ಬುಧವಾರ, ಜೂನ್ 23, 2021
22 °C
ಮನೆಯಲ್ಲೇ ಪ್ರತ್ಯೇಕವಾಸ– ಹೊಸ ನಿಯಮ ಜಾರಿ– * ನಿಗಾ ಇಡಲಿದೆ ಸಂಚಾರಿ ದಳ

ಮನೆ ಬಾಗಿಲಿನ ಮೇಲೆ ಭಿತ್ತಿಪತ್ರ: ನಿಯಮ ಉಲ್ಲಂಘನೆಗೆ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌–19 ನಿಯಂತ್ರಣದ ಸಲುವಾಗಿ ಮನೆಯಲ್ಲೇ ಪ್ರತ್ಯೇಕವಾಸ (ಕ್ವಾರಂಟೈನ್‌) ಅನುಭವಿಸುವವರು ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುವ ಸಲುವಾಗಿ ಮಾದರಿ ಕಾರ್ಯವಿಧಾನವನ್ನು (ಎಸ್‌ಒಪಿ) ಸರ್ಕಾರ ಪರಿಷ್ಕರಿಸಿದೆ. ಭಾನುವಾರ ಪ್ರಕಟಿಸಿರುವ ಹೊಸ ಎಸ್‌ಒಪಿ ಪ್ರಕಾರ ಇನ್ನು ಕ್ವಾರಂಟೈನ್‌ಗೆ ಒಳಗಾಗುವ ವ್ಯಕ್ತಿಗಳ ಮನೆಬಾಗಿಲಿಗೆ ಈ ಕುರಿತ ಭಿತ್ತಿಪತ್ರ ಅಂಟಿಸಲಾಗುತ್ತದೆ.

ಮನೆಯಲ್ಲೇ ಪ್ರತ್ಯೇಕವಾಸದ ವೇಳೆ ಅನುಸರಿಸಬೇಕಾದ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಅವರ ಚಲನವಲನದ ಬಗ್ಗೆ ನಿಗಾ ವಹಿಸುವ ಸಲುವಾಗಿಯೇ ಸಂಚಾರಿದಳಗಳನ್ನು (ಫ್ಲೈಯಿಂಗ್‌ ಸ್ಕ್ವಾಡ್‌) ರಚಿಸಲಾಗುತ್ತದೆ.

ಯಾರಿಗಾದರೂ ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಸೂಚಿಸಿದ್ದರೆ, ಈ ಬಗ್ಗೆ ಅಕ್ಕಪಕ್ಕದ ಎರಡು ಮನೆಯವರಿಗೆ ಅಥವಾ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರಿಗೆ (ಆರ್‌ಡಬ್ಲ್ಯುಎ) ಮಾಹಿತಿ ನೀಡಲಾಗುತ್ತದೆ. ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳು ಯಾರಾದರೂ ಪ್ರತ್ಯೇಕವಾಸಕ್ಕೆ ಒಳಗಾದರೆ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘಕ್ಕೆ ಮಾಹಿತಿ ನೀಡಲಾಗುತ್ತದೆ.

ವಾರ್ಡ್‌ ಮಟ್ಟದಲ್ಲಿ ರಚಿಸಿರುವ ವಿಶೇಷ ತಂಡವು ಪ್ರತ್ಯೇಕವಾಸದ ಕುರಿತ ಮೇಲ್ವಿಚಾರಣೆ ನೋಡಿಕೊಳ್ಳಲಿದೆ. ಪ್ರತ್ಯೇಕವಾಸಕ್ಕೆ ಸೂಚಿಸಿದವರ ಚಲನವಲನದ ಮೇಲೆ ಮೂವರು ಸದಸ್ಯರನ್ನು ಒಳಗೊಂಡ ಬೂತ್‌ಮಟ್ಟದ ಸಮಿತಿ ನಿಗಾ ಇಡಲಿದೆ. ಈ ತಂಡದಲ್ಲಿ ಆರ್‌ಡಬ್ಲ್ಯುಎ ಅಥವಾ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘದವರೂ ಸದಸ್ಯರಾಗಿರುತ್ತಾರೆ.

‘ಕೋವಿಡ್‌ 19 ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆಯೇ ಹೋಮ್‌ ಕ್ವಾರಂಟೈನ್‌ಗೆ ಒಳಗಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಾಗಿ ಅವರ ಮೇಲೆ ವಿಶೇಷ ನಿಗಾ ಇಡುವುದಕ್ಕೆ ಸಂಚಾರಿ ತಂಡಗಳನ್ನು ರಚಿಸಲು ಅನ್ಯ ಇಲಾಖೆಯ ಹಾಗೂ ಬಿಬಿಎಂಪಿಯ ಇತರ ವಿಭಾಗಗಳ ಸಿಬ್ಬಂದಿಯ ನೆರವನ್ನೂ ಪಡೆಯುತ್ತಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಎಚ್‌.ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ಆ್ಯಪ್‌ ಡೌನ್‌ಲೋಡ್‌ ಕಡ್ಡಾಯ
‘ಮನೆಯಲ್ಲೇ ಪ್ರತ್ಯೇಕವಾಸ ಅನುಭವಿಸುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯಸೇತು, ಆಪ್ತಮಿತ್ರ ಹಾಗೂ ಕ್ವಾರಂಟೈನ್‌ ವಾಚ್‌ ಆ್ಯಪ್‌ಗಳನ್ನು ಅಳವಡಿಸಿಕೊಳ್ಳಬೇಕು. ಪ್ರತ್ಯೇಕವಾಸದಲ್ಲಿರುವ ಹಿರಿಯ ನಾಗರಿಕರ ಅಥವಾ ಅನಾರೋಗ್ಯ ಪೀಡಿತ ವ್ಯಕ್ತಿಗಳ ದೇಹದ ಉಷ್ಣಾಂಶ, ಬೆರಳತುದಿಯ ರಕ್ತಪರಿಚಲನೆಯ ಆಕ್ಸಿಮೆಟ್ರಿ ವರದಿಯನ್ನು ಕ್ವಾರಂಟೈನ್‌ ವಾಚ್‌ ಆ್ಯಪ್‌ ಮೂಲಕ ನಿತ್ಯವೂ ಸ್ವಯಂ ದಾಖಲಿಸುವುದು ಕಡ್ಡಾಯ’ ಎಂದು ಡಾ.ವಿಜಯೇಂದ್ರ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು