ಭಾನುವಾರ, ಸೆಪ್ಟೆಂಬರ್ 20, 2020
21 °C

ಜನಪ್ರತಿನಿಧಿಗಳಿಗೆ ವೆಚ್ಚ ಕಡಿತಕೋರಿದ ಪಿಐಎಲ್‌ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವೈದ್ಯಕೀಯ ಭತ್ಯೆ ಹಾಗೂ ದೂರವಾಣಿ ಕರೆಗಳ ವೆಚ್ಚ ಭರ್ತಿಗೆ ಜನಪ್ರತಿನಿಧಿಗಳಿಗೆ ನೀಡಲಾಗುವ ಕೋಟ್ಯಂತರ ಮೊತ್ತದಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸಲು ಪರ್ಯಾಯ ವಿಧಾನ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಈ ಕುರಿತಂತೆ ನಗರದ ವಕೀಲ ಕೆ.ಬಿ. ವಿಜಯಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಜಾ ಮಾಡಿದೆ.

‘ಈ ಅರ್ಜಿಯು, ಕರ್ನಾಟಕ ಶಾಸಕಾಂಗ, ವೇತನ, ಪಿಂಚಣಿ ಮತ್ತು ಭತ್ಯೆ ಕಾಯ್ದೆ–1956ರ ಕಲಂ 12ಕ್ಕೆ ವಿರುದ್ಧವಾಗಿದೆ’ ಎಂದು ನ್ಯಾಯಪೀಠ ವಜಾಕ್ಕೆ ಕಾರಣ ನೀಡಿದೆ.

ಕೋರಿಕೆ ಏನು?: ‘ಇಂದಿನ ದಿನಮಾನಗಳಲ್ಲಿ ಅತ್ಯಂತ ಕಡಿಮೆ ದರದ ದೂರವಾಣಿ ಸೇವೆ ಲಭ್ಯವಿದ್ದು ಇದರ ಪ್ರಯೋಜನ ಜನಪ್ರತಿನಿಧಿಗಳೂ ಅಳವಡಿಸಿಕೊಳ್ಳುವಂತಾಗಬೇಕು’ ಎಂದು ಅರ್ಜಿದಾರರು ಕೋರಿದ್ದರು.

‘ವಿಧಾನಸಭಾ ಸದಸ್ಯರು ಹಾಗೂ ವಿಧಾನ ಪರಿಷತ್‌ ಸದಸ್ಯರ ಸ್ಥಿರ ದೂರವಾಣಿ ಹಾಗೂ ಮೊಬೈಲ್ ಬಳಕೆ ವೆಚ್ಚವಾಗಿ ಪ್ರತಿ ಶಾಸಕರಿಗೆ ಮಾಸಿಕ ₹ 20 ಸಾವಿರ ನೀಡಲಾಗುತ್ತಿದೆ. 75 ಪರಿಷತ್‌ ಮತ್ತು 225 ವಿಧಾನಸಭಾ ಸದಸ್ಯರಿಗೆ ನೀಡುವ ಇದರ ವಾರ್ಷಿಕ ಮೊತ್ತ ₹ 7.20 ಕೋಟಿಯಷ್ಟಿದೆ’ ಎಂದು ವಿವರಿಸಿದ್ದರು.

‘ಮಾಜಿ ಹಾಗೂ ಹಾಲಿ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಇದರ ವೆಚ್ಚಕ್ಕೆ ಯಾವುದೇ ಮಿತಿ ಇಲ್ಲ. ಸರ್ಕಾರಿ ಹಾಗೂ ಖಾಸಗಿ ವಿಮಾ ಸಂಸ್ಥೆಗಳಲ್ಲಿ ಕಡಿಮೆ ದರಕ್ಕೆ ₹ 1 ಕೋಟಿ ಮೊತ್ತದವರೆಗೆ ವೈದ್ಯಕೀಯ ಸೇವೆ ಲಭ್ಯವಾಗುತ್ತಿದೆ. ಹೀಗಾಗಿ ಪ್ರತಿ ಸದಸ್ಯರಿಗೂ ಸರ್ಕಾರದ ವತಿಯಿಂದಲೇ ಆರೋಗ್ಯ ವಿಮೆ ವಿತರಿಸಲು ನಿರ್ದೇಶಿಸಬೇಕು’ ಎಂದೂ ಮನವಿ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು