ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಕಟ್ಟಲು ನೂರಾರು ಕೋಟಿ ಬೇಕೆ?: ಕೆ. ಸುಜಾತಾ ರಾವ್‌

Last Updated 9 ಸೆಪ್ಟೆಂಬರ್ 2018, 19:14 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ವೈದ್ಯಕೀಯ ಕಾಲೇಜಿಗೆ ₹300ರಿಂದ ₹400 ಕೋಟಿ, ಆರೋಗ್ಯ ಸಂಸ್ಥೆ ಕಟ್ಟಲು ₹800 ಕೋಟಿ ಖರ್ಚು ಮಾಡಿದರೆ ಬಡವರಿಗೆ ಸೇವೆ ಸಿಗಲು ಸಾಧ್ಯವೇ?’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಕೆ.ಸುಜಾತಾ ರಾವ್‌ ಪ್ರಶ್ನಿಸಿದರು.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್‌ ಸಂಸ್ಥೆ (ಫನಾ) ಆಯೋಜಿಸಿದ್ದ ಕರ್ನಾಟಕ ಆರೋಗ್ಯ ಶೃಂಗಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಐಎಎಸ್‌ ಅಧಿಕಾರಿಗಳನ್ನು ಇಲಾಖೆಯಿಂದ ಇಲಾಖೆಗೆ ವರ್ಗಾವಣೆ ಮಾಡುವುದು ಮಾಮೂಲಿ. ಆದರೆ ನನ್ನ ಅದೃಷ್ಟ 20 ವರ್ಷ ಒಂದೇ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆರೋಗ್ಯ ವಲಯದಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ. ಆದರೆ ಇದು ಸೇವಾ ವಲಯವಾಗಿ ಉಳಿದಿಲ್ಲ. ಎಲ್ಲವೂ ಬಂಡವಾಳ ಹಾಗೂ ಲಾಭದ ಮೇಲೆ ನಿರ್ಧರಿತವಾಗಿದೆ. ಆಸ್ಪತ್ರೆಗೆ ದುಡ್ಡು ಹಾಕುವುದರಿಂದಲೇ ಎಷ್ಟೋ ಮಂದಿ ಬಡತನ ರೇಖೆಗಿಂತ ಕೆಳಗೆ ದೂಡಲ್ಪಡುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಸಾರ್ವಜನಿಕ ಆರೋಗ್ಯ ವಲಯದ ಹೂಡಿಕೆ ತೀರಾ ಕಡಿಮೆ. ಯುರೋಪಿಯನ್‌ ದೇಶಗಳಿಗೆ ಹೋಲಿಸಲು ಸಾಧ್ಯವಿಲ್ಲ. ಆದರೆ ಬಾಂಗ್ಲಾದೇಶ ಹಾಗೂ ಆಫ್ರಿಕನ್‌ ದೇಶಗಳು ಕೂಡ ಇದೇ ಸ್ಥಿತಿಯಲ್ಲಿವೆ’ ಎಂದು ಅವರು ವಿಶ್ಲೇಷಿಸಿದರು.

‘ಒಂದು ವಿದ್ಯಾ ಸಂಸ್ಥೆಗೆ ಅಗತ್ಯ ಇರುವಷ್ಟು ಹಣ ಹೂಡಿಕೆ ಮಾಡಿದರೆ ಸಾಕು. ನೂರಾರು ಎಕರೆ ಜಾಗದಲ್ಲಿಯೇ ಕಟ್ಟಡ ಕಟ್ಟಬೇಕಿಲ್ಲ. ತಂತ್ರಜ್ಞಾನ ಬೆಳೆದಂತೆ ಹೂಡಿಕೆ ಹೆಚ್ಚುತ್ತಿರುವುದು ವಿಪರ್ಯಾಸ’ ಎಂದು ಹೇಳಿದರು.

ಶಿಕ್ಷಣತಜ್ಞ ಕೆ.ಇ. ರಾಧಾಕೃಷ್ಣ, ‘ಆರೋಗ್ಯದ ವಿಷಯದಲ್ಲೂ ರಾಜಕೀಯ ಮಾಡಲಾಗುತ್ತಿದೆ. ಶಿಕ್ಷಣ ಕ್ಷೇತ್ರವಂತೂ ಸಂಪೂರ್ಣವಾಗಿ ಶ್ರೀಮಂತರ ಸ್ವತ್ತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎರಡನೇ ಮಹಾಯುದ್ಧದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ಆದರೆ ಭಾರತದಲ್ಲಿ ರಸ್ತೆ ಅಪಘಾತದಲ್ಲಿ ವರ್ಷಕ್ಕೆ 1 ಲಕ್ಷಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಶೇ 17ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡರೆ 7ಲಕ್ಷ ಜನ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT