಿಗಳು ಚದರ ಅಡಿಗೆ ₹500ರಂತೆ ಕೇಳುತ್ತಿದ್ದಾರೆ. ದರ ಮತ್ತು ಇತರೆ ಅಂಶಗಳ ಕುರಿತು ಎಫ್‌ಕೆಸಿಸಿಐ ಅಂತಿಮ ನಿರ್ಣಯ ತೆಗೆದುಕೊಂಡು ಬಂದರೆ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಕುಮಾರಸ್ವಾಮಿ ತಿಳಿಸಿದರು. 

‘ಚೊಂಬು ಕೊಂಡೊಯ್ಯಬೇಕಿತ್ತಾ?’

‘ಗ್ರಾಮ ವಾಸ್ತವ್ಯದ ಬಗ್ಗೆ ಮಾಧ್ಯಮಗಳು ಟೀಕೆ ಮಾಡುತ್ತಿವೆ. ಯಾದಗಿರಿಯ ವಸತಿ ಶಾಲೆಯೊಂದರಲ್ಲಿ ವಾಸ್ತವ್ಯ ಮಾಡಿದ್ದಕ್ಕೆ ₹1 ಕೋಟಿ ಖರ್ಚಾಗಿದೆ. ಊಟಕ್ಕೆ ₹25 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸುಮ್ಮನೆ ಸುದ್ದಿ ಮಾಡಲಾಗುತ್ತಿದೆ’ ಎಂದು ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹರಿಹಾಯ್ದರು. 

‘ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದನ್ನೂ ಟೀಕಿಸಲಾಯಿತು. ಶಾಲೆಯವರು ಶಾಶ್ವತವಾಗಿ ಅದರ ಉಪಯೋಗ ಪಡೆಯುವುದಿಲ್ಲವೇ. ಶೌಚಾಲಯ ನಿರ್ಮಿಸದೇ ನಾನೂ ಕೂಡ, ಜನರೊಂದಿಗೆ ಚೊಂಬು ತೆಗೆದುಕೊಂಡು ಹೋಗಬೇಕಿತ್ತೇ’ ಎಂದು ಅವರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು