ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಹೋಟೆಲ್‍ಗಳಲ್ಲಿ ಶೇ 15ರಷ್ಟು ಗ್ರಾಹಕರ ಹೆಚ್ಚಳ

Last Updated 10 ಜೂನ್ 2020, 19:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಮುಖ ಹೋಟೆಲ್‍ಗಳಲ್ಲಿ ಗ್ರಾಹಕರ ಸಂಖ್ಯೆ ಬುಧವಾರ ಶೇ 15ರಷ್ಟು ಹೆಚ್ಚಳವಾಗಿದೆ.

ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಹೋಟೆಲ್‍ಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿದ್ದರೂ ಬೆರಳೆಣಿಕೆಯಷ್ಟು ಗ್ರಾಹಕರು ಮೊದಲೆರಡು ದಿನ ಹೋಟೆಲ್‌ಗಳಿಗೆ ಬಂದಿದ್ದರು.

'ಸೋಮವಾರ 350 ಗ್ರಾಹಕರು ಹೋಟೆಲ್‍ನಲ್ಲಿ ಆಹಾರ ಸವಿದಿದ್ದಾರೆ. ಬುಧವಾರ 500ಕ್ಕೂ ಹೆಚ್ಚು ಗ್ರಾಹಕರು ಬಂದಿದ್ದು, ಶೇ 15ರಷ್ಟು ಚೇತರಿಕೆ ಕಂಡಿದೆ. ಮೊದಲಿಗೆ ಹೋಲಿಸಿದರೆ ಶೇ 60ರಷ್ಟು ವ್ಯಾಪಾರ ನಡೆಯುತ್ತಿದೆ. ಪಾರ್ಸೆಲ್ ಸೇವೆಯೂ ಚಾಲ್ತಿಯಲ್ಲಿದೆ. ದಿನದಿಂದ ದಿನಕ್ಕೆ ಗ್ರಾಹಕರು ಹೆಚ್ಚುವ ನಿರೀಕ್ಷೆ ಇದೆ' ಎಂದು ಕೃಷ್ಣ ಗ್ರ್ಯಾಂಡ್ ಹೋಟೆಲ್ ಮಾಲೀಕ ಎಸ್.ಪಿ.ಕೃಷ್ಣರಾಜ್ ತಿಳಿಸಿದರು.

'ಹೋಟೆಲ್‍ಗೆ ಬರುತ್ತಿರುವವರಲ್ಲಿ ಕಾಯಂ ಗ್ರಾಹಕರೇ ಹೆಚ್ಚು. ಹೊಸ ಗ್ರಾಹಕರು ಹೆಚ್ಚಾಗಿ ಕಂಡು ಬರುತ್ತಿಲ್ಲ. ಆಗ ಹೋಟೆಲ್ ತುಂಬಿರುತ್ತಿತ್ತು. ಈಗ ಬೆರಳೆಣಿಕೆಯಷ್ಟು ಗ್ರಾಹಕರು ಬರುತ್ತಿದ್ದಾರೆ. ಸೋಮವಾರ 250 ಗ್ರಾಹಕರು ಬಂದರು. ಗ್ರಾಹಕರ ಸಂಖ್ಯೆ ಬುಧವಾರ 500ಕ್ಕೇರಿದೆ. ಲಾಕ್‍ಡೌನ್‍ಗೂ ಮುನ್ನ ದಿನಕ್ಕೆ ಸುಮಾರು ₹50 ಸಾವಿರದಿಂದ ₹1 ಲಕ್ಷದವರೆಗೆ ವಹಿವಾಟು ನಡೆಯುತ್ತಿತ್ತು. ಬುಧವಾರ ಕೇವಲ ₹28 ಸಾವಿರ ವಹಿವಾಟು ನಡೆದಿದೆ' ಎಂದು ಎಂ.ಜಿ.ರಸ್ತೆಯ ವಾಸುದೇವ್ ಅಡಿಗಾಸ್ ಹೋಟೆಲ್‌ನ ಮಹೇಶ್ ಮಾಹಿತಿ ನೀಡಿದರು.

'ಹೋಟೆಲ್‍ನಲ್ಲಿ ತಣ್ಣನೆಯ ಆಹಾರ, ಪಾನೀಯಗಳ ಸೇವೆ ನಿಲ್ಲಿಸಿದ್ದೇವೆ. ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಶೈಲಿಯ ಆಹಾರಗಳನ್ನೇ ಹೆಚ್ಚಾಗಿ ತಯಾರಿಸುತ್ತಿದ್ದೇವೆ. ಗ್ರಾಹಕರಿಂದ ಉತ್ತಮವಾದ ಸ್ಪಂದನೆ ವ್ಯಕ್ತವಾಗುತ್ತಿದೆ.ಮೊದಲಿನಂತೆ ಗ್ರಾಹಕರನ್ನು ಕಾಣಲು ಒಂದು ವರ್ಷ ಬೇಕಾಗಬಹುದು' ಎನ್ನುತ್ತಾರೆ ಜಯನಗರದ ಮಯ್ಯಾಸ್‌ ರೆಸ್ಟೋರೆಂಟ್ ಪ್ರೈವೇಟ್ ಲಿಮಿಟೆಡ್‍ನ ಸಂತೋಷ್ ಶೆಟ್ಟಿ.

ಮಲ್ಲೇಶ್ವರದ ಮಾವಳ್ಳಿ ಟಿಫನ್ ರೂಮ್ಸ್ (ಎಂಟಿಆರ್) ಶಾಖಾ ವ್ಯವಸ್ಥಾಪಕ ಲೋಹಿತ್,' ಸಾಮಾನ್ಯ ದಿನಗಳಲ್ಲಿ ದಿನಕ್ಕೆ ಗರಿಷ್ಠ 800 ಮಂದಿ ಬರುತ್ತಿದ್ದರು. ಎರಡೂ ದಿನಗಳು 200 ಮಂದಿ ಗ್ರಾಹಕರು ಆಹಾರ ಸವಿದಿದ್ದಾರೆ. ಮೂರನೇ ದಿನದ ವೇಳೆಗೆ ಗ್ರಾಹಕರ ಸಂಖ್ಯೆ 600ಕ್ಕೂ ಹೆಚ್ಚು ದಾಟಿದೆ. ಇದರಿಂದ ವ್ಯಾಪಾರ ಚೇತರಿಕೆ ಕಾಣುತ್ತಿದೆ. ತಿಂಗಳಾಂತ್ಯದ ವೇಳೆಗೆ ಗ್ರಾಹಕರು ಹೆಚ್ಚಾಗಲಿದ್ದಾರೆ' ಎಂದರು.

ಪಾರ್ಸೆಲ್ ಸೇವೆ ಇಳಿಮುಖ
‘ಹೋಟೆಲ್ ಆರಂಭಗೊಂಡರೂ ಗ್ರಾಹಕರು ಇಲ್ಲೇ ಕೂತು ಆಹಾರ ಸೇವಿಸಲು ಹಿಂದೇಟು ಹಾಕಿ, ಪಾರ್ಸೆಲ್ ಕೊಂಡೊಯ್ಯುತ್ತಿದ್ದರು. ಆಹಾರ ಸೇವೆಯಲ್ಲಿ ಶೇ 25ರಷ್ಟು ಪಾರ್ಸೆಲ್ ಸೇವೆ ನಡೆಯುತ್ತಿತ್ತು. ಮಂಗಳವಾರದಿಂದ ಹೋಟೆಲ್‍ನಲ್ಲೇ ಆಹಾರ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ಹೋಟೆಲ್ ಮಾಲೀಕ ಕೃಷ್ಣರಾಜ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT