ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ವೈಭವಕ್ಕೆ ಮರಳಿದ ‘ಹೊಸ ತೊಡಕು’

‘ಹೊಸ ತೊಡಕು’ ಹಬ್ಬ: ಮಾಂಸದಂಗಡಿಗಳ ಎದುರು ಮತ್ತೆ ಮಾರುದ್ದ ಸಾಲು
Last Updated 3 ಏಪ್ರಿಲ್ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದಾಗಿ ನಗರದಲ್ಲಿ ಕಳೆದೆರಡು ವರ್ಷ ಕ್ಷೀಣಿಸಿದ್ದ ಯುಗಾದಿಯ ‘ಹೊಸ ತೊಡಕು’ ಹಬ್ಬದ ಸಂಭ್ರಮ ಪುನಃ ಗರಿಗೆದರಿದೆ. ನಗರದ ಜನರು ಭಾನುವಾರ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಿದರು. ಮಾಂಸ ಖರೀದಿಗಾಗಿ ಅಂಗಡಿಗಳ ಎದುರು ಮುಂಜಾನೆಯಿಂದಲೇ ಗ್ರಾಹಕರು ಮುಗಿಬಿದ್ದರು.

ನಗರದ ಬಹುತೇಕ ಮಾಂಸದಂಗಡಿಗಳಲ್ಲಿ ಭಾನುವಾರ ನಸುಕಿನ 2 ಗಂಟೆಯಿಂದಲೇ ವ್ಯಾಪಾರ ಶುರುವಾಗಿತ್ತು. ಅಂಗಡಿ ಎದುರು ಸಾಲುಗಟ್ಟಿ ನಿಂತಿದ್ದ ಗ್ರಾಹಕರು ತಮ್ಮ ಸರದಿ ಬರುವವರೆಗೂ ಕಾದು ಮಾಂಸ ಖರೀದಿಸಿದರು.

ಕುರಿ, ಕೋಳಿ ಹಾಗೂ ಮೀನು ಮಾರಾಟ ಮಳಿಗೆಗಳ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದ ದೃಶ್ಯಗಳು ಕಂಡುಬಂದವು. ಬ್ಯಾಟರಾಯನಪುರ ಬಳಿಯ ಪಾಪಣ್ಣ ಮಾಂಸದಂಗಡಿ ಎದುರು ಉದ್ದನೆಯ ಸರದಿ ಸಾಲು ಕಂಡುಬಂತು.

ಹೊಸ ತೊಡಕು ಪ್ರಯುಕ್ತ ಅಂಗಡಿ ಮಾಲೀಕರು, ಹೆಚ್ಚಿನ ಕುರಿ ಹಾಗೂ ಕೋಳಿಗಳನ್ನು ತರಿಸಿಕೊಂಡಿ
ದ್ದರು. ಶನಿವಾರ ತಡರಾತ್ರಿಯಿಂದಲೇ ಕೆಲಸಗಾರರು, ಮಾಂಸ ಸಿದ್ಧಪಡಿಸಿಕೊಡುವ ಕಾರ್ಯದಲ್ಲಿ ನಿರತರಾಗಿದ್ದರು. ಭಾನುವಾರ ಮುಂಜಾನೆಯಿಂದಲೇ ಸರದಿಯಲ್ಲಿ ನಿಂತ ಗ್ರಾಹಕರಿಗೆ ಮಾಂಸವನ್ನು ತಲುಪಿಸಿದರು.

‘ಮಧ್ಯಾಹ್ನವಾದರೂ ಜನರ ಸರದಿ ಕಡಿಮೆ ಆಗಿರಲಿಲ್ಲ. ಕೆಲ ವ್ಯಾಪಾರಿಗಳು, ಕಳೆದ ವರ್ಷದ ಲೆಕ್ಕದಲ್ಲಿ ಕುರಿಗಳನ್ನು ತರಿಸಿದ್ದರು. ಆದರೆ, ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದರಿಂದ ಮಧ್ಯಾಹ್ನವೂ ಕುರಿಗಳ ಮಾಂಸವನ್ನು ಸಿದ್ಧಪಡಿಸಿಕೊಡಬೇಕಾಯಿತು’ ಎಂದು ಅಂಗಡಿಯೊಂದರ ಮಾಲೀಕರು ಹೇಳಿದರು.

ಕೆಲದಿನಗಳಿಂದ ಹಲಾಲ್–ಜಟ್ಕಾ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಆದರೆ, ಬಹುತೇಕರು ಅದರ ಬಗ್ಗೆ ಅಂಗಡಿಗಳಲ್ಲಿ ವಿಚಾರಿಸಲಿಲ್ಲ. ಗುಣಮಟ್ಟದ ಮಾಂಸ ಖರೀದಿಸಿ ಮನೆಯತ್ತ ಹೆಜ್ಜೆ ಹಾಕಿದ್ದು ಕಂಡುಬಂತು. ಅಂಗಡಿ ಎದುರು ಸರದಿ ಹೆಚ್ಚಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಶಿವಾಜಿನಗರದಲ್ಲೂ ವ್ಯಾಪಾರ ಜೋರು: ಶಿವಾಜಿನಗರದ ಮಾಂಸದಂಗಡಿಗಳಲ್ಲೂ ವ್ಯಾಪಾರ ಜೋರಾಗಿತ್ತು. ಕುರಿ ಹಾಗೂ ಕೋಳಿ ಮಾಂಸದಂಗಡಿಗಳಿಗೆ ಬಂದಿದ್ದ ಜನ, ಮಾಂಸ ಖರೀದಿಸಿಕೊಂಡು ಹೋದರು.

‘15 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದು, ಗುಣಮಟ್ಟದ ಮಾಂಸ ಮಾರುತ್ತಿದ್ದೇವೆ. ಸಹೋದರರಂತಿರುವ ಹಿಂದೂಗಳೇ ನಮಗೆ ಕಾಯಂ ಗ್ರಾಹಕರು. ಭಾನುವಾರವೂ ಹೆಚ್ಚಿನ ವ್ಯಾಪಾರ ಆಯಿತು’ ಎಂದು ಶಿವಾಜಿನಗರದ ಇಮ್ರಾನ್ ಹೇಳಿದರು.

ಹಿಂದವೀ ಮೀಟ್‌ ಮಾರ್ಟ್ ಜಟ್ಕಾ

‘ಹಲಾಲ್ ಮಾಂಸ ಧಿಕ್ಕರಿಸಿ, ಜಟ್ಕಾ ಮಾಂಸ ಖರೀದಿಸಿ’ ಎಂದು ಬಜರಂಗದಳದ ಕಾರ್ಯಕರ್ತರು ಅಭಿಯಾನ ಶುರು ಮಾಡಿದ್ದರು. ಇದನ್ನು ಬೆಂಬಲಿಸಿ ಉಲ್ಲಾಳದಲ್ಲಿ 'ಹಿಂದವೀ ಮೀಟ್‌ ಮಾರ್ಟ್ ಜಟ್ಕಾ' ಮಳಿಗೆಯಲ್ಲಿ ಭಾನುವಾರ ಮಾಂಸ ಮಾರಾಟ ಮಾಡಲಾಯಿತು.

ಮಳಿಗೆಗೆ ಬೆಳಿಗ್ಗೆ ಬಂದಿದ್ದ ಕೆಲವರು, ಸರದಿಯಲ್ಲಿ ನಿಂತು ಮಾಂಸ ಖರೀದಿಸಿದ್ದರು. ಕೆಲವರು, ಕೇಸರಿ ಶಾಲು ಧರಿಸಿ ಅಭಿಯಾನಕ್ಕೆ ಬೆಂಬಲವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT