ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡ್ಡರಪಾಳ್ಯದಲ್ಲಿ ಪ್ರವಾಹದ ಕನವರಿಕೆ

ರಾಜಕಾಲುವೆಗೆ ಅಡ್ಡಲಾಗಿರುವ ಕಿರಿದಾದ ರೈಲ್ವೆ ಸೇತುವೆ: ಮನೆಗಳಿಗೆ ನುಗ್ಗುವ ನೀರು
Last Updated 19 ಜುಲೈ 2021, 19:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾಲುವೆಗೆ ಅಡ್ಡಲಾಗಿರುವ ರೈಲ್ವೆ ಸೇತುವೆ, ಜೋರು ಮಳೆ ಬಂದರೆ ಪಕ್ಕದ ಬಡಾವಣೆಗಳಿಗೆ ನುಗ್ಗುವ ನೀರು, ಕಳೆದ ವರ್ಷ ಆಗಿದ್ದ ಹಾನಿಯ ಕನವರಿಕೆಯಲ್ಲೇ ಇರುವ ಬಡಾವಣೆಗಳ ಜನ...

ಇದು ಹೆಣ್ಣೂರು–ಬಾಗಲೂರು ರಸ್ತೆಯ ಪಕ್ಕದಲ್ಲಿರುವ ಹೊರಮಾವು ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿನಗರದ ಶ್ರೀಸಾಯಿ ಬಡಾವಣೆ ಸ್ಥಿತಿ.

ಹೆಬ್ಬಾಳ, ನಾಗವಾರ, ಯಲಹಂಕ, ಅಲ್ಲಾಳಸಂದ್ರ, ಜಕ್ಕೂರು, ರಾಚೇನಹಳ್ಳಿ ಕೆರೆಗಳನ್ನು ದಾಟಿ,ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಹಾದು, ಎಲಿಮೆಂಟ್ಸ್‌ ಮಾಲ್‌ ಪಕ್ಕದಲ್ಲಿ ಹೋಗುವ ರಾಜಕಾಲುವೆಗೆ ಮುಂದೆ ಸಾಗಿದಂತೆ ಕೆ.ಜಿ. ಹಳ್ಳಿ ಕಡೆಯಿಂದ ಬರುವ ಮತ್ತೊಂದು ರಾಜಕಾಲುವೆಯೂ ಸೇರಿಕೊಳ್ಳುತ್ತದೆ. ಅಲ್ಲಿಂದ ಮುಂದಕ್ಕೆ ಹೆಣ್ಣೂರು– ಬಾಗಲೂರು ರಸ್ತೆ ತನಕ ರಾಜಕಾಲುವೆ ವಿಸ್ತಾರವಾಗಿ ಹರಿಯುತ್ತಿದೆ.

ಈ ರಸ್ತೆ ದಾಟಿದ ನಂತರವೂ ಲಿಂಗರಾಜಪುರದ ಕಡೆಯಿಂದ ಬರುವ ಮತ್ತೊಂದು ರಾಜಕಾಲುವೆಯೂ ಇದರೊಳಗೆ ವಿಲೀನಗೊಳ್ಳುತ್ತದೆ. ಅಲ್ಲಿಂದ ನೂರು ಮೀಟರ್ ದೂರದಲ್ಲೇ ರೈಲ್ವೆ ಮಾರ್ಗ ಎದುರಾಗುತ್ತದೆ. ರಾಜಕಾಲುವೆಯು ರೈಲ್ವೆ ಮಾರ್ಗವನ್ನು ದಾಟಲು ಸಣ್ಣ ಸಣ್ಣ ಕಿಂಡಿಯಂತಹ ಎರಡು ಸೇತುವೆಗಳಿವೆ. ರೈಲು ಮಾರ್ಗಕ್ಕೂ ಹಿಂದಿನ ರಾಜಕಾಲುವೆ 45 ಮೀಟರ್ ಅಗಲ ಇದ್ದರೆ, ರೈಲ್ವೆ ಸೇತುವೆ ದಾಟಿದ ಬಳಿಕ ಕಿರಿದಾಗಿ ಹರಿಯುತ್ತದೆ. ಎರಡೂ ಕಡೆ ಎತ್ತರವಾಗಿ ಕಟ್ಟಲಾಗಿರುವ ತಡೆಗೋಡೆಗಳು ಇಲ್ಲಿಗೇ ಮುಕ್ತಾಯವಾಗುತ್ತವೆ. ಬೇಸಿಗೆಯಲ್ಲಿ ನೀರು ಸಣ್ಣದಾಗಿ ಹರಿಯುವ ಕಾರಣ ಇದು ಸಮಸ್ಯೆಯಾಗಿ ಕಾಣಿಸುವುದಿಲ್ಲ. ಮಳೆಗಾಲದಲ್ಲಿ ಜೋರು ಮಳೆ ಬಂದಾಗ ಸಮಸ್ಯೆ ಎದುರಾಗುತ್ತದೆ.

ಕಳೆದ ವರ್ಷ ಜೋರು ಮಳೆಯ ಸಂದರ್ಭದಲ್ಲಿ ನೀರು ರೈಲ್ವೆ ಮಾರ್ಗದ ಬಳಿ ಅಣೆಕಟ್ಟೆಗಳ ಹಿನ್ನೀರಿನಂತೆ ನಿಂತಿತ್ತು. ನೀರು ಹೆಚ್ಚಾದಂತೆ ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗಿತ್ತು. ವಡ್ಡರಪಾಳ್ಯ, ಕಾವೇರಿನಗರದ ಶ್ರೀಸಾಯಿ ಬಡಾವಣೆಗಳು ಜಲಾವೃತಗೊಂಡಿದ್ದವು. ಮನೆಗಳಿಗೇ ಮಳೆ ನೀರು ನುಗ್ಗಿದ್ದರಿಂದ ದಿನಸಿ ಪದಾರ್ಥ, ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು ನೀರುಪಾಲಾಗಿದ್ದವು. ಮನೆಯ ಮುಂದೆ ನಿಂತಿದ್ದ ವಾಹನಗಳೂ ತೇಲಿ ಹೋಗಿದ್ದವು.

ಈಗ ಮತ್ತೆ ಮಳೆಗಾಲ ಆರಂಭವಾದರೂ ಸಮಸ್ಯೆ ಸರಿಯಾಗಿಲ್ಲ. ಮತ್ತೊಮ್ಮೆ ಜೋರು ಮಳೆಯಾದರೆ ನೀರು ನುಗ್ಗುವ ಆತಂಕದಲ್ಲಿ ಜನ ಇದ್ದಾರೆ. ರೈಲ್ವೆ ಸೇತುವೆ ವಿಸ್ತರಣೆ ಮಾಡಲು ₹18 ಕೋಟಿ ಅಂದಾಜು ಮೊತ್ತದ ಯೋಜನೆಯನ್ನು ರೈಲ್ವೆ ಇಲಾಖೆ ಸಿದ್ಧಪಡಿಸಿತ್ತು. ಆದರೆ, ಕಾಮಗಾರಿ ಆರಂಭವಾಗದೆ ಯೋಜನೆ ನನೆಗುದಿಗೆ ಬಿದ್ದಿದೆ.

’ಸಮಸ್ಯೆಯಾಗುವ ಸಾಧ್ಯತೆ ಇಲ್ಲ‘

‘ರಾಜಕಾಲುವೆಯಲ್ಲಿ ದೊಡ್ಡದಾಗಿ ಇದ್ದ ಒಳಚರಂಡಿ ಚೇಂಬರ್ ಒಡೆದು ಹಾಕಲಾಗಿದ್ದು, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ. ಈ ವರ್ಷ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ರಾಜಕಾಲುವೆ) ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

‘ಈಗ ಮಾಡಿರುವ ಕೆಲಸದಿಂದಲೇ ಸಮಸ್ಯೆ ಪರಿಹಾರವಾದರೆ ರೈಲ್ವೆ ಸೇತುವೆ ವಿಸ್ತರಿಸುವ ದೊಡ್ಡ ಮೊತ್ತದ ಯೋಜನೆ ಕಾರ್ಯಗತಗೊಳಿಸುವ ಅಗತ್ಯ ಇಲ್ಲ. ಸಮಸ್ಯೆ ಎದುರಾದರೆ ಆ ಯೋಜನೆ ಆರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT