ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಹಗಲು –ರಾತ್ರಿ ಮಳೆ: ಜನಜೀವನ ಅಸ್ತವ್ಯಸ್ತ

ನಗರದಲ್ಲಿ 4.5 ಸೆಂ.ಮೀ ಮಳೆ l ಕೆ.ಆರ್‌. ಪುರದ 5 ಬಡಾವಣೆಗಳಲ್ಲಿ ಮನೆಗಳಿಗೆ ನುಗ್ಗಿದ ನೀರು
Last Updated 2 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ತಡರಾತ್ರಿಯವರೆಗೂ ಮುಂದುವರಿದಿತ್ತು. ಕೆ.ಆರ್‌. ಪುರ ವ್ಯಾಪ್ತಿಯಲ್ಲಿ ಐದು ಬಡಾವಣೆಗಳಿಗೆ ನೀರು ನುಗ್ಗಿದೆ. ನಗರದ ಬಹುತೇಕ ಎಲ್ಲ ರಸ್ತೆಗಳಲ್ಲೂ ನೀರು ನಿಂತಿದ್ದು, ವಾಹನ ಸಂಚಾರ ಕಷ್ಟಸಾಧ್ಯವಾಗಿತ್ತು.

ನಗರದಲ್ಲಿ 11 ಸ್ಥಳಗಳಲ್ಲಿ ಮರಗಳು ಬುಡಮೇಲುಗೊಂಡಿವೆ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆಗಳು ಬಂದಿವೆ. ಈ ಮರಗಳನ್ನು ತೆರವು ಮಾಡುವಂತೆ ನಾಗರಿಕರು ಕೋರಿಕೊಂಡರು. ಸಿಬ್ಬಂದಿ ಸಾಧ್ಯವಾ ದಷ್ಟು ಕಡೆ ಕ್ರಮ ಕೈಗೊಂಡಿದ್ದಾರೆ.

ನಗರದ ರಾಜರಾಜೇಶ್ವರಿ ನಗರದಲ್ಲಿ ಮಂಗಳವಾರ ಅತ್ಯಧಿಕ ಮಳೆಯಾಗಿದೆ. ನಾಯಂಡಹಳ್ಳಿ, ಉತ್ತರಹಳ್ಳಿ, ವಿದ್ಯಾಪೀಠ, ಜಯನಗರ, ಗೊಟ್ಟಿಗೆರೆ, ನಾಗರಬಾವಿ, ಕೆಂಗೇರಿ, ಗಾಳಿ ಆಂಜನೇಯ ದೇವಸ್ಥಾನ, ಸಂಪಂಗಿರಾಮನಗರದಲ್ಲಿ ಹೆಚ್ಚು ಮಳೆಯಾಗಿದೆ. ಉಳಿದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ರಾಜಕಾಲುವೆಯಿಂದ ಸಮಸ್ಯೆ: ‘ಕೆ.ಆರ್‌. ಪುರ ವ್ಯಾಪ್ತಿಯ ಸಾಯಿ, ಗುರುರಾಜ ಬಡಾವಣೆ ಸೇರಿ ಸುತ್ತ
ಮುತ್ತಲಿನ ಐದು ಬಡಾವಣೆಗಳಿಗೆ ಮಳೆನೀರು ನುಗ್ಗಿದೆ. ಹೊರಮಾವು ಪ್ರದೇಶಗಳಲ್ಲೂ ಮನೆಗಳಿಗೆ ನೀರು ತುಂಬಿದೆ. ರೈಲ್ವೆ ಸೇತುವೆ ಸಮೀಪದ ರಾಜಕಾಲುವೆ ಸಮಸ್ಯೆಯಿಂದಾಗಿ ನೀರು ಹೊರಗೆ ಬಂದಿದೆ’ ಎಂದು ಬಿಬಿಎಂಪಿ ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ತಿಳಿಸಿದರು.

‘ಸೋಮವಾರದಿಂದಲೂ ಈ ಭಾಗದಲ್ಲಿ ಮಳೆಯಾಗುತ್ತಿದೆ. ಒಂದು ಗಂಟೆಯಲ್ಲಿ 70 ಮಿ.ಮೀಗೂ ಹೆಚ್ಚಿನ ಮಳೆ ಬಂದರೆ ಸಮಸ್ಯೆ ಉಂಟಾಗುತ್ತದೆ. ಆಗ ರಾಜಕಾಲುವೆಗಳಲ್ಲಿ ಹೆಚ್ಚಿನ ಹರಿವು ಉಂಟಾಗಿ, ಬಡಾವಣೆಗಳಿಗೆ ನುಗ್ಗಿದೆ. ಈ ರಾಜಕಾಲುವೆಗಳ ದುಃಸ್ಥಿತಿಯಿಂದ ಹೀಗಾಗಿದೆ. ರಾಜಕಾಲುವೆಗಳ ದುರಸ್ತಿ ಹಾಗೂ ನಿರ್ವಹಣೆಗೆ ಟೆಂಡರ್‌ ಕರೆಯಲಾಗಿದ್ದು, ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ತಿಳಿಸಿದರು.

ಕಾಂಪೌಂಡ್‌ ಕುಸಿತ: ‘ರಾಜರಾಜೇಶ್ವರಿ ನಗರ ವಲಯದ ಹೇರೋಹಳ್ಳಿ, ದೊಡ್ಡಬಿದರಕಲ್ಲುಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಒಂದು ಮನೆಯ ಕಾಂಪೌಂಡ್‌ ಕುಸಿದಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಎರಡು ಮರಗಳು ಬಿದ್ದಿದ್ದವು. ಅವುಗಳನ್ನು ತೆರವು ಮಾಡಲಾಗಿದೆ’ ಎಂದು ವಲಯ ಜಂಟಿ ಆಯುಕ್ತ ಡಾ. ನಾಗರಾಜ್‌ ತಿಳಿಸಿದರು.

ರಾಜರಾಜೇಶ್ವರಿ ನಗರ ವಲಯದಲ್ಲಿ ಕೆಲವು ಕಡೆ ಹೆಚ್ಚು ಮಳೆಯಾಗಿದ್ದರಿಂದ ರಸ್ತೆಯಲ್ಲಿ ನೀರು ನಿಂತಿತ್ತು. ಚರಂಡಿಯಲ್ಲಿನ ತ್ಯಾಜ್ಯ ತೆಗೆದು ನೀರು ಹರಿಯಲು ಸಿಬ್ಬಂದಿ ಅನುವು ಮಾಡಿಕೊಟ್ಟರು ಎಂದು ಹೇಳಿದರು.

ಹೊರವಲಯದ ಕೆಲವು ಪ್ರದೇಶಗಳಲ್ಲಿ ಮಳೆ ನೀರು, ಒಳಚರಂಡಿ ನೀರಿನ ಜೊತೆಗೆ ಹಾವುಗಳು ಒಳಬಂದಿದ್ದವು. ಇವುಗಳನ್ನು ನೆರೆಯವರು, ಸ್ಥಳೀಯವಾಗಿ ಹಾವು ಹಿಡಿಯುವವರ ಸಹಾಯದಿಂದ ಹೊರ ಹಾಕಲು ನಾಗರಿಕರು ಪರದಾಡಿದರು.

ನೆಲಮಂಗಲದ ಹೊನ್ನೇನಹಳ್ಳಿಯಲ್ಲಿ ವೃದ್ಧ ಹನುಮಂತಪ್ಪ ಅವರು ಪಕ್ಕದ ಮನೆ ಗೋಡೆ ಕುಸಿದು ಗಾಯಗೊಂಡಿದ್ದಾರೆ.

4.5 ಸೆಂ.ಮೀ ಮಳೆ: ಬೆಂಗಳೂರು ನಗರದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೆ 4.5 ಸೆಂ.ಮೀ ಮಳೆಯಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.39 ಸೆಂ.ಮೀ., ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 1.5 ಸೆಂ.ಮೀ. ಮಳೆಯಾಗಿದೆ. ಮುಂದಿನ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹಮಾಮಾನ ಇಲಾಖೆತಿಳಿಸಿದೆ.

ಅಧಿಕಾರಿಗಳ ವಿರುದ್ಧ ಆಕ್ರೋಶ

‘ಪ್ರತಿ ಬಾರಿ ಮಳೆ ಬಂದಾಗಲೂ ನೀರು ಮನೆಗೆ ನುಗ್ಗುತ್ತದೆ. ಯಾವಾಗಲೂ ಮುಂದಿನ ಬಾರಿ ಸರಿ ಹೋಗುತ್ತೆ ಎಂದು ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ ವರ್ಷಗಳಿಂದ ಈ ಸಮಸ್ಯೆ ಪರಿಹರಿಸಿಲ್ಲ’ ಎಂದು ಹೊರಮಾವು ಸಾಯಿ ಬಡಾವಣೆ ನಿವಾಸಿ ರಾಜಗೋಪಾಲ್‌ ಆಕ್ರೋಶ ವ್ಯಕ್ತಪಡಿಸಿದರು.

‘ರಾಜಕಾಲುವೆ ಒತ್ತುವರಿ, ಅಲ್ಲಿರುವ ಹೂಳಿನಿಂದಲೇ ಈ ರೀತಿ ನೀರು ಪ್ರವಾಹವಾಗಿ ರಸ್ತೆಗಳಲ್ಲಿ ಹರಿಯುತ್ತಿದೆ. ಮುಖ್ಯಮಂತ್ರಿ, ಶಾಸಕರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದರೆ ನಗರದ ಯಾವ ಭಾಗದಲ್ಲೂ ಈ ಕೆಲಸವಾಗಿಲ್ಲ. ಹೀಗಾಗಿಯೇ ಎಲ್ಲೆಡೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಮನೆಗಳಿಗೂ ನುಗ್ಗುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಶಿವಕುಮಾರ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT