ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರಿಸಿದ ಮಳೆ: ನಲುಗಿದ ಬೆಂಗಳೂರು

Published 22 ಮೇ 2023, 5:26 IST
Last Updated 22 ಮೇ 2023, 5:36 IST
ಅಕ್ಷರ ಗಾತ್ರ

ಬೆಂಗಳೂರು: ಭಾನುವಾರ 45 ನಿಮಿಷವಷ್ಟೇ ಅಬ್ಬರಿಸಿದ ಮಳೆಗೆ ಬೆಂಗಳೂರು ತತ್ತರಗೊಂಡಿದೆ. ಹಲವು ಬಡಾವಣೆಗಳು ಮುಳುಗಿದ್ದರೆ, ನೂರಾರು ಮರಗಳು ನೆಲಕ್ಕುರುಳಿವೆ. ಮಹಿಳೆಯೊಬ್ಬರು ಅಂಡರ್ ಪಾಸ್‌ನಲ್ಲಿ ಮೃತಪಟ್ಟಿದ್ದರೆ, ಹಲವು ವಾಹನಗಳು ಜಖಂಗೊಂಡಿವೆ. ಮನೆಗಳು ಜಲಾವೃತಗೊಂಡಿವೆ.

ಮಧ್ಯಾಹ್ನ 3ರ ವೇಳೆಗೆ ಕಪ್ಪನೆಯ ಮೋಡಗಳು ಸುತ್ತುವರಿದು ಕತ್ತಲಾದಂತಾಯಿತು. ಬಿರುಗಾಳಿ ಜತೆಯಲ್ಲಿ ಆರಂಭವಾದ ಮಳೆ ಸುಮಾರು 3.450ರ ತನಕ ಅಬ್ಬರಿಸಿತು. ನಗರದ ಎಲ್ಲಾ ಬಡಾವಣೆಗಳಲ್ಲೂ ಮಳೆ ಸುರಿದ್ದರೂ, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಆರ್ಭಟ ಜೋರಾಗಿತ್ತು. ನಾಗರಬಾವಿ, ದಾಸರಹಳ್ಳಿ, ಪೀಣ್ಯ, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್‌, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರ, ಪ್ಯಾಲೇಸ್ ಗುಟ್ಟಹಳ್ಳಿ, ಮತ್ತಿಕೆರೆ, ಆರ್‌.ಟಿ.ನಗರ, ಹೆಬ್ಬಾಳ, ವಿದ್ಯಾರಣ್ಯ‍ಪುರ, ಕೊಡಿಗೇಹಳ್ಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿತ್ತು. ಕೆಲವೆಡೆ ಆಲಿಕಲ್ಲು ಸಹಿತ ಮಳೆ ಸುರಿಯಿತು.

ಮಳೆ ಆರಂಭವಾಗಿ ಅರ್ಧ ಗಂಟೆಯಾಗುವಷ್ಟರಲ್ಲೇ ಕೆಲ ರಸ್ತೆಯಲ್ಲಿ ನದಿಯಂತೆ ನೀರು ಹರಿಯಿತು. ಮಳೆಯೊಂದಿಗೆ ಬಿರುಗಾಳಿಯೂ ಆರ್ಭಟಿಸಿದ್ದರಿಂದ ಕೆಲವೆಡೆ ಮರಗಳು ಧರೆಗುರುಳಿದರೆ, ಹಲವೆಡೆ ಬಾಗಿದ್ದ ರೆಂಬೆಗಳು, ಒಣಗಿದ್ದ ಟೊಂಗೆಗಳು ಮುರಿದು ಬಿದ್ದವು. ರಸ್ತೆಯೇ ಕಾಣಿಸದಂತೆ ವಾಹನಗಳ ಮೇಲೆ ಮಳೆಯ ಜತೆಗೆ ರಸ್ತೆ ಬದಿಯ ಮರಗಳ ಎಲೆ ಮತ್ತು ಕಿರು ಟೊಂಗೆಗಳು ಉದುರಿದ್ದವು. ರಸ್ತೆಯಲ್ಲಿದ್ದ ವಾಹನಗಳ ಮೇಲೆಲ್ಲವೂ ಮರದ ಎಲೆಗಳು ಅಂಟಿಕೊಂಡಿದ್ದು ಸಾಮಾನ್ಯವಾಗಿತ್ತು.

ಬಹುತೇಕ ಅಂಡರ್ ಪಾಸ್‌ಗಳು ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಮಳೆ ನಿಂತ ಬಳಿಕ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು. ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕಾವೇರಿ ಜಂಕ್ಷನ್ ಮತ್ತು ಮೇಖ್ರಿ ವೃತ್ತದಲ್ಲಿನ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಎಲ್ಲ ವಾಹನಗಳು ಸರ್ವೀಸ್ ರಸ್ತೆಯಲ್ಲೇ ಸಾಗಲು ಪ್ರಯತ್ನಿಸಿದ್ದರಿಂದ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಪರದಾಡಿದರು.

ಮಹಾಲಕ್ಷ್ಮಿ ಲೇಔಟ್‌ನಲ್ಲಿ 22 ಮನೆಗಳಿಗೆ ನುಗ್ಗಿದ ನೀರು

ಮಹಾಲಕ್ಷ್ಮಿ ಲೇಔಟ್‌ ಗಣೇಶ ಬ್ಲಾಕ್‌ನಲ್ಲಿ ರಾಜಕಾಲುವೆ ನೀರು ಬಡಾವಣೆಗೆ ನುಗ್ಗಿ 22 ಮನೆಗಳು ಜಲಾವೃತಗೊಂಡವು. ರಾಜಕಾಲುವೆ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಸೆಂಟ್ರಿಂಗ್ ಹಾಕಲಾಗಿತ್ತು. ನೀರು ಹರಿದು ಹೋಗಲು ಅವಕಾಶ ಇರಲಿಲ್ಲ. ಇದರಿಂದ ನೀರು ಬಡಾವಣೆಗಳತ್ತ ನುಗ್ಗಿತು. ಮನೆಗಳ ನೆಲಮಹಡಿಗೆ ನೀರು ತುಂಬಿಕೊಂಡಿತು.

‘ಏಕಾಏಕಿ ಭಾರಿ ಮಳೆ ಸುರಿಯಿತು. ಮನೆಗಳ ಎದುರಿನಲ್ಲಿ ನಿಲುಗಡೆ ಮಾಡಿದ್ದ ವಾಹನಗಳು ಮುಳುಗಡೆಯಾದವು. ಮನೆಯೊಳಗೆ ನೀರು ನುಗ್ಗಿತ್ತು. ಪ್ರತಿಬಾರಿ ಮಳೆಗಾಲದಲ್ಲೂ ಇದೇ ಸಮಸ್ಯೆಯಾಗುತ್ತಿದೆ. ಬಿಬಿಎಂಪಿಗೆ ಹಲವಾರು ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಮಹಾಲಕ್ಷ್ಮಿ ಲೇಔಟ್‌ನ ಲಾವಣ್ಯ ಬೇಸರ ವ್ಯಕ್ತಪಡಿಸಿದರು.

‘ಐದು ಅಡಿಯಷ್ಟು ನೀರು ಮನೆಯಲ್ಲಿದೆ. ಎಲ್ಲಾ ವಸ್ತುಗಳು ನೀರುಪಾಲಾಗಿವೆ. ಆಗಿರುವ ನಷ್ಟಕ್ಕೆ ಪರಿಹಾರ ಯಾರು ಕೊಡುತ್ತಾರೆ’ ಎಂದು ಪ್ರಶ್ನಿಸಿದರು. ಸ್ಥಳಕ್ಕೆ ಶಾಸಕ ಕೆ.ಗೋಪಾಲಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ರಾಜಕಾಲುವೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹರಿದು ಹೋಗುತ್ತಿಲ್ಲ. ಬಡಾವಣೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳಿಗೆ ತೊಂದರೆಯಾಗಿದೆ’ ಎಂದು ಹೇಳಿದರು. ‘ನಾಗರಿಕರಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸಲಾಗುವುದು. ರಾಜಕಾಲುವೆ ದುರಸ್ತಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಸೂಚನೆ ನೀಡಲಾಗುವುದು’ ಎಂದು ತಿಳಿಸಿದರು.

ವಿದ್ಯಾರಣ್ಯಪುರದಲ್ಲಿ ವಾಲಿದ ಮನೆ ‌

ವಿದ್ಯಾರಣ್ಯಪುರದಲ್ಲಿ ಹಳೆಯ ಮನೆಯೊಂದು ವಾಲಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎರಡು ಅಂತಸ್ತಿನ ಮನೆ ವಾಲುತ್ತಿರುವುದು ಅರಿವಾದ ಕೂಡಲೇ ಮನೆಯಲ್ಲಿದ್ದ ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಮನೆ ಬೀಳುವ ಸಾಧ್ಯತೆ ಇರುವುದರಿಂದ ಮನೆ ಒಳಗೆ ಯಾರೂ ಹೋಗದಂತೆ ನಿರ್ಬಂಧಿಸಲಾಗಿದೆ. ಅಕ್ಕ–ಪಕ್ಕದ ಮನೆಗಳಿಗೆ ಹಾನಿಯಾಗದಂತೆ ವಾಲಿರುವ ಮನೆ ತೆರವುಗೊಳಿಸುವ ಸಾಧ್ಯತೆ ಇದೆ.

ದಾಸರಹಳ್ಳಿಯಲ್ಲಿ ನೆಲಕ್ಕೆ ಅಪ್ಪಳಿದ ವಿದ್ಯುತ್ ಕಂಬ

ದಾಸರಹಳ್ಳಿಯ ಶಾರದಾಂಬ ನಗರದಲ್ಲಿ ವಿದ್ಯುತ್ ಕಂಬವೊಂದು ಸ್ಕೂಟರ್ ಮತ್ತು ಕಾರಿನ ಮೇಲೆ ಅಪ್ಪಳಿಸಿತು. ಸ್ಕೂಟರ್ ಜಖಂಗೊಂಡಿದ್ದರೆ ಕಾರಿನ ಗಾಜು ಪುಡಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಪೆಟ್ಟಾಗಿಲ್ಲ. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಟೊ ಚಾವಣಿ ಹಿಡಿದೇ ಬದುಕುಳಿದ ಯುವತಿ

ಕೆ.ಆರ್‌.ವೃತ್ತದ ಅಂಡರ್‌ಪಾಸ್‌ನಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಸ್ಥಳಕ್ಕೆ ಬರುವುದಕ್ಕೂ ಮೊದಲೇ ಸ್ಥಳೀಯರ ತಂಡವೊಂದು ರೋಚಕ ಕಾರ್ಯಾಚರಣೆ ನಡೆಸಿ ಹಲವರ ಜೀವ ಕಾಪಾಡಿತ್ತು. ಕಾರು ಆಟೊರಿಕ್ಷಾಗಳು ಮಳೆ ನೀರಿನಲ್ಲಿ ಮುಳುಗಡೆಯಾಗಿದ್ದನ್ನು ಗಮನಿಸಿದ ಸ್ಥಳೀಯರು ಎಲ್ಲಿಂದಲೋ ಸೀರೆಗಳನ್ನು ತಂದರು. ಮತ್ತೊಬ್ಬರು ಹಗ್ಗವನ್ನು ಹೊಂದಿಸಿದರು. ಮೂವರು ಈಜಿ ಕಾರಿನ ಬಳಿಗೆ ತೆರಳಿ ಅದರಲ್ಲಿದ್ದವರನ್ನು ಹೊರಗೆ ಕರೆತಂದರು. ಅಬ್ಬರದ ಮಳೆಯಿಂದ ಅಂಡರ್‌ಪಾಸ್‌ನಲ್ಲಿ ನೀರಿನಮಟ್ಟ ಏರುತ್ತಿತ್ತು. ಅದ್ಯಾವುದನ್ನೂ ಲೆಕ್ಕಿಸದೇ ರಕ್ಷಣಾ ಕಾರ್ಯ ನಡೆಸಿದರು.

ಎಲ್ಲರನ್ನು ಹೊರೆಗೆ ಕರೆತಂದರೂ ಭಾನು ರೇಖಾ ಮಾತ್ರ ಹೆಚ್ಚಿನ ನೀರು ಕುಡಿದು ಅಸುನೀಗಿದರು. ಅದಾದ ಮೇಲೆ ಆಟೊದಲ್ಲಿ ತೆರಳುತ್ತಿದ್ದ ಯುವತಿಯೂ ನೀರಿನಲ್ಲಿ ಸಿಲುಕಿಕೊಂಡಿದ್ದಳು. ಒಂದು ಗಂಟೆ ಆಟೊ ಚಾವಣಿಯನ್ನೇ ಹಿಡಿದು ಜೀವ ಕಾಪಾಡಿಕೊಂಡಿದ್ದಳು. ಆಟೊ ಚಾಲಕ ಈಜಿ ದಡ ಸೇರಿದ್ದ. ಕೊನೆಯಲ್ಲಿ ಅಗ್ನಿ ಶಾಮಕದಳ ಸಿಬ್ಬಂದಿ ಆಕೆಯನ್ನು ರಕ್ಷಿಸಲು ಯಶಸ್ವಿಯಾದರು. ಕ್ಯಾಬ್‌ ಚಾಲಕನ ನಿರ್ಲಕ್ಷ್ಯದಿಂದ ಅನಾಹುತ? ಅಂಡರ್‌ಪಾಸ್‌ನಲ್ಲಿ ಅಪಾರ ಪ್ರಮಾಣದ ಮಳೆ ನೀರು ಸಂಗ್ರಹಗೊಂಡಿದ್ದರೂ ಕ್ಯಾಬ್‌ ಚಾಲಕ ಅದೇ ಮಾರ್ಗದಲ್ಲಿ ಕಾರು ಕೊಂಡೊಯ್ದ ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ ಎಂಬ ದೂರು ಕೇಳಿಬಂದಿದೆ.

ಚಾಲಕ ನೀರಿನಮಟ್ಟವನ್ನು ಗಮನಿಸಬೇಕಿತ್ತು. ದಟ್ಟೈಸಿದ ಮೋಡದಿಂದ ನಗರದಲ್ಲಿ ಮಧ್ಯಾಹ್ನವೇ ಕತ್ತಲು ಆವರಿಸಿತ್ತು. ಏನೂ ಆಗುವುದಿಲ್ಲ ಎಂದು ಭಾವಿಸಿ ಅಂಡರ್‌ಪಾಸ್‌ ಕಾರು ಚಲಾಯಿಸಿದ್ದೇ ಅನಾಹುತಕ್ಕೆ ಕಾರಣವಾಯಿತು ಎಂದು ಸ್ಥಳೀಯರು ಹೇಳಿದರು. ನೀರು ಇದ್ದರೂ ಹೋಗಬಹುದು ಎಂದರು... ‘ನೀರು ಇದ್ದರೂ ಹೋಗಬಹುದು ಎಂದು ಡ್ರೈವರ್‌ ಹೇಳಿದರು. ಮುಂದೆ ಹೋದಾಗ ನೀರು ಕಾರಿನ ಒಳಗೆ ಬಂದಿತು. ಆಗಲೂ ಡ್ರೈವರ್‌ ಏನೂ ಆಗಲ್ಲ ಅಂದರು. ಎಲ್ಲರೂ ಮುಂದೆ ಬಂದು ಕುಳಿತುಕೊಳ್ಳಿ ಎಂದರು. ಆದರೆ ನೀರು ಪೂರ್ಣವಾಗಿ ಒಳಗೆ ಪೂರ್ಣ ಬಂದುಬಿಟ್ಟಿತು. ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ. ಯಾರೋ ನಮ್ಮನ್ನು ಹೊರಗೆ ಎಳೆದರು. ಭಾನು ಅಕ್ಕ ಒಳಗೇ ಇದ್ದಳು’ ಎಂದು ಪಾರಾದ ಬಾಲಕಿ ಅನುಭವ ಹಂಚಿಕೊಂಡರು.

ವಿವಿಧೆಡೆ ಹಾನಿ

  • ವಿಂಡ್ಸರ್ ಮ್ಯಾನರ್ ವೃತ್ತದ ಬಳಿ ಕಬ್ಬಿಣದ ಕಾಂಪೌಂಡ್ ನೆಲಕ್ಕುರುಳಿ ಹಾನಿ

  • ಚಾಲುಕ್ಯ ವೃತ್ತದಿಂದ ಹೆಬ್ಬಾಳ ಮಾರ್ಗದ ರಸ್ತೆ ಸಂಪೂರ್ಣವಾಗಿ ಹಾನಿಯಾಗಿದೆ

  • ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ ಮಳೆಗೆ ಹಲವು ಮರ ಧರೆಗುರುಳಿವೆ.

  • ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದ ಒಳಗೆ ಮಳೆ ನೀರು ನುಗ್ಗಿತ್ತು.

  • ಬಳ್ಳಾರಿ ರಸ್ತೆಯ ಸಿಬಿಐ ಕಚೇರಿ ಬಳಿ ಮರಗಳು ರಸ್ತೆಗೆ ಉರುಳಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.

  • ಕಬ್ಬನ್ ರಸ್ತೆಯಲ್ಲಿ ರಸ್ತೆಗೆ ಅಡ್ಡವಾಗಿ ಮರ ರಸ್ತೆಗೆ ಉರುಳಿತು.

  • ವಿಜಯನಗರದಲ್ಲಿ ವಿದ್ಯುತ್ ಕಂಬವೊಂದು ಬಿದ್ದು ವಾಹನ.

  • ಬಸವನಗುಡಿ ಬಿಪಿ ವಾಡಿಯಾ ರಸ್ತೆಯಲ್ಲಿ ಮರವೊಂದು ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು.

ಪ್ರದೇಶ : ಮಳೆ (ಮಿ.ಮೀ)

ರಾಜಮಹಲ್‌ ಗುಟ್ಟಹಳ್ಳಿ (ಪಶ್ಚಿಮ ವಲಯ) : 66 ಮೀ ಮೀ

ಕೊಟ್ಟಿಗೆಪಾಳ್ಯ (ಆರ್‌.ಆರ್‌. ನಗರ ವಲಯ) : 54

ನಾಗಪುರ (ಪಶ್ಚಿಮ ವಲಯ) : 49

ನಂದಿನಿ ಲೇಔಟ್‌ (ಪಶ್ಚಿಮ ವಲಯ) : 48

ಪುಲಕೇಶಿನಗರ (ಪೂರ್ವ ವಲಯ) : 44

ರಾಜಾಜಿನಗರ (ಪಶ್ಚಿಮ ವಲಯ) : 37

ಕೃಷ್ಣರಾಜಪುರ (ಪೂರ್ವ ವಲಯ) : 36.50

ಕುಶಾಲನಗರ (ಪೂರ್ವ ವಲಯ) :35

ಕಾಟನ್‌ಪೇಟೆ (ಪಶ್ಚಿಮ ವಲಯ) :33.50

ವಿದ್ಯಾರಣ್ಯಪುರ (ಯಲಹಂಕ ವಲಯ) : 32.50

ಸಂಪಂಗಿರಾಮನಗರ (ಪೂರ್ವ ವಲಯ) : 32

ಚಾಮರಾಜಪೇಟೆ (ಪಶ್ಚಿಮ ವಲಯ) : 28

ಅಗ್ರಹಾರ ದಾಸರಹಳ್ಳಿ (ಪಶ್ಚಿಮ ವಲಯ) : 27.50

ಮಾರ‍ಪ್ಪನಪಾಳ್ಯ (ಪಶ್ಚಿಮ ವಲಯ) : 26

ವಿದ್ಯಾಪೀಠ (ದಕ್ಷಿಣ ವಲಯ) : 25.50

ಬಸವನಪುರ (ಮಹದೇವಪುರ ವಲಯ) : 23.50

ಹೆಮ್ಮಿಗೆಪುರ (ಆರ್‌.ಆರ್‌. ನಗರ ವಲಯ) : 23.50

ಮಳೆ ನಡುವೆ ಎಸ್.ಪಿ ರಸ್ತೆಯಲ್ಲಿ ಕೆಟ್ಟುನಿಂತ ಪೊಲೀಸ್ ಜೀಪ್ ತಳ್ಳುತ್ತಿರುವ ಪೊಲೀಸರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಮಳೆ ನಡುವೆ ಎಸ್.ಪಿ ರಸ್ತೆಯಲ್ಲಿ ಕೆಟ್ಟುನಿಂತ ಪೊಲೀಸ್ ಜೀಪ್ ತಳ್ಳುತ್ತಿರುವ ಪೊಲೀಸರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಅಶೋಕನಗರದ ಮೆಗ್ರಾತ್ ರಸ್ತೆಯಲ್ಲಿ ನದಿಯಂತಾಗಿದ್ದ ನೀರಿನಲ್ಲಿ ವಾಹನಗಳು ಸಾಗುತ್ತಿರುವುದು  –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಅಶೋಕನಗರದ ಮೆಗ್ರಾತ್ ರಸ್ತೆಯಲ್ಲಿ ನದಿಯಂತಾಗಿದ್ದ ನೀರಿನಲ್ಲಿ ವಾಹನಗಳು ಸಾಗುತ್ತಿರುವುದು  –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಮಹಾಲಕ್ಷ್ಮಿ ಲೇಔಟ್‌ನ ಗಣೇಶ ಬ್ಲಾಕ್‌ನಲ್ಲಿ ಮನೆಗೆ ನುಗ್ಗಿರುವ ನೀರನ್ನು ಹೊರ ಹಾಕುತ್ತಿರುವುದು  –ಪ್ರಜಾವಾಣಿ ಚಿತ್ರ/ಎಸ್.ಕೆ.ದಿನೇ‌ಶ್
ಮಹಾಲಕ್ಷ್ಮಿ ಲೇಔಟ್‌ನ ಗಣೇಶ ಬ್ಲಾಕ್‌ನಲ್ಲಿ ಮನೆಗೆ ನುಗ್ಗಿರುವ ನೀರನ್ನು ಹೊರ ಹಾಕುತ್ತಿರುವುದು  –ಪ್ರಜಾವಾಣಿ ಚಿತ್ರ/ಎಸ್.ಕೆ.ದಿನೇ‌ಶ್
ಮಹಾಲಕ್ಷ್ಮಿ ಲೇಔಟ್‌ನ ಗಣೇಶ ಬ್ಲಾಕ್‌ನಲ್ಲಿ ಮಳೆಯಿಂದ ಹಾನಿಗೀಡಾಗಿರುವ ಮನೆಗಳಿಗೆ ಶಾಸಕ ಕೆ.ಗೋಪಾಲಯ್ಯ ಭೇಟಿ ನೀಡಿ ಪರಿಶೀಲಿಸಿದರು
ಮಹಾಲಕ್ಷ್ಮಿ ಲೇಔಟ್‌ನ ಗಣೇಶ ಬ್ಲಾಕ್‌ನಲ್ಲಿ ಮಳೆಯಿಂದ ಹಾನಿಗೀಡಾಗಿರುವ ಮನೆಗಳಿಗೆ ಶಾಸಕ ಕೆ.ಗೋಪಾಲಯ್ಯ ಭೇಟಿ ನೀಡಿ ಪರಿಶೀಲಿಸಿದರು
ಆರ್‌.ಟಿ. ನಗರ ಟಿವಿ ಟವರ್ ಬಳಿ ರಸ್ತೆಗೆ ಉರುಳಿದ ಮರದ ಅಡಿಯಲ್ಲಿ ಸಿಲುಕಿದ ಆಟೊರಿಕ್ಷಾ
ಆರ್‌.ಟಿ. ನಗರ ಟಿವಿ ಟವರ್ ಬಳಿ ರಸ್ತೆಗೆ ಉರುಳಿದ ಮರದ ಅಡಿಯಲ್ಲಿ ಸಿಲುಕಿದ ಆಟೊರಿಕ್ಷಾ
ಚಿತ್ರಕಲಾ ಪರಿಷತ್ತಿನ ಮುಂಭಾಗ ಕುಮಾರಕೃಪಾ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿರುವ ಮರದ ಅಡಿಯಲ್ಲಿ ಕಾರು ಮತ್ತು ಬೈಕ್‌ ಸಿಲುಕಿರುವುದು
ಚಿತ್ರಕಲಾ ಪರಿಷತ್ತಿನ ಮುಂಭಾಗ ಕುಮಾರಕೃಪಾ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿರುವ ಮರದ ಅಡಿಯಲ್ಲಿ ಕಾರು ಮತ್ತು ಬೈಕ್‌ ಸಿಲುಕಿರುವುದು
ರಾಜಾಜಿನಗರದ 50ನೇ ಕ್ರಾಸ್‌ನಲ್ಲಿ ದ್ವಿಚಕ್ರ ವಾಹನಗಳ ಮೇಲೆ ಮರ ಬಿದ್ದಿರುವುದು
ರಾಜಾಜಿನಗರದ 50ನೇ ಕ್ರಾಸ್‌ನಲ್ಲಿ ದ್ವಿಚಕ್ರ ವಾಹನಗಳ ಮೇಲೆ ಮರ ಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT