ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಆರ್‌ಆರ್‌ನಲ್ಲಿ ಮತ್ತೆ ಸಂಚಾರ ದಟ್ಟಣೆ: ಕಳವಳ

ಮೊದಲಿನಷ್ಟೇ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದರೆ ನಿತ್ಯ ಸಂಕಷ್ಟ? * ಮನೆಯಿಂದಲೇ ಕೆಲಸ– ಐಟಿ ಕಂಪನಿಗಳಿಗೆ ಪತ್ರ
Last Updated 30 ಆಗಸ್ಟ್ 2021, 21:56 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಪುರ– ಸಿಲ್ಕ್‌ಬೋರ್ಡ್‌ ನಡುವೆ ನಡೆಯುತ್ತಿರುವ ‘ನಮ್ಮ ಮೆಟ್ರೊ’ ಕಾಮಗಾರಿಯಿಂದಾಗಿ ಹೊರವರ್ತುಲ ರಸ್ತೆಯ (ಒಆರ್‌ಆರ್‌) ಆಸುಪಾಸಿನಲ್ಲಿ ಮತ್ತೆ ವಾಹನ ಸಂಚಾರ ದಟ್ಟಣೆ ಹೆಚ್ಚಳವಾಗುತ್ತಿರುವುದು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.

ಕೋವಿಡ್‌ ಕಾಣಿಸಿಕೊಳ್ಳುವುದಕ್ಕೆ ಮುನ್ನ ಒಆರ್‌ಆರ್‌ ಸಂಚಾರ ದಟ್ಟಣೆ ಸಮಸ್ಯೆಯಿಂದ ನಲುಗಿ ಹೋಗಿತ್ತು.

ಸರ್ಕಾರವು ‘ಬಸ್‌ ಆದ್ಯತಾ ಪಥ’ದಂತಹ ಪರಿಹಾರ ಕ್ರಮಗಳನ್ನು ಜಾರಿಗೆ ತಂದರೂ ದಟ್ಟಣೆ ಸಮಸ್ಯೆ ಹತೋಟಿಗೆ ಬಂದಿರಲಿಲ್ಲ. ಮಾಹಿತಿ ತಂತ್ರಜ್ಞಾನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೋವಿಡ್‌ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದರಿಂದಾಗಿ ಒಆರ್‌ಆರ್‌ನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು.

ಒಆರ್‌ಆರ್‌ನಲ್ಲಿ ಮೆಟ್ರೊ ಕಾಮಗಾರಿಯೂ ನಡೆಯುತ್ತಿರುವುದರಿಂದ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದೆ. ‘ನಮ್ಮ ಮೆಟ್ರೊ’ ಕಾಮಗಾರಿ ಇನ್ನೂ ಎರಡು ವರ್ಷ ಮುಂದುವರಿಯುವುದರಿಂದ ಇಲ್ಲಿನ ಒಆರ್‌ಆರ್‌ನಲ್ಲಿ ಸಂಚಾರ ದಟ್ಟಣೆ ನಿಭಾಯಿಸುವುದು ತಲೆನೋವಾಗಿದೆ. ದೊಡ್ಡ ದೊಡ್ಡ ಟೆಕ್‌ ಪಾರ್ಕ್‌ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಂಪನಿಗಳು ಒಆರ್‌ಆರ್‌ ಆಸುಪಾಸಿನಲ್ಲೇ ಕಚೇರಿಗಳನ್ನು ಹೊಂದಿವೆ. ಒಆರ್‌ಆರ್‌ ಆಸುಪಾಸಿನ ಕಂಪನಿಗಳು ಲಾಕ್‌ ಡೌನ್‌ ತೆರವುಗೊಂಡ ಬಳಿಕ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ. ಇದರಿಂದಾಗಿ ಹೊರ ವರ್ತುಲ ರಸ್ತೆಯಲ್ಲಿ ಮತ್ತೆ ದಟ್ಟಣೆ ಕಾಣಿಸಿಕೊಳ್ಳುತ್ತಿದೆ.

‘ಐ.ಟಿ ಕಂಪನಿಗಳು ತಮ್ಮ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದರಿಂದ ಒಆರ್‌ಆರ್‌ನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಹಬಂದಿಗೆ ಬಂದಿತ್ತು. ಇಲ್ಲಿ ಈಗ ನಮ್ಮ ಮೆಟ್ರೊ ಕಾಮಗಾರಿಯೂ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ನಿಭಾಯಿಸುವುದು ಕ್ಲಿಷ್ಟಕರವಾಗಿದೆ. ಐ.ಟಿ.ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಂಡರೆಈಗ ಮತ್ತೆ ಸಂಚಾರ ಸಮಸ್ಯೆ ಉಲ್ಬಣವಾಗಲಿದೆ. ಹಾಗಾಗಿ ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು 2022 ಡಿಸೆಂಬರ್‌ವರೆಗೆ ಅಥವಾ ನಂತರವೂ ವಿಸ್ತರಿಸಬೇಕು’ ಎಂದು ಕೋರಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಅವರು ನಾಸ್ಕಾಂನ ಪ್ರಾದೇಶಿಕ ನಿರ್ದೇಶಕರಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ.

‘ಇಲ್ಲಿನ ಸಂಚಾರ ಸಮಸ್ಯೆ ನಿವಾರಣೆಗೆ ಸಮೂಹ ಸಾರಿಗೆ ಹಾಗೂ ಸೈಕಲ್ ಬಳಕೆಗೆ ಉತ್ತೇಜನ ನೀಡಿದರೆ ಇನ್ನೂ ಅನುಕೂಲ. ಇದಕ್ಕೆ ಪೂರಕವಾಗಿ ಕೆಲಸದ ಅವಧಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬೇಕು, ಕಚೇರಿಗೆ ಬರಲೇ ಬೇಕಾದ ಸಿಬ್ಬಂದಿ ಬಸ್‌ಗಳಲ್ಲಿ ಸಂಚರಿಸಲು ಹುರಿದುಂಬಿಸಬೇಕು. ಬಸ್ ಆದ್ಯತಾ ಪಥಗಳಲ್ಲಿ ಬಿಎಂಟಿಸಿ ಹಾಗೂ ಇತರ ಸಂಸ್ಥೆಗಳ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡುವುದರಿಂದ ಅವರ ಪ್ರಯಾಣದ ಅವಧಿಯೂ ಕಡಿತವಾಗಲಿದೆ’ ಎಂದು ಅವರು ಸಲಹೆ ನೀಡಿದ್ದಾರೆ.

ನಿತ್ಯ 90 ನಿಮಿಷ ರಸ್ತೆಯಲ್ಲೇ ನಷ್ಟ?
ಕೆ.ಆರ್‌.ಪುರದಿಂದ- ಸಿಲ್ಕ್‌ ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಯಲ್ಲಿ ಕೋವಿಡ್‌ ಪೂರ್ವ ಸನ್ನಿವೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಒಂದು ವರ್ಷದಲ್ಲಿ ಆಗುತ್ತಿದ್ದ ಒಟ್ಟು ನಷ್ಟದ ಪ್ರಮಾಣವೆಷ್ಟು ಗೊತ್ತೇ? ₹ 20,713 ಕೋಟಿ!

ಕೆ.ಆರ್‌.ಪುರ–ಸಿಲ್ಕ್‌ಬೋರ್ಡ್‌ವರೆಗೆ ಮೆಟ್ರೊ ಮಾರ್ಗದ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‌) ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಒಆರ್‌ಆರ್‌ನ ದಟ್ಟಣೆ ಸಮಸ್ಯೆ ಹಾಗೂ ಅದರ ಆಸುಪಾಸಿನ ಆರ್ಥಿಕ ಚಟುವಟಿಕೆಯ ಸಮಗ್ರ ವಿಶ್ಲೇಷಣೆ ನಡೆಸಿತ್ತು. ಅದರ ಪ್ರಕಾರ ಹೊರವರ್ತುಲ ರಸ್ತೆಯಲ್ಲಿ ಕ್ಷಿಪ್ರ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ಒಬ್ಬ ಉದ್ಯೋಗಿ ನಿತ್ಯ 2ರಿಂದ 4 ತಾಸು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಇದರಿಂದ ನಿತ್ಯ ಸರಾಸರಿ 90 ನಿಮಿಷ ಕೆಲಸದ ಅವಧಿ ನಷ್ಟವಾಗುತ್ತದೆ ಎಂದು ಅಂದಾಜಿಸಲಾಗಿತ್ತು.

ಒಬ್ಬ ಉದ್ಯೋಗಿ ವರ್ಷದಲ್ಲಿ ಕೆಲಸ ಮಾಡುವ ಸರಾಸರಿ ಅವಧಿ 2,115 ತಾಸು. ದಿನಕ್ಕೆ 90 ನಿಮಿಷದ ಪ್ರಕಾರ ಒಬ್ಬ ಉದ್ಯೋಗಿ ವರ್ಷದಲ್ಲಿ ಸರಾಸರಿ 352.5 ತಾಸು ಕೆಲಸದ ಅವಧಿಯನ್ನು ಹೊರ ವರ್ತುಲ ನಷ್ಟವಾಗುತ್ತದೆ. ಈ ಆಧಾರದಲ್ಲಿ ಒಟ್ಟು ₹ 20,713 ಕೋಟಿ ವಾರ್ಷಿಕ ನಷ್ಟಕ್ಕೆ ಸಂಚಾರ ದಟ್ಟಣೆ ಸಮಸ್ಯೆ ಕಾರಣವಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಲೆಕ್ಕಾಚಾರ ಹಾಕಿತ್ತು. 2015ರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಗಳಿಂದ ದೇಶವು ಗಳಿಸಿದ್ದ ವರಮಾನದಲ್ಲಿ ( ₹ 9.70 ಲಕ್ಷ ಕೋಟಿ) ಬೆಂಗಳೂರಿನ ಸಂಸ್ಥೆಗಳ ಪಾಲನ್ನು ( ₹ 3.83 ಲಕ್ಷ ಕೋಟಿ) ಆಧರಿಸಿ ಈ ಅಂದಾಜನ್ನು ಲೆಕ್ಕ ಹಾಕಲಾಗಿತ್ತು.

ನಗರದಲ್ಲಿ 4ಕೋಟಿ ಚದರ ಅಡಿಗಳಷ್ಟು ವಾಣಿಜ್ಯ ಕಚೇರಿ ತಾಣಗಳಿವೆ. ಈ ಪೈಕಿ ಶೇಕಡ 33ರಷ್ಟು (1.32 ಕೋಟಿ ಚದರ ಅಡಿ) ವಾಣಿಜ್ಯ ಕಚೇರಿ ತಾಣಗಳು ಹೊರ ವರ್ತುಲ ರಸ್ತೆಯ ಆಸುಪಾಸಿನಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಮತ್ತಷ್ಟು ವಾಣಿಜ್ಯ ಕಚೇರಿ ಪ್ರದೇಶಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. ಇವುಗಳಲ್ಲಿ ಸಿಂಹಪಾಲು ಹೊರವರ್ತುಲ ರಸ್ತೆಯ ಆಸುಪಾಸಿನ ಪ್ರದೇಶಗಳಲ್ಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT