ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೈಕೋರ್ಟ್‌ | ಅರ್ಜಿಗಳ ಕ್ಷಿಪ್ರ ವಿಲೇವಾರಿ: ನ್ಯಾಯಮೂರ್ತಿ ನಾಗಪ್ರಸನ್ನ ದಾಪುಗಾಲು

Published 18 ಜೂನ್ 2024, 16:22 IST
Last Updated 18 ಜೂನ್ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಹೈಕೋರ್ಟ್‌ಗಳಲ್ಲೇ ಕ್ಷಿಪ್ರಗತಿಯಲ್ಲಿ ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಂಗಳವಾರ 600 ಅರ್ಜಿಗಳ ವಿಚಾರಣೆಯನ್ನು ಮಧ್ಯಾಹ್ನದ ನಿಗದಿತ ಕಲಾಪದ ಅವಧಿಯ 45 ನಿಮಿಷಗಳಿಗೂ ಮುನ್ನವೇ ಪೂರೈಸಿದರು.

ಕೋರ್ಟ್‌ ಹಾಲ್‌ 19ರ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸಿಆರ್‌ಪಿಸಿ ಕಲಂ 482ರ ಅಡಿಯಲ್ಲಿ ಅಂದರೆ; ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ ತಡೆಗಟ್ಟಲು ಅಥವಾ ಭದ್ರತೆ ಪಡೆಯಲು ಅಗತ್ಯವಿರುವಂತಹ ಆದೇಶಗಳನ್ನು ಮಾಡುವ ಕಾಯ್ದೆಯಡಿ ಸಲ್ಲಿಸಲಾದ ಕ್ರಿಮಿನಲ್‌ ಅರ್ಜಿಗಳು ಮತ್ತು ಸಾಮಾನ್ಯವಾದ ವಿವಿಧ ಉಳಿಕೆ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳ 600 ಅರ್ಜಿಗಳ ವಿಚಾರಣೆ ನಡೆಸಿದರು.

53 ಪುಟಗಳ ಕಾಸ್ ಲಿಸ್ಟ್‌ನಲ್ಲಿ ನಿಗದಿಯಾಗಿದ್ದ 600 ಅರ್ಜಿಗಳ ಪೈಕಿ 180 ಅರ್ಜಿಗಳಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು 87 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ವಿಲೇವಾರಿ ಮಾಡಿದರು.

ಈ ಹಿಂದೆ ರಾಜ್ಯ ಹೈಕೋರ್ಟ್‌ನ ಮತ್ತೊಬ್ಬ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು, ಒಂದೇ ದಿನದ ಕಲಾಪದಲ್ಲಿ ಬರೋಬ್ಬರಿ 750 ಅರ್ಜಿಗಳನ್ನು ವಿಲೇವಾರಿ ಮಾಡಿದ ಉದಾಹರಣೆಯಿದೆ.

ದಾಖಲೆಯೋಪಾದಿಯ ಅರ್ಜಿ ವಿಲೇವಾರಿಗೆ ಪ್ರತಿಕ್ರಿಯಿಸಿದ ಹೈಕೋರ್ಟ್‌ ವಕೀಲ ಎಸ್‌.ಸುನಿಲ್‌ ಕುಮಾರ್, ‘ರಿಟ್‌ ಹಾಗೂ ಕ್ರಿಮಿನಲ್‌ ಅರ್ಜಿಗಳ ವಿಲೇವಾರಿ ಅಷ್ಟು ಕಷ್ಟ ಎನಿಸುವುದಿಲ್ಲ. ಆದರೆ, ಸ್ಥಿರಾಸ್ತಿ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿನ ವಿಲೇವಾರಿ ದಶಕಗಳಷ್ಟು ಕಾಲ ತೆಗೆದುಕೊಳ್ಳುತ್ತದೆ. ಆ ದಿಸೆಯಲ್ಲಿಯೂ ರಾಜ್ಯ ಹೈಕೋರ್ಟ್‌ನ ಇನ್ನುಳಿದ ನ್ಯಾಯಮೂರ್ತಿಗಳು ಗಮನಾರ್ಯ ಪ್ರಗತಿ ಸಾಧಿಸುತ್ತಿದ್ದಾರೆ’ ಎಂಬುದನ್ನು ನೆನಪಿಸಿದರು.

ಶ್ಲಾಘನೆ: ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಕಾರ್ಯವೈಖರಿಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರೂ ಆದ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಮತ್ತು ವಕೀಲರ ಪರಿಷತ್ ಸದಸ್ಯ ಎಸ್‌.ಹರೀಶ್‌, ‘ನಾಗಪ್ರಸನ್ನ ಅವರ ಕಾರ್ಯಶೈಲಿಯಿಂದ ಹೈಕೋರ್ಟ್‌ ಮೇಲೆ ಹೆಚ್ಚುತ್ತಿರುವ ಹೊರೆ ಕಡಿಮೆ ಆಗುತ್ತಿದೆ. ಅಷ್ಟೇ ಅಲ್ಲ ಇದು ರಾಜ್ಯದ ಸಮಸ್ತ ನ್ಯಾಯಮೂರ್ತಿಗಳ ಪಾಲಿಗೆ ಹೆಮ್ಮೆಯ ಗರಿ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT