ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮಂಗಲ ಪುರಸಭೆ ಪೌರ ಕಾರ್ಮಿಕರ ನೇಮಕಾತಿಗೆ ಹೈಕೋರ್ಟ್ ತಡೆ

Last Updated 6 ಡಿಸೆಂಬರ್ 2018, 8:03 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪುರಸಭೆಯಲ್ಲಿ ಕಾರ್ಯ ನಿರ್ವಹಿಸಲು ಕರೆಯಲಾಗಿರುವ 48 ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ಪುರಸಭೆಯಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಣ್ಣಮ್ಮ ಸೇರಿದಂತೆ 15 ಪೌರ ಕಾರ್ಮಿಕರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎ.ವಿ.ನಿಶಾಂತ್, ‘ಅರ್ಜಿದಾರರು 1990ರಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಈತನಕ ಕಾಯಂಗೊಳಿಸಿಲ್ಲ. ಏತನ್ಮಧ್ಯೆ ಹೊಸ ನೇಮಕಾತಿಗೆ ಮುಂದಾಗಿರುವುದು ಅರ್ಜಿದಾರರಿಗೆ ಅನ್ಯಾಯ ಉಂಟು ಮಾಡುತ್ತದೆ’ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಅರ್ಜಿದಾರರು ಪೌರ ಕಾರ್ಮಿಕರಾಗಿದ್ದು 25 ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಕಾಯಂಗೊಳಿಸದೆ ಈಗ ಏಕಾಏಕಿ ಹೊಸ ನೇಮಕಾತಿ ನಡೆಸುವುದು ತರವಲ್ಲ. ಇಂತಹ ವಿಷಯಗಳಲ್ಲಿ ಸರ್ಕಾರ ನ್ಯಾಯೋಚಿತವಾಗಿ ನಡೆದುಕೊಳ್ಳಬೇಕು’ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿದರು.

ಪ್ರತಿವಾದಿಯಾದ ನೆಲಮಂಗಲ ಪುರಸಭೆ ಮುಖ್ಯಾಧಿಕಾರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದರು.

‘ನೆಲಮಂಗಲ ಪುರಸಭೆಯಲ್ಲಿ ನಾವು ಪೌರ ಕಾರ್ಮಿಕರರಾಗಿ, ಲೋಡರ್ಸ್‌, ಚಾಲಕರು ಹಾಗೂ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಗುತ್ತಿಗೆ ಆದಾರದಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮನ್ನು ಕಾಯಂ ಗೊಳಿಸದೆ ಹೊಸ ನೇಮಕಾತಿಗೆ ಮುಂದಾಗಿರುವ ಮುಖ್ಯಾಧಿಕಾರಿಯ ಕ್ರಮ ಕಾನೂನುಬಾಹಿರ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT