ಸೋಮವಾರ, ಫೆಬ್ರವರಿ 24, 2020
19 °C

ಟ್ರಾಫಿಕ್‌ ಪೊಲೀಸರಿಗೆ ಹೈಟೆಕ್‌ ಚೌಕಿ

ಗವಿಬ್ಯಾಳಿ Updated:

ಅಕ್ಷರ ಗಾತ್ರ : | |

Prajavani

ಮಳೆ, ಬಿಸಿಲು ಮತ್ತು ದೂಳಿನಿಂದ ಬೇಸತ್ತಿದ್ದ ಟ್ರಾಫಿಕ್‌ ಪೊಲೀಸರಿಗೆ ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಕಲ್ಪಿಸಲಾಗುತ್ತಿದೆ. ಬಿಬಿಎಂಪಿ ವತಿಯಿಂದ ನಗರದ ಕೆಲವೆಡೆ ಹೈಟೆಕ್‌ ಪೊಲೀಸ್‌ ಚೌಕಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

ವಾಹನಗಳ ದಟ್ಟವಾದ ಹೊಗೆ, ಶಬ್ದ, ನೆತ್ತಿ ಸುಡುವ ಬಿಸಿಲು, ಬೆವರು ಮತ್ತು ಮಾಲಿನ್ಯಗಳಿಂದ ಬೆಂಗಳೂರು ಟ್ರಾಫಿಕ್‌ ಪೊಲೀಸರು ಇನ್ನು ಮುಂದೆ ಪರಿತಪಿಸಬೇಕಿಲ್ಲ. ಅವರಿಗಾಗಿಯೇ ನಗರದಲ್ಲಿ ಹವಾನಿಯಂತ್ರಿತ ಹೈಟೆಕ್‌ ಚೌಕಿಗಳು ಸಜ್ಜಾಗಿವೆ!

ನಗರದ ಪ್ರಮುಖ ವೃತ್ತಗಳಲ್ಲಿ ಗುಬ್ಬಿ ಗೂಡಿನಂತಿದ್ದ ಕಬ್ಬಿಣ ಮತ್ತು ಸಿಮೆಂಟ್‌ನ ಹಳೆಯ ಚೌಕಿಗಳ ಜಾಗದಲ್ಲಿ ಈ ಟ್ರಾಫಿಕ್‌ ಅಂಬ್ರೆಲ್ಲಾಗಳು ತಲೆ ಎತ್ತಲಿವೆ.

ಪ್ರಥಮ ಹಂತದಲ್ಲಿ ನಗರದ 17 ಕಡೆ ಚೌಕಿಗಳನ್ನು ಅಳವಡಿಸುವ ಕೆಲಸ ಭರದಿಂದ ಸಾಗಿದೆ. 

ರೆಡಿಮೇಡ್‌ ಕ್ಯೂಬಿಕಲ್‌ ಚೌಕಿಗಳಲ್ಲಿ ಸಂಚಾರ ಪೊಲೀಸರಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬೆಂಕಿ ನಂದಿಸುವ ಉಪಕರಣ, ಫ್ಯಾನ್, ವಾಕಿಟಾಕಿ, ಧ್ವನಿವರ್ಧಕ, ಗಾಳಿ ಶುದ್ಧೀಕರಿಸುವ ಯಂತ್ರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಇದಲ್ಲದೆ ಕುರ್ಚಿ, ಟೇಬಲ್‌, ಎಕ್ಸಾಸ್ಟ್‌ ಫ್ಯಾನ್‌, ಸಾರ್ವಜನಿಕರ ಕುಂದು–ಕೊರತೆ ಪರಿಶೀಲನಾ ಬಾಕ್ಸ್‌, ಕುಡಿಯುವ ನೀರಿನ ಬಾಟಲ್, ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಎಲ್‌ಇಡಿ ಸ್ಕ್ರೀನ್‌, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಬಯೋಮೆಟ್ರಿಕ್‌ ಬಾಗಿಲು ಅಳವಡಿಸಲಾಗಿದ್ದು, ಪೊಲೀಸ್‌ ಸಿಬ್ಬಂದಿ ಮಾತ್ರ ಬಾಗಿಲು ತೆರೆಯಬಹುದು. ಪುಟ್ಟ ಚೌಕಿಯಲ್ಲಿ ಇಬ್ಬರು ಪೊಲೀಸರು ಕುಳಿತುಕೊಳ್ಳುವಷ್ಟು ಜಾಗ ಕಲ್ಪಿಸಲಾಗಿದೆ. 

ನಾಲ್ಕು ಕಡೆಯ ರಸ್ತೆಗಳಲ್ಲಿ ವಾಹನ ಸಂಚಾರದ ಮೇಲೆ ಕಣ್ಣಿಡಲು ಅನುಕೂಲವಾಗುವಂತೆ ವೃತ್ತಾಕಾರದಲ್ಲಿ (360 ಡಿಗ್ರಿ) ಗಾಜಿನ ಚೌಕಿಗಳನ್ನು ವಿನ್ಯಾಸ ಮಾಡಲಾಗಿದೆ.

ಅತ್ಯುತ್ತಮ ಗುಣಮಟ್ಟದ ಬೃಹತ್‌ ಗಾಜನ್ನು ಅಳವಡಿಸಲಾಗಿದೆ. ಕಲ್ಲು ಬಡಿದರೂ ಈ ಗಾಜು ತುಂಡಾಗದು. 30 ವರ್ಷ ಚೌಕಿಯ ನಿರ್ವಹಣೆಯ ತಲೆನೋವು ಇಲ್ಲ ಎನ್ನುತ್ತಾರೆ ಸೈನ್‌ಪೋಸ್ಟ್‌ ಸಿಬ್ಬಂದಿ ಕೆಂಪರಾಜು.

ಒಂದು ಚೌಕಿಗೆ ಅಂದಾಜು ₹7.52 ಲಕ್ಷ ಖರ್ಚಾಗಲಿದೆ. ಚೌಕಿಯ ಮುಂದೆ 15 ಚದರ ಮೀಟರ್‌ ಡಿಜಿಟಲ್‌ ಬೋರ್ಡ್‌ ಅಳವಡಿಸಲಾಗಿದ್ದು ಅದರಲ್ಲಿ ಜಾಹೀರಾತು ಪ್ರಕಟಿಸಲಾಗುವುದು.

ಹೈಟೆಕ್‌ ಚೌಕಿಯ ಬಗ್ಗೆ ನಗರದ ಸಂಚಾರ ಪೊಲೀಸರು ಹರ್ಷ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಮತ್ತು ಸಂಚಾರ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ನಗರದ ಎಲ್ಲ ಪ್ರಮುಖ ಸ್ಥಳ, ವೃತ್ತಗಳಲ್ಲೂ ಇಂತಹ ಚೌಕಿಗಳನ್ನು ಅಳವಡಿಸುವಂತೆ ಮನವಿ ಮಾಡಿದ್ದಾರೆ.

‘ದೇರ್‌ ಸೇ ಆಯಾ, ದುರಸ್ತ್‌ ಆಯಾ’

ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಟ್ರಾಫಿಕ್‌ ಅಂಬ್ರೆಲ್ಲಾ (ಚೌಕಿ) ನಿರ್ಮಿಸಲು ಬಿಬಿಎಂಪಿ 2018ರಲ್ಲಿ ಟೆಂಡರ್‌ ಕರೆದು, ಸೈನ್‌ಪೋಸ್ಟ್‌ ಎಂಬ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿತ್ತು. 

ಸಂಚಾರ ಪೊಲೀಸ್‌ ಇಲಾಖೆಯ ಶಿಫಾರಸು ಅಳವಡಿಸಿಕೊಂಡು ಜನಾಗ್ರಹ ಸಂಸ್ಥೆ ಸಿದ್ಧಪಡಿಸಿದ್ದ ಮಾದರಿ ಚೌಕಿಗಳ ವಿನ್ಯಾಸವನ್ನು ಬಿಬಿಎಂಪಿ ಅಂತಿಮಗೊಳಿಸಿತ್ತು. ಎರಡು ವರ್ಷಗಳ ಹಿಂದೆಯೇ ಚೌಕಿ ನಿರ್ಮಾಣ ಕಾರ್ಯ ಆರಂಭವಾಗಬೇಕಿತ್ತು. ವಿಳಂಬವಾದರೂ ಕೆಲಸ ಚುರುಕಿನಿಂದ ಆರಂಭವಾಗಿದೆ.

ಅವರು ಹೀಗಂದ್ರು...

ಈಗಾಗಲೇ 17 ವೃತ್ತಗಳಲ್ಲಿ ಪೊಲೀಸ್‌ ಚೌಕಿ ಅಳವಡಿಸಲಾಗಿದೆ. ಇನ್ನುಳಿದ ಚೌಕಿಗಳಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಭರದಿಂದ ಸಾಗಿದೆ. ಸದ್ಯದಲ್ಲಿಯೇ ಉದ್ಘಾಟನಾ ಸಮಾರಂಭ ಕೂಡ ನಡೆಯಲಿದೆ. ನಂತರ ಉಳಿದ ಚೌಕಿ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಹೇಳಿದರು.

ನಗರದ ಒಟ್ಟು 400 ಪ್ರಮುಖ ಸ್ಥಳ ಮತ್ತು ವೃತ್ತಗಳಲ್ಲಿ ಹೊಸ ಚೌಕಿಗಳನ್ನು ನಿರ್ಮಿಸುವ ಯೋಜನೆ ಇದೆ. ಮೊದಲ ಹಂತದಲ್ಲಿ 50 ಕಡೆ ನಿರ್ಮಿಸಲಾಗುತ್ತಿದೆ. ಪೊಲೀಸ್‌ ಇಲಾಖೆ ಬಯಸಿದರೆ ಇನ್ನಷ್ಟು ಸ್ಥಳಗಳಲ್ಲಿ ಇಂತಹ ಚೌಕಿ ನಿರ್ಮಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಎಸ್‌. ಸೋಮಶೇಖರ್‌ ಹೇಳಿದರು.

ಮಳೆ, ಗಾಳಿ, ಬಿಸಿಲು, ವಾಹನಗಳಿಂದ ಹೊರಹೊಮ್ಮುವ ದಟ್ಟವಾದ ಹೊಗೆ, ದೂಳಿನಿಂದ ಕೊನೆಗೂ ನಮಗೆ ಮುಕ್ತಿ ಸಿಕ್ಕಂತಾಗಿದೆ ಎಂದು ಟ್ರಾಫಿಕ್ ಪೊಲೀಸ್ ಚನ್ನೇಗೌಡ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು