ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಾರ್ಟ್‌ಮೆಂಟ್‌ ಸುತ್ತಲಿನ ಮರ ಕಡಿಯಲು ಹೈಕೋರ್ಟ್‌ ಅಸ್ತು

Last Updated 18 ಏಪ್ರಿಲ್ 2023, 23:00 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ಮಂತ್ರಿ ಎಲಿಗೆನ್ಸ್​ ಅಪಾರ್ಟ್​ಮೆಂಟ್​ ಸುತ್ತಲೂ ಬೆಳೆದಿರುವ ಮರಗಳು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯುವುದಕ್ಕೆ ಅಡ್ಡಿಯಾಗಿವೆ ಎಂಬ ಕಾರಣವನ್ನು ಮಾನ್ಯ ಮಾಡಿರುವ ಹೈಕೋರ್ಟ್‌, 49 ಮರಗಳನ್ನು ಕಡಿಯುವುದಕ್ಕೆ ಅವಕಾಶ ಕಲ್ಪಿಸಿದೆ.

ಈ ಸಂಬಂಧ, ‘ಮಂತ್ರಿ ಎಲಿಗೆನ್ಸ್‌​ ಅಪಾರ್ಟ್‌ಮೆಂಟ್‌​ ಮಾಲೀಕರ ಸಂಘ’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ‘ವೃಕ್ಷ ಅಧಿಕಾರಿಯ ಸಮ್ಮುಖದಲ್ಲಿ ಅಷ್ಟೇ ಗಿಡಗಳನ್ನು ನೆಡಬೇಕು’ ಎಂದು ಅರ್ಜಿದಾರರಿಗೆ ನಿರ್ದೇಶಿಸಿದೆ.

ಪ್ರಕರಣವೇನು?: ‘ಮಂತ್ರಿ ಎಲಿಗೆನ್ಸ್​ ಅಪಾರ್ಟ್​ಮೆಂಟ್ ಮಾಲೀಕರ ಸಂಘ’ವು ಅಗ್ನಿ ಸುರಕ್ಷತಾ ಪ್ರಮಾಣ ಪತ್ರದ ನವೀಕರಣ ಕೋರಿ ಗೃಹ ರಕ್ಷಕ ದಳದ ಪೊಲೀಸ್​ ಮಹಾ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಗೃಹರಕ್ಷಕ ದಳದ ಅಧಿಕಾರಿಗಳು 2021ರ ಅಕ್ಟೋಬರ್​ 5ರಂದು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪರಿಶೀಲನೆ ವೇಳೆ ಅಪಾರ್ಟ್​ಮೆಂಟ್ ಆವರಣವೂ ಸೇರಿದಂತೆ ಸುತ್ತಮುತ್ತಲಿನಲ್ಲಿ ಬೃಹತ್ತಾದ ಮರಗಳು, ಸಣ್ಣಸಣ್ಣ ಕುರುಚಲು ಗಿಡಗಂಟೆ ಬೆಳೆದಿರುವುದನ್ನು ಗಮನಿಸಿದ್ದ ಅಧಿಕಾರಿಗಳು, ‘ಕಟ್ಟಡದ ಆವರಣ ಪ್ರವೇಶಿಸಲು ವಾಹನಗಳಿಗೆ ಕಷ್ಟವಿದೆ. ಹೀಗಾಗಿ, ಅಗ್ನಿ ಸುರಕ್ಷತಾ ಪ್ರಮಾಣ ಪತ್ರದ ನವೀಕರಣ ಸಾಧ್ಯವಿಲ್ಲ’ ಎಂದು ಮನವಿಯನ್ನು ತಿರಸ್ಕರಿಸಿದ್ದರು. ಅಂತೆಯೇ, ‘ಮುಂದಿನ 15 ದಿನಗಳಲ್ಲಿ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದೇ ಹೋದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು 2022ರ ಮಾರ್ಚ್ 23ರಂದು ಎಚ್ಚರಿಕೆಯ ನೋಟಿಸ್​ ನೀಡಿದ್ದರು.

ಇದರಿಂದಾಗಿ ಅಪಾಟ್​ರ್ಮೆಂಟ್​ ಮಾಲೀಕರ ಸಂಘವು, ‘ವಾಹನಗಳ ಪ್ರವೇಶಕ್ಕೆ ಅಡ್ಡಿಯಾಗಿವೆ ಎಂದು ಗುರುತಿಸಲಾದ 49 ಮರಗಳನ್ನು, ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ– 1976ರ ಪ್ರಕಾರ ತೆರವುಗೊಳಿಸಲು ಅನುಮತಿ ನೀಡಬೇಕು’ ಎಂದು ಕೋರಿ ವಲಯ ಅರಣ್ಯ ಇಲಾಖೆಗೆ ಮನವಿ ಮಾಡಿತ್ತು. ಈ ಮನವಿಗೆ ಪ್ರತಿಕ್ರಿಯಿಸಿದ್ದ ವಲಯ ಅರಣ್ಯಾಧಿಕಾರಿಗಳು, ‘ಈ ಮರಗಳು ಯಾರ ಆಸ್ತಿ, ಪಾಸ್ತಿ ಹಾಗೂ ಜೀವಕ್ಕೆ ಹಾನಿಯುಂಟು ಮಾಡುವ ಸಂಭವವಿಲ್ಲ. ಹೀಗಾಗಿ, ಇವುಗಳನ್ನು ತೆರವುಗೊಳಿಸಲು ಅವಕಾಶ ನೀಡಲಾಗುವುದಿಲ್ಲ’ ಎಂದು ಮನವಿಯನ್ನು ತಿರಸ್ಕರಿಸಿದ್ದರು. ಈ ಕ್ರಮಗಳನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌
ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT