ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಪೋಸ್ಟ್‌ ಮಾಸ್ಟರ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ
Last Updated 6 ಡಿಸೆಂಬರ್ 2022, 21:35 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯೋಗದಿಂದ ವಜಾಗೊಳಿಸಿರುವುದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಕ್ಕೆ ಆಧಾರವಾಗುವುದಿಲ್ಲ‘ ಎಂಬ ಅಭಿಪ್ರಾಯದೊಂದಿಗೆ 45 ವರ್ಷದ ಮಹಿಳೆಯೊಬ್ಬರು, ಇಬ್ಬರು ಪೋಸ್ಟ್‌ ಮಾಸ್ಟರ್‌ಗಳ ವಿರುದ್ಧ ದಾಖಲಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಈ ಸಂಬಂಧ ಬಸವನಗುಡಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್‌ಗಳಾದ ರಾಧಾಕೃಷ್ಣನ್‌ ಅಲಿಯಾಸ್ ಕೆ.ರಾಧಾಕೃಷ್ಣ ಮತ್ತು ಹನುಮಂತಯ್ಯ ಅಲಿಯಾಸ್ ಬಿ.ಎಂ.ಹನುಮಂತಯ್ಯ ಎಂಬುವವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ಆರೋಪಗಳನ್ನು ಸಾಬೀತುಪಡಿಸುವಂತಹ ಯಾವುದೇ ಪೂರಕ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಒದಗಿಸಿಲ್ಲ. ಹಾಗಾಗಿ, ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 354 (1)ರ ಅನ್ವಯ ಹೊರಿಸಲಾಗಿರುವ ಲೈಂಗಿಕ ಶೋಷಣೆ ಆರೋಪಗಳು ಅರ್ಜಿದಾರರಿಗೆ ಅನ್ವಯಿಸುವುದಿಲ್ಲ. ಇಂತಹ ಸ್ಥಿತಿಯಲ್ಲಿ ವಿಚಾರಣೆ ಮುಂದುವರಿಕೆ ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?

ಬಸವನಗುಡಿ ಪೊಲೀಸ್ ಠಾಣೆಯಲ್ಲಿ2018ರ ಮೇ 16ರಂದು ಫಿರ್ಯಾದು ದಾಖಲಿಸಿದ್ದ ಮಹಿಳೆ,‘ನನ್ನ ತಾಯಿ ಬಸವನಗುಡಿ ಅಂಚೆ ಕಚೇರಿಯಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದರು. ಅವರು ಅನಾರೋಗ್ಯಕ್ಕೆ ಈಡಾಗಿದ್ದ ಸಂದರ್ಭದಲ್ಲಿ ನಾನೇ ಅಂಚೆ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ರಾಧಾಕೃಷ್ಣ ಮತ್ತು ಹನುಮಂತಯ್ಯ, ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾ ದರೆ ತೆಗೆದು ಹಾಕುತ್ತೇನೆ ಎಂಬ ಬೆದರಿಕೆ ಹಾಕುತ್ತಿದ್ದರು’ ಎಂದು ದೂರು ನೀಡಿದ್ದರು.

‘ನಾನು ಕ್ಷಮೆ ಕೇಳಿದ್ದರೂ ಬೆದರಿಕೆ ಮುಂದುವರಿಸಿದ್ದರು. ಇದರಿಂದ ಆತ್ಮಹತ್ಯೆಗೆ ಯತ್ನಿಸಿದ್ದೆ. ಅಷ್ಟೇ ಅಲ್ಲ, ಹನುಮಂತಯ್ಯ ನನ್ನೊಂದಿಗೆ ಲೈಂಗಿಕ ಬಯಕೆ ವ್ಯಕ್ತಪಡಿಸಿದ್ದರು. ಅದನ್ನು ತಿರಸ್ಕರಿಸಿದ್ದೆ. ಅದೊಂದು ದಿನ ರಾಧಾಕೃಷ್ಣ ನನ್ನನ್ನು ಕಾರಿನಲ್ಲಿ 8ನೇ ಮೈಲಿ ಬಳಿಯ ಉದ್ಯಾನವೊಂದಕ್ಕೆ ಕರೆದೊಯ್ದು, ಬಲವಂತದ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದರು. ಆಗ ಯಾರೊ ಬಂದು ರಾಧಾಕೃಷ್ಣ ಅವರನ್ನು ಹಿಡಿದರು. ತಕ್ಷಣವೇ ನಾನು ಅಲ್ಲಿಂದ ಹೊರಟು ಬಂದಿದ್ದೆ‘ ಎಂದು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ರಾಧಾಕೃಷ್ಣ ಮತ್ತು ಹನುಮಂತಯ್ಯ ವಿರುದ್ಧ 37ನೇ ಎಸಿಎಂಎಂ ನ್ಯಾಯಾಲಯಕ್ಕೆದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಎಸ್‌.ಆರ್‌.ರಾಜೇಶ್‌ ವಕಾಲತ್ತು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT