ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು ಇಲ್ಲ ಎನ್ನುವವನೇ ಮೂರ್ಖ: ಹರಿಹರಪುರಶ್ರೀ

Published 3 ಸೆಪ್ಟೆಂಬರ್ 2023, 14:34 IST
Last Updated 3 ಸೆಪ್ಟೆಂಬರ್ 2023, 14:34 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವರು ಇಲ್ಲ ಎಂದು ಪ್ರತಿಪಾದಿಸುವವರೇ ದೊಡ್ಡ ಮೂರ್ಖರು’ ಎಂದು ಹರಿಹರಪುರದ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಹರಿಹರಪುರ ಪೀಠ ಮತ್ತು ಚಾತುರ್ಮಾಸ್ಯ ಮಹೋತ್ಸವ ಸೇವಾ ಸಮಿತಿ ಭಾನುವಾರ ಆಯೋಜಿಸಿದ್ದ ಸಾಧಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

’ನಿರಂತರ, ಪೂರ್ಣ, ಅಖಂಡ ಜ್ಞಾನವೇ ದೇವರು. ಬುದ್ಧಿಗೆ ನಿಲುಕದ ಎಲ್ಲ ನಂಬಿಕೆಗಳನ್ನು ಮೂಢನಂಬಿಕೆ ಎಂದು ಸಾರಸಗಟಾಗಿ ಅಭಿಪ್ರಾಯ ಹೊಂದಿರುವ ಒಂದು ವರ್ಗ ಇದೆ. ದೇವರ ತತ್ವಾನುಭವದ ಪರಿಚಯವೇ ಈ ವರ್ಗಕ್ಕೆ ಇಲ್ಲ. ಬುದ್ಧಿಗೆ ನಿಲುಕದೇ ಇರುವ ವಿಚಾರದಲ್ಲಿ ತನ್ನ ನಂಬಿಕೆಯು ತನಗೆ ಅಥವಾ ಪರರಿಗೆ ಹಿಂಸೆಯನ್ನು ಉಂಟು ಮಾಡಿದರೆ ಅದು ಮೂಢನಂಬಿಕೆ. ಹಿಂಸೆ ಉಂಟು ಮಾಡದೇ ಇದ್ದರೆ ಅದು ತನ್ನ ವಿವೇಚನೆಗೆ ಬಿಟ್ಟಿದ್ದು. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ’ ಎಂದರು.

ಶಾಸಕ ಕೆ. ಗೋಪಾಲಯ್ಯ ಮಾತನಾಡಿ, ‘ಮಳೆ ಕಡಿಮೆಯಾಗಿದೆ. ಕಾವೇರಿಯಲ್ಲಿ ಇರುವ ನೀರು ತಮಿಳುನಾಡಿಗೆ ಹರಿದು ಹೋದರೆ ಬಹಳ ತೊಂದರೆಯಾಗಲಿದೆ. 1.5 ಕೋಟಿ ಜನರಿರುವ ಬೆಂಗಳೂರಿನವರೇ ಕಾವೇರಿ ನೀರು ಹೆಚ್ಚು ಬಳಸುವುದು. ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯ ಇನ್ನಿತರ ಕಡೆಗಳಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ, ಬೆಂಗಳೂರಿನ ಜನ ಬಾಯಿಮುಚ್ಚಿ ಕುಳಿತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇಸ್ರೊ ಪ್ರಾಧ್ಯಾಪಕ ಬಿ.ಎನ್‌. ಸುರೇಶ್‌, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌, ಸಂಸ್ಕೃತ ವಿದ್ವಾಂಸ ಕೆ.ಎನ್‌. ಸೂರ್ಯನಾರಾಯಣ ಅವರಿಗೆ ಸಾಧಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಿಜೆಪಿ ಮುಖಂಡ ಶ್ರೀಹರಿ ಅರವಿಂದ ಘೋಳಸಂಗಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್‌.ಎಸ್‌. ಸಚ್ಚಿದಾನಂದ ಮೂರ್ತಿ, ಚಾತುರ್ಮಾಸ್ಯ ಮಹೋತ್ಸವ ಸೇವಾ ಸಮಿತಿ ಪ್ರಧಾನ ಸಂಚಾಲಕ ಬಿ.ಎಸ್‌. ರಾಘವೇಂದ್ರ ಭಟ್‌, ಸಮಾಜದ ಪ್ರಮುಖರಾದ ರುದ್ರಮುನಿ, ನರಸಿಂಹ ಮೂರ್ತಿ, ಪ್ರವೀಣ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT