ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರ್‌ಗ್ರೀಸ್‌ ಕಳ್ಳಸಾಗಣೆ ಆರೋಪಿಗೆ ಹೈಕೋರ್ಟ್‌ ಜಾಮೀನು

Last Updated 10 ಡಿಸೆಂಬರ್ 2021, 16:30 IST
ಅಕ್ಷರ ಗಾತ್ರ

ಬೆಂಗಳೂರು: ತಿಮಿಂಗಿಲದ ವಾಂತಿ ‘ಅಂಬರ್‌ಗ್ರೀಸ್‌‘ ಕಳ್ಳಸಾಗಣೆ ಪ್ರಕರಣದ ಆರೋಪಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕು ಕೊಯನಾಡು ನಿವಾಸಿ ರಿಯಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ನೀಡಿದೆ.

ಖಚಿತ ಮಾಹಿತಿ ಮೇರೆಗೆ ಮೈಸೂರು ಅರಣ್ಯ ಸಂಚಾರ ದಳದ ಅಧಿಕಾರಿಗಳು 2021ರ ಆಗಸ್ಟ್‌ 5ರಂದು ಕಾರೊಂದನ್ನು ತಡೆದು ಪರಿಶೀಲಿಸಿದ್ದರು. ಅದರಲ್ಲಿದ್ದ ನಾಲ್ವರು ಆರೋಪಿಗಳು 8.25 ಕೆ.ಜಿ. ತೂಕದ ಬೆಲೆಬಾಳುವ ಅಂಬರ್‌ ಗ್ರೀಸ್ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿತ್ತು. ಇವರನ್ನು ಬಂಧಿಸಿದ್ದ ಪೊಲೀಸರು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಪ್ರಕರಣಗಳಡಿ ಎಫ್‌ಐಆರ್ ದಾಖಲಿಸಿದ್ದರು.

‘ನಾವು ರಿಯಾಜ್ ಪರವಾಗಿ ಅಂಬರ್‌ಗ್ರೀಸ್ ಖರೀದಿಸಿದ್ದೇವೆ’ ಎಂದು ಬಂಧಿತ ಆರೋಪಿಗಳು ತಿಳಿಸಿದ್ದರು. ರಿಯಾಜ್‌ನನ್ನು ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿತ್ತು. ಬಂಧನ ಭೀತಿಯಿಂದ ರಿಯಾಜ್ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ಅಂಬರ್‌ಗ್ರೀಸ್‌ ಎಂದರೇನು?:ಅಂಬರ್‌ಗ್ರೀಸ್‌ ತಿಮಿಂಗಿಲಗಳ ಜೀರ್ಣಾಂಗದಲ್ಲಿ ಉತ್ಪತ್ತಿಯಾಗುವ ವಸ್ತು. ಇದು ಸ್ಪೆರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳಿಂದ ಮಾತ್ರ ಹೊರ ಬರುತ್ತದೆ. ಇದು ತಿಮಿಂಗಿಲದ ಹೊಟ್ಟೆಯಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗಿದ್ದಾಗ ಹಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಗಾಗಿ ಮೇಣದಂಥ ರಚನೆಯಲ್ಲಿ ಪರಿವರ್ತನೆಯಾಗಿರುತ್ತದೆ. ಸುಗಂಧಯುಕ್ತವಾದ ಈ ಅಂಬರ್‌ಗ್ರೀಸ್‌ಗೆ ಪಾಶ್ಚಾತ್ಯ ದೇಶಗಳಲ್ಲಿ ಭಾರಿ ಬೇಡಿಕೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT