ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆ: ವ್ಯಾಜ್ಯ ಇತ್ಯರ್ಥಕ್ಕೆ ‘ಸಮಾಲೋಚನೆ ಅದಾಲತ್’

Published 14 ಜೂನ್ 2023, 18:38 IST
Last Updated 14 ಜೂನ್ 2023, 18:38 IST
ಅಕ್ಷರ ಗಾತ್ರ

ಬೆಂಗಳೂರು: ಸೂರ್ಯ ನಗರ ಯೋಜನೆ ಸೇರಿದಂತೆ ಗೃಹಮಂಡಳಿಯ 10 ಯೋಜನೆಗಳಿಗೆ ವೇಗ ನೀಡಲು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರು, ಭೂಮಾಲೀಕರೊಂದಿಗೆ ‘ಸಮಾಲೋಚನೆ ಅದಾಲತ್‌’ ನಡೆಸಲಾಗುವುದು ಎಂದು ವಸತಿ ಸಚಿವ ಜಮೀರ್‌ ಅಹಮದ್‌ಖಾನ್‌ ತಿಳಿಸಿದರು.

ಕರ್ನಾಟಕ ಗೃಹ ಮಂಡಳಿಯಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಮಾತನಾಡಿದರು.

ಸೂರ್ಯನಗರ ಯೋಜನೆ ಸೇರಿದ ಯೋಜನೆಗಳಿಗೆ 4,615 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಪೈಕಿ ಸೂರ್ಯ ನಗರ ನಾಲ್ಕನೇ ಹಂತದ 700 ಎಕರೆ ಸೇರಿದಂತೆ ಒಟ್ಟು ಒಂದು ಸಾವಿರ ಎಕರೆಗೆ ಸಂಬಂಧಿಸಿದ ವ್ಯಾಜ್ಯದಿಂದ ಯೋಜನೆಗಳಿಗೆ ಗ್ರಹಣ ಹಿಡಿದಂತಾಗಿದೆ. ಹೀಗಾಗಿ ರೈತರು ಹಾಗೂ ಜಮೀನು ಮಾಲೀಕರ ಜತೆ ಸಮಾಲೋಚನೆ ನಡೆಸಿ ಇತ್ಯರ್ಥ ಪಡಿಸಿ ಯೋಜನೆಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಮೀನು ಸ್ವಾಧೀನ ಸೇರಿ ನ್ಯಾಯಾಲಯಗಳಲ್ಲಿ ಇರುವ ಪ್ರಕರಣ ವರ್ಷಗಟ್ಟಲೆ ನಡೆಯುತ್ತಿದೆ. ಇದಕ್ಕೆ ಕಾರಣ ಏನು ಎಲ್ಲಿ ಲೋಪ ಆಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಲು ಕಾನೂನು ವಿಭಾಗದ ಜತೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯದ ಹಲವೆಡೆ ಗೃಹ ಮಂಡಳಿ ವತಿಯಿಂದ ರಚಿಸಿರುವ ಬಡಾವಣೆಗಳಲ್ಲಿ ಅಗತ್ಯವಾದರೆ ಕೆಲವು ರಿಯಾಯಿತಿ ಸಹ ನೀಡಿ ಗೃಹ ಮಂಡಳಿ ನಿವೇಶನ, ಮನೆಗಳಿಗೆ ಬೇಡಿಕೆ ಬರುವಂತೆ ಮಾಡಲಾಗುವುದು. ಸರ್ಕಾರಿ ನೌಕರರ ಸಂಘ ಸೇರಿದಂತೆ ಸಂಘ ಸಂಸ್ಥೆಗಳಿಗೆ ಸಗಟು ಹಂಚಿಕೆ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಗೃಹಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯಡಿ ಅನುಷ್ಠಾನದಲ್ಲಿರುವ ಯೋಜನೆ, ಮುಂದಿನ ಹೊಸ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಇರುವ ಅನುದಾನದ ಬೇಡಿಕೆ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಲು ಸೂಚಿಸಿದರು.

ಕೇಂದ್ರದಿಂದ ಬರಬೇಕಿರುವ ಅನುದಾನದ ಮಾಹಿತಿ ನೀಡಿ, ಸದ್ಯದಲ್ಲೇ ದೆಹಲಿಗೆ ತೆರಳಿ ಸಂಬಂಧ ಪಟ್ಟ ಸಚಿವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT