ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ನಲ್ಲಿ ಕನ್ನಡ ಬಳಕೆಗೆ ಆಗ್ರಹ: ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಬೆಂಗಳೂರ ನಗರದ ಯುವ ವಕೀಲರ ಹೋರಾಟ
Last Updated 3 ಅಕ್ಟೋಬರ್ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಹೈಕೋರ್ಟ್‌ನ ಎಲ್ಲ ವ್ಯವಹಾರ, ಅರ್ಜಿ ನಮೂನೆಗಳು, ವಕಾಲತ್ತು, ತೀರ್ಪು, ಕಾನೂನು ಮತ್ತು ಕಲಾಪಗಳೆಲ್ಲವೂ ಕನ್ನಡದಲ್ಲಿಯೇ ಇರಬೇಕು’ ಎಂಬ ಆಗ್ರಹದೊಂದಿಗೆ ಬೆಂಗಳೂರು ನಗರದ ಯುವ ವಕೀಲರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಅಭಿಯಾನ ರೂಪಿಸಿದ್ದಾರೆ.

ಈ ನಿಟ್ಟಿನಲ್ಲಿ ಚುರುಕುಗೊಂಡಿರುವ ಹೈಕೋರ್ಟ್‌ ಮತ್ತು ಸಿಟಿ ಸಿವಿಲ್ ಕೋರ್ಟ್‌ ವಕೀಲರು, ವಾಟ್ಸ್‌ ಆ್ಯಪ್‌ ಗ್ರೂಪ್‌, ಫೇಸ್‌ ಬುಕ್‌, ಟ್ವಿಟರ್‌ನಂತಹ ತಾಣಗಳಲ್ಲಿ ಸಣ್ಣ ಸಣ್ಣ ಕಾರ್ಯಪಡೆಗಳನ್ನು ರಚಿಸಿಕೊಂಡು ರಾಜ್ಯದಾದ್ಯಂತ ವಕೀಲರಿಗೆ ಮತ್ತು ಪ್ರಮುಖ ಸಂಘ ಸಂಸ್ಥೆಗಳಿಗೆ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

‘ಸಂವಿಧಾನದ 348 (2) ವಿಧಿಯ ಪ್ರಕಾರ ಹೈಕೋರ್ಟ್‌ಗಳಲ್ಲಿ ಮಾತ್ರ ಕಲಾಪದ ಭಾಷೆಯಾಗಿ ಮತ್ತು ಆಡಳಿತ ಭಾಷೆಯಾಗಿ ಜಾರಿಗೆ ತರಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಬೇಕು’ ಎಂದು ಒತ್ತಾಯಿಸುತ್ತಿದ್ದಾರೆ.

ಅಭಿಯಾನದ ಮುಂಚೂಣಿಯಲ್ಲಿರುವ ‘ಬನವಾಸಿ ಬಳಗ’ದ ಸದಸ್ಯ ಅರುಣ್‌ ಜಾವಗಲ್‌, ‘ಸಂವಿಧಾನದ 351ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಉತ್ತೇಜಿಸಲು ಎಲ್ಲ ರೀತಿಯ ಅವಕಾಶವನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಹಿಂದಿಯನ್ನು ಉತ್ತೇಜಿಸಲು ಮುಂದಾಗಿರುವುದು ಕಾನೂನು ಬಾಹಿರವೇನಲ್ಲ’ ಎನ್ನುತ್ತಾರೆ.

‘ಇದೇ ರೀತಿ ಒಕ್ಕೂಟದ ಇತರ ಭಾಷೆಗಳನ್ನೂ ಕೇಂದ್ರ ಉತ್ತೇಜಿಸಬೇಕು. ಅದಕ್ಕಾಗಿ ಸಂವಿಧಾನದ 341ರಿಂದ 351ರವರೆಗಿನ ವಿಧಿಗಳಿಗೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸುತ್ತಾರೆ.

‘ಹೈಕೋರ್ಟ್‌ನಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಈ ಹಿಂದೆ ಹಲವು ಪ್ರಯತ್ನ ನಡೆದಿವೆ. ಅದಕ್ಕಾಗಿ ಅಧಿಕೃತ ಬೇಡಿಕೆಯನ್ನೂ ಸಲ್ಲಿಸಲಾಗಿದ್ದು, ಅದನ್ನು ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗಳಿಗೂ ಕಳುಹಿಸಲಾಗಿದೆ. ಆದರೂ, ಈ ವಿಚಾರವಾಗಿ ಈತನಕ ಯಾವುದೇ ದೃಢ ನಿರ್ಧಾರ ಹೊರಹೊಮ್ಮಿಲ್ಲ. 2014–15ರಿಂದಲೂ ಇದನ್ನು ನನೆಗುದಿಯಲ್ಲಿ ಇರಿಸಲಾಗಿದೆ’ ಎನ್ನುತ್ತಾರೆ ವಕೀಲ ಕೆ.ಬಿ.ಕೆ ಸ್ವಾಮಿ.

ಅಭಿಯಾನಕ್ಕೆ ಒತ್ತಾಸೆಯಾಗಿ ನಿಲ್ಲಲು ಇಚ್ಛಿಸುವವರು ಸಂಪರ್ಕಿಸಬೇಕಾದ ಫೋನ್‌ ಸಂಖ್ಯೆ: 96200–04443.

ಕನ್ನಡ ಬಳಕೆಗಿಲ್ಲ ಅಧಿಕೃತ ಅವಕಾಶ

ಅಧಿಕೃತ ಭಾಷಾ ಕಾಯ್ದೆಯ ಕಲಂ 7ರ ಅನುಸಾರ ರಾಜಸ್ಥಾನ, ಮಧ್ಯಪ್ರದೇಶ, ಅಲಹಾಬಾದ್ ಮತ್ತು ಪಟ್ನಾ ಹೈಕೋರ್ಟ್‌ಗಳಲ್ಲಿ ಅಧಿಕೃತ ಭಾಷೆಯಾಗಿ ಹಿಂದಿ ಮತ್ತು ಇಂಗ್ಲಿಷ್‌ ಭಾಷೆ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಇದಕ್ಕೆ ಹೊರತಾಗಿವೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ ಭಾಷೆ ಅಧಿಕೃತವಾಗಿ ಇಂಗ್ಲಿಷ್‌ನಲ್ಲಿ ಇರತಕ್ಕದ್ದು ಎಂದು ಸಂವಿಧಾನದ 348ನೇ ವಿಧಿ ಹೇಳುತ್ತದೆ. ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಅರಳಿ ನಾಗರಾಜ್ 2008ರ ಮಾರ್ಚ್‌ 14ರಂದು, ತೆರೆದ ಕೋರ್ಟ್‌ ಕಲಾಪದಲ್ಲಿ ಕನ್ನಡದಲ್ಲೇ ಆದೇಶ ಬರೆಸಿದರು. ಇದು ಕರ್ನಾಟಕ ಹೈಕೋರ್ಟ್‌ನಲ್ಲಿ ಬರೆಸಲಾದ ಮೊದಲ ಕನ್ನಡದ ಆದೇಶ.

ದಿವಂಗತ ವಿ.ಎಸ್.ಮಳಿಮಠ ಅವರು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು.

‘ಸಾಮಾಜಿಕ ಪಿಡುಗು’

1761ರಿಂದ 1872ರವರೆಗೆ ಬಳ್ಳಾರಿ ವಿಭಾಗಾಧಿಕಾರಿಯಾಗಿದ್ದ ಸರ್ ಥಾಮಸ್‌ ಮನ್ರೊ, ಕರ್ನಾಟಕದ ಕೋರ್ಟ್‌ಗಳಲ್ಲಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯಗಳನ್ನು ‘ಸಾಮಾಜಿಕ ಪಿಡುಗು’ ಎಂದು ಕರೆದಿದ್ದರು.

‘ಇದಕ್ಕೆಲ್ಲಾ ನ್ಯಾಯಾಧೀಶರ ಅಜ್ಞಾನವೇ ಕಾರಣ ಎಂದು ಅಂದಿನ ಬ್ರಿಟಿಷ್‌ ಸರ್ಕಾರವನ್ನು ಮನ್ರೋ ಎಚ್ಚರಿಸಿದ್ದರು’ ಎಂದು ನೆನಪಿಸುತ್ತಾರೆ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ.

* ಯುವ ವಕೀಲರ ಹೋರಾಟಕ್ಕೆ ವಕೀಲರ ಸಂಘ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಿದೆ. 9ರ ಬಳಿಕ ಹಿರಿಯರ ಜತೆ ಚರ್ಚಿಸಲಾಗುವುದು

- ಎ.ಪಿ.ರಂಗನಾಥ್‌ ಅಧ್ಯಕ್ಷ, ಬೆಂಗಳೂರು ವಕೀಲರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT