ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನವಿಡೀ ಮಳೆ: ಮನೆಗಳ ಗೋಡೆ ಕುಸಿತ

ಧರೆಗುರುಳಿದ ಮರಗಳು, ರಸ್ತೆಗಳು ಜಲಾವೃತ l ವಾಹನ ಸವಾರರ ಪರದಾಟ
Last Updated 18 ನವೆಂಬರ್ 2021, 21:51 IST
ಅಕ್ಷರ ಗಾತ್ರ

ಬೆಂಗಳೂರು: ಜಲಾವೃತಗೊಂಡ ರಸ್ತೆಗಳು, ಅವುಗಳಲ್ಲಿ ಸಾಗಲು ಹರಸಾಹಸ ಪಡುತ್ತಿರುವ ವಾಹನ ಸವಾರರು, ಧರೆಗುರುಳಿದ ಮರಗಳು, ಸುರಿಯುತ್ತಿರುವ ಮಳೆಯ ನಡುವೆಯೇ ಅವುಗಳನ್ನು ತೆರವುಗೊಳಿಸಲು ಪ್ರಯಾಸ ಪಟ್ಟ ಪಾಲಿಕೆ ಸಿಬ್ಬಂದಿ...

ನಗರದ ವಿವಿಧ ಭಾಗಗಳಲ್ಲಿ ಗುರುವಾರ ಕಂಡುಬಂದ ದೃಶ್ಯಗಳಿವು.

ವಾಯುಭಾರ ಕುಸಿತದಿಂದಾಗಿ ಕೆಲ ದಿನಗಳಿಂದ ನಗರದಲ್ಲಿ ನಿರಂತರವಾಗಿ ಸುರಿಯುತ್ತಿದೆ. ಬುಧವಾರ ಅಲ್ಪ ಬಿಡುವು ನೀಡಿದ್ದ ಮಳೆರಾಯ, ಗುರುವಾರ ಆಗಸದಲ್ಲಿ ಸೂರ್ಯ ಇಣುಕಿನೋಡಲೂ ಅವಕಾಶ ನೀಡಲಿಲ್ಲ. ಮುಂಜಾನೆಯಿಂದಲೇ ಶುರುವಾಗಿದ್ದ ‘ವರುಣನ ಆಟ’ ಮಧ್ಯರಾತ್ರಿವರೆಗೂ ನಿಲ್ಲಲಿಲ್ಲ.ಹೀಗಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಗರದಲ್ಲಿ ಮೈನಡುಗಿಸುವ ಚಳಿಯ ವಾತಾವರಣವೂ ನಿರ್ಮಾಣವಾಗಿತ್ತು.

ಧರೆಗುರುಳಿದ ಗೋಡೆಗಳು: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಮೂರು ಕಡೆ ಮನೆ ಹಾಗೂ ಕಟ್ಟಡಗಳ ಗೋಡೆಗಳು ಕುಸಿದಿವೆ.

‘ಕಾಡುಗೋಡಿ ಸಮೀಪದ ರೈಲ್ವೆ ಹಳಿ ಪಕ್ಕದ ಅಂಗಡಿಯೊಂದರ ಗೋಡೆ ಬೆಳಗಿನ ಜಾವ ಕುಸಿಯಿತು. ಕಟ್ಟಡ ಶಿಥಿಲಗೊಂಡಿದ್ದರಿಂದ ಅಂಗಡಿಯವರನ್ನು ಇತ್ತೀಚೆಗೆ ಖಾಲಿ ಮಾಡಿಸಲಾಗಿತ್ತು. 60 ವರ್ಷದ ವೃದ್ಧರೊಬ್ಬರು ಆ ಕಟ್ಟಡದಲ್ಲೇ ನಿದ್ರಿಸುತ್ತಿದ್ದರು. ಅವರನ್ನು ರಕ್ಷಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಶಂಕರಮಠ ವಾರ್ಡ್‌ನ ಕಾವೇರಿನಗರದ ಸಮೀಪವಿರುವ ಆಂಜನೇಯ ಗುಡ್ಡ ಪ್ರ‌ದೇಶದಲ್ಲಿ ಮನೆಯೊಂದರ ಗೋಡೆ ಧರೆಗುರುಳಿದೆ. ಮನೆಯಲ್ಲಿದ್ದವರು ಸುರಕ್ಷಿತರಾಗಿದ್ದಾರೆ. ಮಳೆ ನೀರು ಮನೆಯೊಳಗೆ ನುಗ್ಗಿದ್ದರಿಂದ ದಿನಸಿ ಪದಾರ್ಥಗಳೆಲ್ಲಾ ಹಾಳಾಗಿದ್ದು, ಪೀಠೋಪಕರಣಗಳಿಗೂ ಹಾನಿಯಾಗಿದೆ. ಇದರಿಂದಾಗಿ ಮನೆಯವರು ಕಂಗಾಲಾಗಿದ್ದಾರೆ.

ಪಾದರಾಯನಪುರದ ಹರಿಶ್ಚಂದ್ರ ದೇವಸ್ಥಾನ ಸಮೀಪದ 3ನೇ ತಿರುವಿನಲ್ಲಿರುವ ಮಂಜುಗಡ್ಡೆ ತಯಾರಿಕಾ ಕಾರ್ಖಾನೆಯ ಗೋದಾಮಿನ ಭಾರಿ ಗೋಡೆಯೊಂದು ಮಳೆಯಿಂದಾಗಿ ಶಿಥಿಲಗೊಂಡು ಕುಸಿದಿದೆ. ಗೋಡೆ ಕುಸಿದಿದ್ದರಿಂದ ಸಮೀಪದಲ್ಲೇ ನಿಲ್ಲಿಸಿದ್ದ ಆಟೊಗಳು ಜಖಂಗೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನೆಲಕ್ಕುರುಳಿದ ಮರಗಳು: ಕ್ವೀನ್ಸ್‌ ರಸ್ತೆ, ಮಹಾವೀರ ರಸ್ತೆಯಲ್ಲಿ ವಾರ್ತಾ ಇಲಾಖೆ ಪ್ರಧಾನ ಕಚೇರಿಯ ಹತ್ತಿರ ಮರಗಳು ಉರುಳಿದ್ದು, ಕೆಲ ಕಾಲ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಥಣಿಸಂದ್ರ, ಕೆ.ಆರ್‌.ಪುರದಿಂದ ಟಿ.ಸಿ.ಪಾಳ್ಯಕ್ಕೆ ಸಾಗುವ ಮಾರ್ಗದಲ್ಲಿ ಭಾರಿ ಮರವೊಂದು ಉರುಳಿತು. ಬನಶಂಕರಿ ಎರಡನೇ ಹಂತದ ಬಡಾವಣೆಯಲ್ಲೂ ಮರ ನೆಲಕ್ಕುರುಳಿದೆ.

ರಸ್ತೆಯಲ್ಲೇ ನಿಂತ ನೀರು: ಎಚ್‌ಬಿಆರ್‌ ಲೇಔಟ್‌ನ 12ನೇ ಅಡ್ಡರಸ್ತೆ, ನ್ಯೂ ಬೈಯಪ್ಪನಹಳ್ಳಿಯ 9ನೇ ಅಡ್ಡರಸ್ತೆ, ಶಿವಾಜಿನಗರ ಮುಖ್ಯ ರಸ್ತೆ, ಕಲಾಸಿಪಾಳ್ಯ ಸಮೀಪದ ಬಸಪ್ಪ ವೃತ್ತ, ನಾಗವಾರ ಸಮೀಪದ ಕೆ.ಇ.ಬಿ.ವೃತ್ತ, ಕೇಂಬ್ರಿಡ್ಜ್‌ ವೃತ್ತ, ಟಿ.ಸಿ.ಎಂ.ರಾಯನ್‌ ರಸ್ತೆ, ಮಾರುತಿನಗರ 10ನೇ ತಿರುವು, ಕೋಡಿ ಚಿಕ್ಕನಹಳ್ಳಿಯ ಅನುಗ್ರಹ ಬಡಾವಣೆ, ಬಾಣಸವಾಡಿಯ ಸಿಎಂಆರ್‌ ಕಾಲೇಜು ಸಮೀಪದ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಸಮಸ್ಯೆ ಎದುರಿಸಿದರು. ಮೈಸೂರು ರಸ್ತೆ, ಕೆಂಗೇರಿ, ಹೊಸಕೆರೆಹಳ್ಳಿ, ಪ್ರಮೋದ ಲೇಔಟ್‌, ದೀಪಾಂಜಲಿ ನಗರ, ನಾಯಂಡಹಳ್ಳಿಯಲ್ಲೂ ಮಳೆ ನೀರು ರಸ್ತೆಯಲ್ಲೇ ಸಂಗ್ರಹವಾಗಿತ್ತು.

ವ್ಯಾಪಾರಿಗಳ ಪರದಾಟ: ದಿನವಿಡೀ ಸುರಿದ ಮಳೆಯಿಂದಾಗಿ ಕೃಷ್ಣರಾಜ ಮಾರುಕಟ್ಟೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿನ ವರ್ತಕರು ಹಾಗೂ ನಗರದಾದ್ಯಂತ ಬೀದಿಬದಿ ವ್ಯಾಪಾರಿಗಳು ಸಂಕಷ್ಟ ಎದುರಿಸಿದರು.

‘ಮಳೆಯಿಂದಾಗಿ ಜನರು ಮನೆಯಿಂದ ಹೊರಗೆ ಬಂದಿಲ್ಲ. ಹೀಗಾಗಿ ವ್ಯಾಪಾರವೂ ಆಗಿಲ್ಲ. ಮಾರುಕಟ್ಟೆಯಿಂದ ತಂದ ತರಕಾರಿ, ಸೊಪ್ಪು, ಹೂವು ಹಾಗೂ ಹಣ್ಣುಗಳು ಕೊಳೆತು ಹೋಗುತ್ತಿವೆ’ ಎಂದು ಚಿಕ್ಕ‍ಪೇಟೆಯ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಸುತ್ತಮುತ್ತ, ‌ಹೆಸರಘಟ್ಟ‌, ಉತ್ತರಹಳ್ಳಿ, ಸಂಪಂಗಿರಾಮನಗರ, ಶಾಂತಿನಗರ, ಇಂದಿರಾನಗರ, ಕಾವಲ್‌ಭೈರಸಂದ್ರ, ಬಾಣಸವಾಡಿ, ಎಲೆಕ್ಟ್ರಾನಿಕ್ಸ್‌ ಸಿಟಿ, ಶ್ರೀನಿವಾಸನಗರ, ಆಶ್ರಮ, ಚಾಮರಾಜಪೇಟೆ, ಪದ್ಮನಾಭನಗರ, ಹಲಸೂರು, ಜೀವನ್‌ಬಿಮಾ ನಗರ, ಮಹಾಲಕ್ಷ್ಮಿ ಲೇಔಟ್‌ನಲ್ಲೂ ಜೋರು ಮಳೆ ಸುರಿಯಿತು.

ಕಾವೇರಿನಗರ, ಕಾವಲ್‌ಭೈರಸಂದ್ರ, ಕಮ್ಮನಹಳ್ಳಿ ವಾರ್ಡ್‌ 28ರ ಕಾಳಮ್ಮ ರಸ್ತೆ, ಬಾಣಸವಾಡಿ ರೈಲ್ವೆ ನಿಲ್ದಾಣ, ಬ್ಯಾಟರಾಯನಪುರದ ಸರೋವರನಗರ ವಾರ್ಡ್‌ ಹಾಗೂ ಎನ್‌ಟಿಐ ಲೇಔಟ್‌ನ ವಾರ್ಡ್‌ 9ರಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿತ್ತು. ನೀರು ಹೊರಹಾಕಲು ನಿವಾಸಿಗಳು ಹರಸಾಹಸಪಟ್ಟರು. ಹಾಗಾಗಿ ರಾತ್ರಿ ಇಡೀ ನಿದ್ರೆ ಇಲ್ಲದೆ ಕಳೆಯುವಂತಾಯಿತು.

37 ಮಿ.ಮೀ ಮಳೆ: ನಗರದಲ್ಲಿ ಗುರುವಾರ ರಾತ್ರಿ 8.30ರ ಹೊತ್ತಿಗೆ ಒಟ್ಟು 37 ಮಿ.ಮೀ ಮಳೆ ಸುರಿದಿದೆ. ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲೀ ಇದೇ ಅವಧಿಯವರೆಗೆ ಒಟ್ಟು 39.4 ಮಿ.ಮೀ. ಮಳೆ ದಾಖಲಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 7.30ರ ವರೆಗೆ 20 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಯೆಲ್ಲೊ ಅಲರ್ಟ್‌

‘ನಗರದಲ್ಲಿ ಶುಕ್ರವಾರವೂ ಮಳೆ ಮುಂದುವರಿಯಲಿದೆ. ಅಲ್ಲಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಶನಿವಾರದ ನಂತರ ಮಳೆ ಕಡಿಮೆಯಾಗಬಹುದು’ ಎಂದುಹವಾಮಾನ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT