ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಾಮುಚ್ಚಾಲೆ ಆಡುತ್ತೀರಾ: ಬಿಬಿಎಂಪಿಗೆ ಹೈಕೋರ್ಟ್‌ ತರಾಟೆ

Last Updated 8 ಜನವರಿ 2020, 20:28 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆ.ಆರ್‌. ಮಾರುಕಟ್ಟೆಯಲ್ಲಿ ನಿರ್ಮಿಸಲಾಗಿರುವ ಅಕ್ರಮ ಮಳಿಗೆ ತೆರವುಗೊಳಿಸಿ, ಅಗ್ನಿ ಶಾಮಕ ಸುರಕ್ಷತೆಗೆ ಸಂಬಂಧಿಸಿದಂತೆ, ಈ ಹಿಂದೆ ನೀಡಿದ್ದ ಆದೇಶ ಪಾಲನೆ ಮಾಡಿಲ್ಲ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಈ ಸಂಬಂಧ ಕೆ.ಆರ್. ಮಾರುಕಟ್ಟೆ ಹೂವಿನ ವರ್ತಕರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಮಳಿಗೆ ಕಟ್ಟಲು ಪಾಲಿಕೆ ನೀಡಿದ್ದ ಅನುಮೋದನೆಯ ನಕ್ಷೆ ಕಳೆದುಹೋಗಿದೆ. 2016ರ ನಂತರ ಮೂಲ ನಕ್ಷೆಯನ್ನು ಹುಡುಕುವ ಪ್ರಯತ್ನ ಜಾರಿಯಲ್ಲಿದೆ’ ಎಂದು ತಿಳಿಸಿದರು.

ಈ ಮಾತಿಗೆ ಆಶ್ಚರ್ಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು,‘1995ರ ಸುಮಾರಿನಲ್ಲಿ ನಿರ್ಮಿಸಿದ ಕಟ್ಟಡಕ್ಕೆ ನಿಮ್ಮ ಬಳಿ ನಕ್ಷೆ ಇಲ್ಲವೆಂದರೆ ಏನರ್ಥ, 2013ರಲ್ಲಿ ಇದ್ದ ನಕ್ಷೆ 2016ರಲ್ಲಿ ಹೇಗೆ ಕಳೆದು ಹೋಯಿತು, ಬಹಳಷ್ಟು ಪ್ರಕರಣಗಳಲ್ಲಿ ಪಾಲಿಕೆ ಇಂತಹುದೇ ಉತ್ತರ ಕೊಡುವುದು ಕೋರ್ಟ್‌ ಗಮನಕ್ಕೆ ಬಂದಿದೆ. ನೀವು ಕಣ್ಣಾಮುಚ್ಚಾಲೆ ಆಡುತ್ತಿದ್ದೀರಿ’ ಎಂದು ಕಿಡಿ ಕಾರಿದರು.

‘ನೀವು ಕೋರ್ಟ್‌ನ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಿ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರೆ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದೀರಿ. ಮಾರುಕಟ್ಟೆಯ ಒಳಗೆ ಏನಾದರೂ ಅವಘಡ ಸಂಭವಿಸಿದರೆ ಸಾರ್ವಜನಿಕರು ತಮ್ಮ ಜೀವದ ರಕ್ಷಣೆಗೆ ತಾವೆ ಹೊಣೆ ಹೊತ್ತುಕೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದು ಕಿಡಿ ಕಾರಿದರು.

‘ಅಗ್ನಿ ಶಾಮಕ ದಳ ಪಟ್ಟಿ ಮಾಡಿರುವ ದೋಷಗಳನ್ನು ಸರಿಪಡಿಸಲು ಟೆಂಡರ್ ಕರೆಯಲಾಗಿದೆ’ ಎಂಬ ಪಾಲಿಕೆ ಪರ ವಕೀಲರ ಮಾತಿಗೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ಅಕ್ರಮ ಅಂಗಡಿ ತೆರವಿಗೆ ಟೆಂಡರ್ ಕರೆಯಲಾಗಿದೆಯೇ, ಪೊಲೀಸರ ನೆರವು ಪಡೆದು ಏಕೆ ತೆರವುಗೊಳಿಸಿ. ನೀವು ಇದೇ ವರ್ತನೆ ಪ್ರದರ್ಶಿಸಿದರೆ, ಅಗ್ನಿ ಅಪಾಯದ ಮುನ್ಸೂಚನೆ ನೀಡುವ ಫಲಕ ಅಳವಡಿಸುವಂತೆ ಆದೇಶ ನೀಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಈ ಹಿಂದೆ ಹೈಕೋರ್ಟ್‌ ನೀಡಿರುವ ಆದೇಶಗಳ ಪಾಲನೆ ಬಗ್ಗೆ ಇದೇ 30ರೊಳಗೆ ಪಾಲಿಕೆ ಆಯುಕ್ತರು ಖುದ್ದು ಪ್ರಮಾಣ ಪತ್ರ ಸಲ್ಲಿಸಬೇಕು. ಮಾರುಕಟ್ಟೆಯಲ್ಲಿನ ಅಗ್ನಿ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಅಗ್ನಿ ಶಾಮಕ ದಳ ಪಟ್ಟಿ ಮಾಡಿರುವ ದೋಷಗಳು ಹಾಗೂ ಅವುಗಳನ್ನು ಸರಿಪಡಿಸಲು ಕೈಗೊಂಡ ಸುಧಾರಣಾ ಕ್ರಮಗಳನ್ನು ವಿವರಿಸಬೇಕು’ ಎಂದು ಆದೇಶಿಸಿತು.

ಅರ್ಜಿದಾರರ ದೂರು ಏನು?: ‘ಮಾರುಕಟ್ಟೆಗೆ ಪ್ರತಿದಿನ ಕನಿಷ್ಠ 50 ಸಾವಿರದಿಂದ ಒಂದು ಲಕ್ಷ ಜನ ಭೇಟಿ ನೀಡುತ್ತಾರೆ. ಹಬ್ಬ ಹರಿದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಖರೀದಿಗೆ ಮುಗಿಬೀಳುತ್ತಾರೆ. ಆದರೆ, ಮಾರುಕಟ್ಟೆಯ ಮೊದಲ ಅಂತಸ್ತಿನಲ್ಲಿ 53 ಹಾಗೂ ಮೇಲು ಭಾಗದಲ್ಲಿ 24 ಅಕ್ರಮ ಮಳಿಗೆಗಳಿವೆ. 2000ದಿಂದ 2007ರವರೆಗೆ ಇಲ್ಲಿ 95 ಅಗ್ನಿ ಅವಘಡ ಸಂಭವಿಸಿವೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅರ್ಜಿದಾರರ ಪರ ವಕೀಲ ರಹಮತ್‌ ಉಲ್ಲಾ ಕೊತ್ವಾಲ್‌ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT