ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ರಸ್ತೆಯಲ್ಲಿ ವಾಹನ ದಟ್ಟಣೆ ತೀವ್ರ: ಅಪಘಾತಗಳ ಸಂಖ್ಯೆ ಹೆಚ್ಚಳ!

ಸರಕು ತುಂಬಿದ ವಾಹನಗಳ ವೇಗಕ್ಕಿಲ್ಲ ಕಡಿವಾಣ, ಅಪಘಾತಗಳ ಸಂಖ್ಯೆ ಹೆಚ್ಚಳ
Published 20 ಸೆಪ್ಟೆಂಬರ್ 2023, 19:36 IST
Last Updated 20 ಸೆಪ್ಟೆಂಬರ್ 2023, 19:36 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದರಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

ಅದರಲ್ಲೂ ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ನಿತ್ಯವೂ ಸಾಲುಗಟ್ಟಿ ನಿಲ್ಲುತ್ತಿವೆ. ಎರಡು ವರ್ಷಗಳ ಹಿಂದೆಯೇ ಪೀಣ್ಯದ ಮೇಲ್ಸೇತುವೆಯ ಪಿಲ್ಲರ್‌ವೊಂದರಲ್ಲಿ ಬಿರುಕು ಕಾಣಿಸಿದ್ದರಿಂದ ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ‌ಅದು ಈಗಲೂ ಮುಂದುವರಿದಿದೆ.

ಪಿಲ್ಲರ್‌ ದುರಸ್ತಿ ಪಡಿಸಿ ಸೆಪ್ಟೆಂಬರ್‌ ಮೊದಲ ವಾರದಲ್ಲೇ ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರವು ಭರವಸೆ ನೀಡಿತ್ತು. ಅದು ಇನ್ನೂ ಸಾಧ್ಯವಾಗಿಲ್ಲ.

ಪ್ರಮುಖ ಜಂಕ್ಷನ್‌ಗಳಲ್ಲಿ ದಟ್ಟಣೆ

ನೆಲಮಂಗಲ ಕ್ರಾಸ್‌, ಟಿ.ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್‌, ಪೀಣ್ಯ, ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಅದರಲ್ಲೂ ಗೊರಗುಂಟೆಪಾಳ್ಯದಲ್ಲಿ ವಾಹನಗಳ ಮುಂದಕ್ಕೆ ಸಾಗಲು ಹಲವು ನಿಮಿಷಗಳೇ ಹಿಡಿಯುತ್ತಿವೆ. ಗೊರಗುಂಟೆಪಾಳ್ಯದ ಮೂಲಕ ಮೈಸೂರು ರಸ್ತೆ, ಸುಂಕದಕಟ್ಟೆ, ಕೆಂಗೇರಿ, ಹೆಬ್ಬಾಳ, ಯಲಹಂಕ, ಯಶವಂತಪುರ, ಮೆಜೆಸ್ಟಿಕ್, ರಾಜಾಜಿನಗರದ ಕಡೆಗೆ ವಾಹನಗಳು ಸಾಗಬೇಕು. ಹೀಗಾಗಿ ಈ ಜಂಕ್ಷನ್‌ ನಿತ್ಯ ದಟ್ಟಣೆ ಪ್ರದೇಶವಾಗಿ ಕಂಡುಬರುತ್ತಿದೆ.

ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಈ ಮಾರ್ಗದಲ್ಲಿ ನಿತ್ಯ 1 ಲಕ್ಷಕ್ಕೂ ಹೆಚ್ಚು ವಾಹನಗಳು ಸಾಗುತ್ತವೆ. ರಾತ್ರಿ ವೇಳೆಯಲ್ಲಿ 40 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಮೇಲ್ಸೇತುವೆಯಲ್ಲಿ ಅವಕಾಶವಿಲ್ಲದ ಕಾರಣ ಬಸ್‌, ಸರಕು ಸಾಗಣೆ ಲಾರಿಗಳು ಕೆಳರಸ್ತೆಯಲ್ಲೇ ಸಂಚರಿಸುತ್ತಿವೆ. ಇದರಿಂದಲೂ ಪಾದಚಾರಿಗಳು ಹಾಗೂ ಬೈಕ್‌ ಸವಾರರಿಗೆ ತೀವ್ರ ತೊಂದರೆ ಎದುರಾಗುತ್ತಿದೆ. ಮೇಲ್ಸೇತುವೆ ದುರಸ್ತಿಯಾದರೆ ತುಸು ಸಮಸ್ಯೆ ತಗ್ಗಲಿದೆ.

ಅಪಘಾತಗಳ ವೃತ್ತ

ಸಂಜೆ ಹಾಗೂ ರಾತ್ರಿ ವೇಳೆ ಸರಕು ಸಾಗಣೆ ವಾಹನಗಳು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಬರುತ್ತಿವೆ. ಯಶವಂತಪುರ ಎಂಪಿಎಂಸಿಗೂ ಕೃಷಿ ಉತ್ಪನ್ನ ತುಂಬಿದ ಸಾವಿರಾರು ಲಾರಿಗಳು ಬರುತ್ತಿದ್ದು, ಇದು ದಟ್ಟಣೆಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಕೆಲವು ಕಡೆ ಏಕಮುಖ ಸಂಚಾರ ವ್ಯವಸ್ಥೆಯಿದ್ದರೂ ಸವಾರರು ಅದನ್ನು ಲೆಕ್ಕಿಸದೇ ವಾಹನ ಚಲಾಯಿಸುತ್ತಿದ್ದಾರೆ.

ರಾತ್ರಿ 8ರ ನಂತರ ಲಾರಿಗಳ ಅತಿವೇಗದ ಸಂಚಾರವು ಅಪಘಾತಕ್ಕೆ ಕಾರಣವಾಗುತ್ತಿದೆ. ಜಾಲಹಳ್ಳಿ ಕ್ರಾಸ್‌ನಲ್ಲಿ ನಡೆದ ಅಪಘಾತದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ಕಳೆದ ವಾರ ಟಿ.ದಾಸರಹಳ್ಳಿ ಸಮೀಪ ನಡೆದ ಅಪಘಾತದಲ್ಲಿ ಪೌರ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು.   

‘ಕೆಲವು ವೃತ್ತಗಳಲ್ಲಿ ಸಂಚಾರ ಪೊಲೀಸರು ಕರ್ತವ್ಯದಲ್ಲಿದ್ದರೂ ಅವರನ್ನು ಲೆಕ್ಕಿಸದೇ ವಾಹನಗಳು ವೇಗವಾಗಿ ನುಗ್ಗುತ್ತಿವೆ’ ಎಂದು ದಾಸರಹಳ್ಳಿ ನಿವಾಸಿ ಸುನಿಲ್‌ ದೂರುತ್ತಾರೆ.

ತುಮಕೂರು ರಸ್ತೆ, ಹೆಬ್ಬಾಳ ರಸ್ತೆ ಸೇರಿದಂತೆ ವಾಹನ ದಟ್ಟಣೆ ಪ್ರದೇಶಕ್ಕೆ ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಇತ್ತೀಚೆಗೆ ಭೇಟಿ ನೀಡಿದ್ದರು. ಸಂಚಾರ ಸುಧಾರಣೆಗೆ ಕೆಲವು ಸೂಚನೆಗಳನ್ನು ನೀಡಿದ್ದರೂ ಪಾಲನೆ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಬಿ.ಆರ್.ಶ್ರೀರಾಮರೆಡ್ಡಿ
ಬಿ.ಆರ್.ಶ್ರೀರಾಮರೆಡ್ಡಿ

ರೋಗಿಗಳ ಪರದಾಟ

ತುಮಕೂರು ರಸ್ತೆಯ ಎಲ್ಲ ಜಂಕ್ಷನ್‌ಗಳಲ್ಲೂ ವಾಹನಗಳು ಮುಂದಕ್ಕೆ ಸಾಗಲು ಹಲವು ನಿಮಿಷಗಳೇ ಕಾಯಬೇಕಿದೆ. ಇದೇ ಮಾರ್ಗದಲ್ಲಿ ಸ್ಪರ್ಶ ಪೀಪಲ್ಸ್‌ ಟ್ರೀ ಸೇರಿದಂತೆ ಹಲವು ಆಸ್ಪತ್ರೆಗಳಿವೆ. ರೋಗಿಗಳನ್ನು ಕರೆದೊಯ್ಯುವ ಆಂಬುಲೆನ್ಸ್‌ಗಳು ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿವೆ. ಇದರಿಂದ ರೋಗಿಗಳ ಜೀವಕ್ಕೂ ಅಪಾಯ ಎದುರಾಗುತ್ತಿದೆ. ಯಶವಂತಪುರ ಮಾರುಕಟ್ಟೆಯನ್ನು ದಾಸನಪುರಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸಿದರೆ ಸ್ವಲ್ಪಮಟ್ಟಿಗೆ ಸಮಸ್ಯೆಗೆ ಪರಿಹಾರ ಸಿಗಲಿದೆ. –ಶ್ರೀರಾಮರೆಡ್ಡಿ ದಾಸನಪುರ

‘ವಿಶೇಷ ಕಮಿಷನರ್‌ ಇಲ್ಲ’

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಚಾರ ವಿಭಾಗಕ್ಕೆ ವಿಶೇಷ ಕಮಿಷನರ್‌ ನೇಮಿಸಲಾಗಿತ್ತು. ಅವರು ಸಂಚಾರ ಸುಧಾರಣೆಗೆ ಹಲವು ಕ್ರಮ ಕೈಗೊಂಡಿದ್ದರು. ಈಗ ಸಂಚಾರ ವಿಭಾಗದ ಜಂಟಿ ಕಮಿಷನರ್‌ ಮಾತ್ರವೇ ಇದ್ಧಾರೆ. ವಿಶೇಷ ಕಮಿಷನರ್‌ ಅವರನ್ನು ಮತ್ತೆ ನೇಮಿಸುವಂತೆ ಎಫ್‌ಕೆಸಿಸಿಐನಲ್ಲಿ ನಡೆದ ಸಂವಾದದಲ್ಲಿ ನಗರ ಪೊಲೀಸ್‌ ಕಮಿಷನರ್‌ಗೆ ಮನವಿ ಸಲ್ಲಿಸಲಾಗಿತ್ತು. ಇನ್ನೂ ನೇಮಕವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT