ಶನಿವಾರ, ಜೂನ್ 25, 2022
21 °C

ಸದ್ಯವೇ ಬಿಎಂಟಿಸಿ ಬಸ್‌ ದರ ಏರಿಕೆ ಸಾಧ್ಯತೆ; ಸಿಎಂ ಒಪ್ಪಿದರಷ್ಟೇ ಹೆಚ್ಚಳ–ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಗೆ ನಿರ್ವಾಹಕ ಟಿಕೆಟ್‌ ವಿತರಿಸುತ್ತಿರುವುದು–ಸಾಂದರ್ಭಿಕ ಚಿತ್ರ

ಬೆಂಗಳೂರು: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಎಂಟಿಸಿ ಬಸ್‌ ಪ್ರಯಾಣ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ.

ಇದಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿಯವರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಎಂಟಿಸಿ ಶೇ 18 ರಿಂದ ಶೇ 20 ರಷ್ಟು ಏರಿಕೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ. ಆ ಪ್ರಮಾಣದಲ್ಲಿ ಮಾಡಿ ಪ್ರಯಾಣಿಕರ ಮೇಲೆ ಹೊರೆ ಹಾಕುವುದಿಲ್ಲ. ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದರೆ ಅಧಿವೇಶನದ ಸಂದರ್ಭದಲ್ಲಿ ಏರಿಕೆ ಮಾಡಲಾಗುವುದು ಎಂದರು.

ಇತರ ಮೂರು ನಿಗಮಗಳ ಪ್ರಯಾಣ ದರ ಏರಿಕೆ ಕಳೆದ ವರ್ಷವೇ ಮಾಡಿದ್ದರಿಂದ ಈ ವರ್ಷ ಪ್ರಸ್ತಾವನೆ ಸಲ್ಲಿಸಿಲ್ಲ. ಹೀಗಾಗಿ ಆ ಮೂರು ಸಂಸ್ಥೆಗಳ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದೂ ಸವದಿ ಹೇಳಿದರು.

ವಿದ್ಯಾರ್ಥಿಗಳ ರಿಯಾಯ್ತಿ ಬಸ್‌ಪಾಸ್‌ಗಳನ್ನಿ ಸೇವಾ ಸಿಂಧು ಮೂಲಕವೇ ಇನ್ನೂ ಒಂದು ವರ್ಷ ವಿತರಿಸಲಾಗುವುದು. ಹೊಸ ಪದ್ಧತಿ ಜಾರಿಯಲ್ಲಿ ಕೆಲವು ತಾಂತ್ರಿಕ ತೊಂದರೆ ಆಗಿದೆ ಎಂದರು.

ಸಾರಿಗೆ ಸಂಸ್ಥೆ ನೌಕರರ 6 ಬೇಡಿಕೆ ಈಡೇರಿಕೆ:

ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ ಸಂದರ್ಭದಲ್ಲಿ 10 ಬೇಡಿಕೆಗಳ ಪೈಕಿ 9 ಕ್ಕೆ ಒಪ್ಪಿಕೊಂಡಿದ್ದೆವು. ಅದರಲ್ಲಿ 6 ಈಡೇರಿಸಲಾಗಿದೆ. ಉಳಿದ ಮೂರು ಈಡೇರಿಕೆ ಹಂತದಲ್ಲಿದೆ ಎಂದು ಅವರು ಹೇಳಿದರು.

ಜೀವ ವಿಮೆ ಅಳವಡಿಕೆ, ಕೋವಿಡ್‌ ಕರ್ತವ್ಯದಲ್ಲಿ ಮೃತಪಟ್ಟವರಿಗೆ ₹30 ಲಕ್ಷ ಪರಿಹಾರ ನೀಡುವ ವಿಚಾರದಲ್ಲಿ ನಾಳೆ(ಶುಕ್ರವಾರ) ಮುಖ್ಯಮಂತ್ರಿಯವರು ಸಾಂಕೇತಿಕವಾಗಿ ಕೆಲವು ಕುಟುಂಬಗಳಿಗೆ ಪರಿಹಾರದ ಚೆಕ್‌ ನೀಡಲಿದ್ದಾರೆ. ಉಳಿದವರಿಗೆ 15 ದಿನಗಳಲ್ಲಿ ತಲುಪಿಸಲಾಗುವುದು. ಒಟ್ಟು 112 ಜನ ಕೋವಿಡ್ ಕರ್ತವ್ಯದ ಸಂದರ್ಭದಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವುದನ್ನು ಗುರುತಿಸಲಾಗಿದೆ. ಈ ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ ನೀಡಲಾಗುವುದು ಎಂದರು.

ಬಸ್‌ ಕಂಡಕ್ಟರ್‌ಗಳು ಹಣವನ್ನು ಪಡೆಯದೇ ಟಿಕೆಟ್‌ ನೀಡದೇ ಇರುವ ಪ್ರಕರಣಗಳಲ್ಲಿ ದಂಡ ವಿಧಿಸದೇ ಇರಲು ತೀರ್ಮಾನ, ಘಟಕಗಳಲ್ಲಿ ನೌಕರರಿಗೆ ಅನಗತ್ಯ ಕಿರುಕುಳ ನಿಲ್ಲಿಸಲು ಕ್ರಮ, ಈ ಹಿಂದೆ ಕೊಡುತ್ತಿದ್ದಂತೆ ಭತ್ಯೆ ನೀಡಲು ಆರಂಭಿಸಲಾಗಿದೆ. ತರಬೇತಿ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಸಬೇಕೆಂಬ ಬೇಡಿಕೆ ಜಾರಿ ಆಗುತ್ತದೆ ಎಂದು ಹೇಳಿದರು.

6ನೇ ವೇತನ ಆಯೋಗದ ಶಿಫಾರಸುಗಳು ಸಾರಿಗೆ ಸಂಸ್ಥೆ ನೌಕರರಿಗೆ ಅನ್ವಯಗೊಳಿಸುವ ಬಗ್ಗೆ ಇನ್ನೂ ಎರಡು– ಮೂರು ಸಭೆಗಳು ಆಗಬೇಕಿದೆ. ಈಗಾಗಲೇ ಕೆಲವು ಸುತ್ತುಗಳ ಸಭೆ ಆಗಿದೆ. ಅಂತರ್‌ ನಿಗಮ ವರ್ಗಾವಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಎಷ್ಟು ಪ್ರತಿಶತ ಮಾಡಬೇಕು, ಇದರಿಂದ ಸಂಸ್ಥೆಗೆ ಎಷ್ಟು ಹೊರೆ ಆಗುತ್ತದೆ ಎಂಬುದರ ಲೆಕ್ಕಾಚಾರ ನಡೆದಿದೆ. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಲಾಗಿದೆ ಎಂದು ಸವದಿ ಹೇಳಿದರು.

ಕೋಡಿಹಳ್ಳಿಗೆ ಏನು ಸಂಬಂಧ:

ಸಾರಿಗೆ ಸಂಸ್ಥೆ ಒಂದು ಕುಟುಂಬ ಇದ್ದಂತೆ. ನೌಕರರಿಗೆ ಏನೇ ಸಮಸ್ಯೆ, ಬೇಡಿಕೆ ಇದ್ದರೂ .ನನ್ನ ಬಳಿ ನೇರ ಬಂದು ಹೇಳಿಕೊಳ್ಳಬಹುದು. ಕೋಡಿಹಳ್ಳಿ ಚಂದ್ರಶೇಖರ್‌ಗೂ ಸಾರಿಗೆ ಸಂಸ್ಥೆಗೂ ಏನು ಸಂಬಂಧ? ರೈತ ಸಂಘಟನೆಗಳು ಇದರಲ್ಲಿ ಮೂಗು ತೂರಿಸಬಾರದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು