ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸ್‌ಪ್ರೆಸ್‌ ವೇ: ಮೈಸೂರಿನಿಂದ ವೇಗ, ಬೆಂಗಳೂರು ಪ್ರವೇಶಿಸಿದೊಡನೆ ಸಂಚಾರ ದಟ್ಟಣೆ

Last Updated 19 ಫೆಬ್ರುವರಿ 2023, 6:39 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಮೈಸೂರು ರಸ್ತೆ ರಾಜರಾಜೇಶ್ವರಿ ಆಸ್ಪತ್ರೆ ಬಳಿ ವಾಹನ ದಟ್ಟಣೆ ಉಂಟಾಗುತ್ತಿದ್ದು, ಮೈಸೂರಿನಿಂದ ನಗರಕ್ಕೆ ಒಂದೂವರೆ ಗಂಟೆಯಲ್ಲಿ ಬರುವ ನಾಗರಿಕರು ಇಲ್ಲಿನ ದಟ್ಟಣೆಯಿಂದ ಪರಿತಪಿಸುತ್ತಿದ್ದಾರೆ.

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇಯಿಂದ ಎರಡೂ ನಗರಗಳ ನಡುವಿನ ಪ್ರಯಾಣದ ಸಮಯ ಕಡಿಮೆಯಾಗಿದೆ. ಆದರೆ, ರಾಜರಾಜೇಶ್ವರಿ ಆಸ್ಪತ್ರೆ ಬಳಿ ಎಕ್ಸ್‌ಪ್ರೆಸ್‌ ವೇ ಅಂತ್ಯಗೊಂಡು, ಆ ಮೇಲ್ಸೇತುವೆ ಇಳಿಜಾರು ಆರಂಭದಿಂದಲೇ ದಟ್ಟಣೆಯಲ್ಲಿ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಏಕೆಂದರೆ, ಈ ಮೇಲ್ಸೇತುವೆ ಮುಗಿದ ಕೂಡಲೇ ರಸ್ತೆ ಕಿರಿದಾಗುತ್ತದೆ. ಮೇಲ್ಸೇತುವೆ ಹಾಗೂ ಸರ್ವಿಸ್‌ ರಸ್ತೆಗಳ ಸಂಚಾರ ಒಂದೇ ಪಥದಲ್ಲಿ ಸಾಗಬೇಕಾಗಿದೆ.

‘ನಮ್ಮ ಮೆಟ್ರೊ’ದ ಚಲ್ಲಘಟ್ಟ ಸ್ಟೇಷನ್‌ ಇಲ್ಲಿ ನಿರ್ಮಾಣ ಹಂತದಲ್ಲಿದೆ. ಅದರ ಸುತ್ತ ಮಳೆನೀರಿನ ಕಾಲುವೆ ಹಾದು ಹೋಗುತ್ತಿದೆ. ಮೆಟ್ರೊ ಸ್ಟೇಷನ್‌ನಿಂದ ಪಂಚಮುಖಿ ಗಣೇಶ ದೇವಸ್ಥಾನದ ಎದುರಿನ ರಸ್ತೆಯವರೆಗೂ ಮಳೆನೀರಿನ ಕಾಲುವೆಯನ್ನು ಬಾಕ್ಸ್‌ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿಯಿಂದ ಇರುವ ರಸ್ತೆಯೂ ಕಿರಿದಾಗಿದೆ. ಇದರಿಂದ ಬೆಳಿಗ್ಗೆ ಹಾಗೂ ಸಂಜೆ ‘ಪೀಕ್‌ ಅವರ್‌’ನಲ್ಲಿ ವಾಹನ ಸವಾರರು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ.

ನೈಸ್‌ ರಸ್ತೆಯಿಂದ ಬರುವ ವಾಹನಗಳಿಗೆ ಪಂಚಮುಖಿ ಗಣೇಶ ದೇವಸ್ಥಾನದ ಬಳಿ ಬಲ ಹಾಗೂ ‘ಯೂ’ ತಿರುವಿಗಿದ್ದ ಅವಕಾಶ ಇದೀಗ ಇಲ್ಲ. ಆ ವಾಹನಗಳು ಮೇಲ್ಸೇತುವೆಯ ಕೆಳಗೆ ‘ಯೂ’ ತಿರುವು ಪಡೆದು ಬರುತ್ತಿವೆ. ಇಷ್ಟಾದರೂ, ಮೈಸೂರು ಕಡೆಯಿಂದ, ಕೆಳಭಾಗದಿಂದ ಬರುವ ಎಲ್ಲ ವಾಹನಗಳು ಮುಂದೆ ಸಾಗುವ ರಸ್ತೆ ಕಿರಿದಾಗುತ್ತದೆ. ನಂತರ ನೈಸ್‌ ರಸ್ತೆಗೆ ಭಾರಿ ವಾಹನಗಳು ತಿರುವು ಪಡೆಯುವ ಸಂದರ್ಭದಲ್ಲೂ ಸಂಚಾರ ನಿಧಾನಗತಿಯಾಗಿ, ಕೆಲವು ಬಾರಿ ನಿಂತಲ್ಲೇ ನಿಲ್ಲಬೇಕಾಗುತ್ತದೆ.

‘ನೈಸ್‌ ರಸ್ತೆ ಜಂಕ್ಷನ್‌ನಿಂದ ಮೈಸೂರು ಕಡೆಗೆ ಮೇಲ್ಸೇತುವೆ ಹಾಗೂ ಕೆಳರಸ್ತೆಯಿಂದ ಕುಂಬಳಗೋಡು ಕಡೆಗೆ ಹೋಗುವಾಗ ಸಮಸ್ಯೆ ಆಗುವುದಿಲ್ಲ. ಆದರೆ, ಕುಂಬಳಗೋಡು, ದೊಡ್ಡ ಆಲದಮರ, ಅಂಚೆಪಾಳ್ಯ ಸುತ್ತಮುತ್ತ ಪ್ರದೇಶಕ್ಕೆ ಸುಗಮವಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ರಸ್ತೆ ಕಿರಿದಾಗಿ, ಕಾಮಗಾರಿಯ ಸಾಮಗ್ರಿಗಳು ಇರುವುದಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ’ ಎಂದು ಕುಂಬಳಗೋಡಿನ ರಮೇಶ್‌ ಶ್ರೀನಿವಾಸ್‌ ಹೇಳಿದರು.

‘ರಾಜರಾಜೇಶ್ವರಿ ಆಸ್ಪತ್ರೆಗೆ ಸಾಕಷ್ಟು ಜನ ಬರುತ್ತಾರೆ. ಅವರು ಮತ್ತೆ ನಗರದ ಕಡೆಗೆ ಹೋಗುವಾಗ 15ರಿಂದ 20 ನಿಮಿಷ ದಟ್ಟಣೆಯಲ್ಲೇ ಸಿಲುಕುತ್ತಾರೆ. ಸಂಚಾರ ಪೊಲೀಸರಿದ್ದರೂ ಭಾರಿ ವಾಹನಗಳನ್ನು ನಿಯಂತ್ರಿಸುತ್ತಿಲ್ಲ. ಅವು ರಸ್ತೆ ಪಕ್ಕದಲ್ಲಿ ನಿಂತಿರುವುದೂ ದಟ್ಟಣೆಗೆ ಮತ್ತೊಂದು ಕಾರಣವಾಗಿದೆ. ಕಾಮಗಾರಿಯನ್ನು ಬೇಗ ಮುಗಿಸಿ, ರಸ್ತೆ ವಿಸ್ತರಿಸಬೇಕು’ ಎಂದು ಅಂಗಡಿ ಮಾಲೀಕರಾದ ಸ್ವರ್ಣಮ್ಮ ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದಾಗ, ಅವರು ಪ್ರತಿಕ್ರಿಯಿಸಲಿಲ್ಲ.‌

ಮೈಸೂರು ರಸ್ತೆ– ಉತ್ತರಹಳ್ಳಿ ಜಂಕ್ಷನ್‌ನಲ್ಲೂ ದಟ್ಟಣೆ
‘ಕೆಂಗೇರಿ ಪೊಲೀಸ್‌ ಠಾಣೆಯಿಂದ ಕೆಂಗೇರಿ ಸ್ಯಾಟಲೈಟ್‌ ಬಸ್‌ ನಿಲ್ದಾಣದವರೆಗೂ ದಿನದ ಬಹುತೇಕ ಸಮಯ ವಾಹನ ದಟ್ಟಣೆ ಇರುತ್ತದೆ. ಕೋಟೆ ಬೀದಿ ಹಾಗೂ ಕೆಂಗೇರಿ ಊರಿನ ಒಳಗೆ ಹೋಗಲು ತಿರುವುಗಳಿವೆ. ಇದು ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಸೃಷ್ಟಿಸುತ್ತಿದೆ. ಇದಾದ ಮೇಲೆ ಉತ್ತರಹಳ್ಳಿ ಕಡೆಗೆ ಸಾಗುವ ಜಂಕ್ಷನ್‌ನಲ್ಲಿ 10ರಿಂದ 20 ನಿಮಿಷ ಕಾಯಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ದಟ್ಟಣೆ ನಿವಾರಣೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಪೊಲೀಸರು ಸೇರಿದಂತೆ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಸುಗಮ ಸಂಚಾರ ಅಥವಾ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಸುನಂದಮ್ಮ, ಮಲ್ಲೇಶಪ್ಪ, ಜಗದೀಶ್‌, ಮುರುಳಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT