ಸೋಮವಾರ, ಮಾರ್ಚ್ 1, 2021
29 °C

ನಡುರಸ್ತೆಯಲ್ಲೇ ಕುಡಿದು ತೂರಾಡಿದ ‘ಹುಚ್ಚ ವೆಂಕಟ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಹುಚ್ಚ ವೆಂಕಟ್ ನಡುರಸ್ತೆಯಲ್ಲೇ ಕುಡಿದು ತೂರಾಡುತ್ತ ಬ್ಯಾಡರಹಳ್ಳಿ ಮುಖ್ಯರಸ್ತೆಯ ಬೇಕರಿಯೊಂದಕ್ಕೆ ನುಗ್ಗಿ ರಂಪಾಟ ಮಾಡಿರುವ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿ ಕಳುಹಿಸಿದ್ದಾರೆ.

ಬುಧವಾರ ಮಧ್ಯಾಹ್ನ ಬಾಟಲಿ ಹಿಡಿದು ಜ್ಞಾನಭಾರತಿ ಕ್ಯಾಂಪಸ್ ಹಾಗೂ ಉಲ್ಲಾಳ ಮುಖ್ಯರಸ್ತೆಯಲ್ಲಿ ತಿರುಗಾಡಿದ್ದ ವೆಂಕಟ್, ಗುರುವಾರ ಬೆಳಿಗ್ಗೆ ಬ್ಯಾಡರಹಳ್ಳಿ ಮುಖ್ಯರಸ್ತೆಗೆ ಬಂದಿದ್ದರು. ಕೆಲ ಯುವಕರು ಅವರಿಗೆ ಜೈಕಾರ ಕೂಗುತ್ತ ಸೆಲ್ಫಿಯನ್ನೂ ತೆಗೆದುಕೊಂಡರು.

ನಂತರ ಮೊಬೈಲ್‌ನಲ್ಲಿ ‘ಹುಚ್ಚ ವೆಂಕಟ್ಟು ನಾನು... ನನ್ನನ್ನು ಮುಟ್ಟೋರು ಯಾರು...’ ಎಂಬ ಹಾಡು ಹಾಕಿಕೊಂಡು ಬೇಕರಿ ಹತ್ತಿರ ತೆರಳಿದ ಅವರು, ಅಲ್ಲಿ ನಿಂತಿದ್ದ ಯುವಕನಿಗೆ ಕೋಲಿನಿಂದ ಹೊಡೆದಿದ್ದಾರೆ. ‘ನನ್ನ ಎದುರು ನಿಲ್ಲುವ ಧೈರ್ಯ ಇದಿಯಾ ನಿಂಗೆ. ಮಂಡಿಯೂರಿ ಕುತ್ಕೊಳೋ’ ಎಂದು ಗದರಿದ್ದಾರೆ. ಆತ ಭಯಬಿದ್ದು ಕುಳಿತುಕೊಂಡ ಬಳಿಕ, ಬೇಕರಿ ಮಾಲೀಕನ ಕಡೆಗೆ ಹೋಗಿದ್ದಾರೆ.

‘ಅಂಗಡಿ ಬಾಗಿಲು ಹಾಕೋ’ ಎನ್ನುತ್ತಾ ಅವರಿಗೂ ಮನಸೋ ಇಚ್ಛೆ ಹೊಡೆದಿದ್ದಾರೆ. ಮಾಲೀಕರು ತಪ್ಪಿಸಿಕೊಂಡು ಓಡಿದಾಗ, ಅಟ್ಟಿಸಿಕೊಂಡು ಹೋಗಿ ರಂಪಾಟ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಪೊಲೀಸರು, ಅವರನ್ನು ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿದ್ದಾರೆ.

‘ಯುವಕ ದೂರು ಕೊಡಲು ನಿರಾಕರಿಸಿದ್ದರಿಂದ, ಸಾಮಾನ್ಯ ಪ್ರಕರಣ (ಎನ್‌ಸಿಆರ್) ಎಂದು ಪರಿಗಣಿಸಿ ಬಿಟ್ಟು ಕಳುಹಿಸಿದ್ದೇವೆ’ ಎಂದು ಬ್ಯಾಡರಹಳ್ಳಿ ಪೊಲೀಸರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು