ಇನ್ನೂ ಆಗದ ಪುನರ್ವಸತಿ: ಕೊಳಚೆ ನಿರ್ಮೂಲನಾ ಮಂಡಳಿ ವಿರುದ್ಧ ಗುಡುಗಿದ ಹೈಕೋರ್ಟ್‌

7

ಇನ್ನೂ ಆಗದ ಪುನರ್ವಸತಿ: ಕೊಳಚೆ ನಿರ್ಮೂಲನಾ ಮಂಡಳಿ ವಿರುದ್ಧ ಗುಡುಗಿದ ಹೈಕೋರ್ಟ್‌

Published:
Updated:

ಬೆಂಗಳೂರು: ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯ ಸರ್ವೇ ನಂಬರ್ 90ರಲ್ಲಿನ ನಿವಾಸಿಗಳಿಗೆ ಇನ್ನೂ ಪುನರ್ವಸತಿ ಕಲ್ಪಿಸದಿರುವ ಕೊಳಚೆ ನಿರ್ಮೂಲನಾ ಮಂಡಳಿ ಕ್ರಮಕ್ಕೆ ಹೈಕೋರ್ಟ್ ಕಿಡಿ ಕಾರಿದೆ.

‘ಅಭಯ’ ಹೆಸರಿನ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೊಳಚೆ ನಿರ್ಮೂಲನಾ ಮಂಡಳಿ ಪರ ವಕೀಲ ಶ್ರೀಕಾಂತ್ ಪಾರ್ಥಸಾರಥಿ, "ತಾತ್ಕಾಲಿಕ ನಿವೇಶನ ನೀಡಲು ಗುರುತಿಸಿರುವ ಜಾಗದಲ್ಲಿ ಒಳಚರಂಡಿ ಪೈಪ್‌ಗಳು ಇರುವುದರಿಂದ ಬೇರೊಂದು ಕಡೆ ವ್ಯವಸ್ಥೆ ಮಾಡಲಾಗುವುದು" ಎಂದು ತಿಳಿಸಿದರು.

ಇದಕ್ಕೆ ಕುಪಿತರಾದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ‘ಇದೊಂದು ಮಾನವೀಯತೆಯ ನೆಲೆಗಟ್ಟಿನಲ್ಲಿ ತಕ್ಷಣಕ್ಕೆ ಕ್ರಮ ಕೈಗೊಳ್ಳಬೇಕಿರುವ ಪ್ರಕರಣ. ಆದರೆ, ನೀವು ಕೋರ್ಟ್ ಆದೇಶವಿದ್ದರೂ ಆಶ್ರಯ ಕಲ್ಪಿಸಲು ಸಮಸ್ಯೆ ಇದೆ ಎಂಬ ಅಂಶವನ್ನು ಕೋರ್ಟ್ ಗಮನಕ್ಕೆ ತಾರದೆ ಅಸಡ್ಡೆ ತೋರಿದ್ದೀರಿ. ಇಷ್ಟು ದಿನ ನೀವು ಏಕೆ ಸುಮ್ಮನಿದ್ದಿರಿ. ಕೋರ್ಟ್ ಗಮನಕ್ಕೆ ಈ ವಿಷಯವನ್ನು ತರದೇ ಹೋದದ್ದಕ್ಕೆ ಕಾರಣವೇನು? ನಿಮ್ಮದು ಅತಿಯಾಯಿತು. ಅಧಿಕಾರಿಗಳು ಆಟವಾಡುತ್ತಿದ್ದಾರೆಯೇ? ನಾನು ನಾಳೆಯೇ ನಿಮ್ಮ ಕಮಿಷನರ್ ಅವರನ್ನು ಕರೆಸುತ್ತೇನೆ. ಇಂಥ ಸಬೂಬುಗಳನ್ನು ಒಪ್ಪಲು ಸಾಧ್ಯವಿಲ್ಲ. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಭುವನೇಶ್ವರಿ ನಗರದಲ್ಲಿ ಅರ್ಜಿದಾರರಿಗೆ ಸೂರು ಕಲ್ಪಿಸಲಾಗುವುದು ಎಂದು ನೀವೇ ಹೇಳಿದದ್ದಿರಿ. ಈ ಹೇಳಿಕೆಯನ್ನಾಧರಿಸಿಯೇ ಕೋರ್ಟ್ ಆದೇಶ ಮಾಡಿದೆ. ಆದರೆ, ಈ ಹಂತದಲ್ಲಿ ನೀವು ಈ ರೀತಿಯ ಹೇಳಿಕೆ ನೀಡುವುದು ಸಮಂಜಸವಲ್ಲ. ಹೀಗಿದ್ದರೆ, ಆ ದಿನ ಭುವನೇಶ್ವರಿ ನಗರದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಏಕೆ ಹೇಳಿಕೆ ಕೊಟ್ಟಿರಿ? ಏನೇ ಆಗಲಿ ನಾಳೆಯೊಳಗೆ ನೀವು ಅವರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿ ಕೋರ್ಟ್‌ಗೆ ತಿಳಿಸಬೇಕು’ ಎಂದು ಆದೇಶಿಸಿ ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !